ಗರ್ಭಿಣಿಯ ನೆರವಿಗೆ ಧಾವಿಸಿದ ಸ್ಥಳೀಯರು

ಗರ್ಭಿಣಿಯ ನೆರವಿಗೆ ಧಾವಿಸಿದ ಸ್ಥಳೀಯರು
Published on


ಅರಸೀಕೆರೆ: ನಗರದ ಕಾಳನಕೊಪ್ಪಲು ಬಡಾವಣೆಗೆ ಹೊಂದಿಕೊಂಡಂತಿರುವ ಖಾಸಗಿ ಲೇಔಟ್ ರಸ್ತೆಯ ಗುಂಡಿಯಲ್ಲಿ ಸಿಲುಕಿದ್ದ ಆಂಬುಲೆನ್ಸ್ ಹೊರತೆಗೆದು ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿಯ ನೆರವಿಗೆ ಧಾವಿಸುವ ಮೂಲಕ ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ.

ತಾಲೂಕಿನ ಹಂದ್ರಾಳು ಗ್ರಾಮದ ಕವನ ಎನ್ನುವವರಿಗೆ ತೀವ್ರ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕುಟುಂಬ ಸದಸ್ಯರು 108 ತುರ್ತು ವಾಹನಕ್ಕೆ ಕರೆ ಮಾಡಿದ್ದಾರೆ. ಕೆಲವೇ ಹೊತ್ತಿನಲ್ಲಿ ಗ್ರಾಮಕ್ಕೆ ಆಗಮಿಸಿದ ಆಂಬುಲೆನ್ಸ್ ಚಾಲಕ ಗರ್ಭಿಣಿಯನ್ನು ಬೈರಾಂಬುಧಿ ಮಾರ್ಗವಾಗಿ ಕರೆತಂದಿದ್ದಾನೆ.ಆದರೆ ಕಾಳನಕೊಪ್ಪಲು ಬಡಾವಣೆ ಬಳಿ ಕೆರೆ ಏರಿ ಒಡೆದಿರುವ ಹಿನ್ನಲೆಯಲ್ಲಿ ಖಾಸಗಿ ಲೇಔಟ್ ಮೂಲಕ ತೆರಳಲು ಮುಂದಾಗಿದ್ದು ವಾಹನ ಕೆಸರಿನ ಗುಂಡಿಯಲ್ಲಿ ಸಿಲುಕಿದೆ.ಸಂಕಷ್ಟ ಮನಗಂಡು ತಕ್ಷಣವೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಟ್ರ್ಯಾಕ್ಟರ್ ಬಳಸಿ ಆಂಬುಲೆನ್ಸ್ ಹೊರತೆಗೆದು ಸರ್ಕಾರಿ ಜೆ.ಸಿ.ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.ಚೊಚ್ಚಲ ಹೆರಿಗೆಗೆ ಬಂದಿದ್ದ ಕವನ ನೆರವಿಗೆ ಧಾವಿಸಿದ ನಾಗರಿಕರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಆಸ್ಪತ್ರೆಗೆ ಬಂದ ಸ್ವಲ್ಪ ಸಮಯದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ.

ಆಕ್ರೋಶ:
ಕೆರೆ ಕೋಡಿ ಒಡೆದು ಎರಡು ತಿಂಗಳು ಕಳೆದಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಜಾಣ ನಿದ್ರೆಗೆ ಜಾರಿದ್ದಾರೆ. ರಸ್ತೆ ಹಾಳಾಗಿದ್ದು ಪ್ರಯಾಣಿಕರ ಸಂಕಷ್ಟ ಹೇಳತೀರದಾಗಿದೆ. ಕೋಡಿ ಒಡೆಯುವಾಗ ತೋರಿದ ಆತುರ ಈಗೇಕೆ ತೋರುತ್ತಿಲ್ಲ. ಮಳೆ ನಿಂತರೂ ಹನಿ ನಿಂತಿಲ್ಲ ಎನ್ನುವಂತೆ ತೊಂದರೆ ಅನುಭವಿಸುತ್ತಿದ್ದೇವೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣವೇ ಇತ್ತ ಗಮನಹರಿಸಿ ಲೋಪ ಸರಿಪಡಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಪ್ರಯಾಣಿಕರು ಹಾಗೂ ಕಾಳನಕೊಪ್ಪಲು ನಿವಾಸಿಗಳು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net