

ಬಳ್ಳಾರಿ : ಜಿಲ್ಲೆಯಲ್ಲಿ ರಕ್ತದೊತ್ತಡ, ರಕ್ತಹೀನತೆ ಕೊರತೆ ಕಂಡುಬರುವ ಗರ್ಭಿಣಿಯರನ್ನು ಗುರ್ತಿಸಿ ತಪಾಸಣೆಗೆ ಆದ್ಯತೆ ನೀಡಬೇಕು ಎಂದು ಡಿಎಚ್‌ಒ ಡಾ. ವೈ. ರಮೇಶಬಾಬು ಹೇಳಿದರು.
ನಗರದ ಡಿಎಚ್‌ಒ ಕಚೇರಿಯಲ್ಲಿ ತಾಯಿ ಮರಣ ತಡೆ ಕುರಿತು ಮಂಗಳವಾರ ನಡೆದ ಬಿಮ್ಸ್ ಮತ್ತು ಜಿಲ್ಲಾಸ್ಪತ್ರೆಯ ತಜ್ಞವೈದರ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು. ಗರ್ಭಿಣಿಯೆಂದು ಗುರ್ತಿಸಿದ ದಿನದಿಂದ ರಕ್ತದೊತ್ತಡ, ತೂಕ, ಹೆಚ್‌ಬಿ ಪ್ರಮಾಣ, ಮೂತ್ರ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಬೇಕು. ರಕ್ತದೊತ್ತಡ ಪರೀಕ್ಷೆ ಕೈಗೊಂಡ ನಂತರ ಕಂಡುಬರುವ ವ್ಯತ್ಯಾಸ ಮರು ಪರಿಶೀಲಿಸಬೇಕು. ರಕ್ತಹೀನತೆ ಕಂಡುಬಂದಲ್ಲಿ ಸ್ಥಳೀಯವಾಗಿ ಐಎಫ್‌ಎ ಮಾತ್ರೆ, ಐರನ್ ಸುಕ್ರೋಸ್‌ಗಳನ್ನು ಹಾಕಿಸಬೇಕು. ಸುಧಾರಣೆಯಾಗದಿದ್ದಲ್ಲಿ ತಜ್ಣರ ಬಳಿ ಟೆಲಿ ಕನ್ಸಲ್ಟನ್ಸಿ ಮಾಡಿಸಲು ಕ್ರಮವಹಿಸಿ, ಇಲ್ಲವೇ ತಜ್ಞರನ್ನು ನೇರವಾಗಿ ಸಂಪರ್ಕಿಸಿ ಅಗತ್ಯವಿದ್ದಲ್ಲಿ ಸ್ಕಾೃನ್ ಮಾಡಿಸಬೇಕು ಎಂದರು.
ವಿಮ್ಸ್ ಪ್ರಸೂತಿ ವಿಭಾಗದ ಮುಖಸ್ಥ ಡಾ.ವಿರೇಂದ್ರ ಕುಮಾರ್ ಮಾತನಾಡಿ, ಹಬ್ಬ, ಜಾತ್ರೆ, ಊರ ದೇವರ ಪೂಜೆ, ಮುಂತಾದ ಆಚರಣೆಯ ಮಾಡುವಾಗ ಗರ್ಭಿಣಿಯ ಸಕಾಲದಲ್ಲಿ ಆಗಬೇಕಾದ ತಪಾಸಣೆಗೆ ಅಡಚಣೆಯಾಗದಂತೆ ಪಾಲಕರ ಮನವೊಲಿಸಬೇಕು. ಗಂಡಾಂತರ ಗರ್ಭಿಣಿಯರ ಮನೆ ಭೇಟಿ ಹಾಗೂ ಆರೋಗ್ಯದ ಸ್ಥಿತಿ ಕುರಿತು ಪ್ರತಿವಾರ ಚರ್ಚಿಸಬೇಕು. ಹೆರಿಗೆ ವಿಷಯವನ್ನು ಆದ್ಯತೆ ಇಟ್ಟುಕೊಂಡು ಸ್ಥಳೀಯ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಮನ್ವಯ ಸಭೆ ಕೈಗೊಳ್ಳಬೇಕು ಎಂದರು.