ಗರ್ಭಿಣಿ, ಮಕ್ಕಳಿಗೆ ಫ್ಲೋರೈಡ್ ನೀರೇ ಗತಿ!

15Naregal2
Published on

ನರೇಗಲ್ಲ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು ಸಿಗದ ಕಾರಣ ಗರ್ಭಿಣಿಯರು, ಮಕ್ಕಳು ಹಾಗೂ ಸಿಬ್ಬಂದಿಗೆ ಫ್ಲೋರೈಡ್​ಯುುಕ್ತ ನೀರೇ ಗತಿಯಾಗಿದೆ.

ಪಪಂ ವ್ಯಾಪ್ತಿಯ ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ ಗ್ರಾಮಗಳಲ್ಲಿ ಒಟ್ಟು 17 ಅಂಗನವಾಡಿ ಕೇಂದ್ರಗಳಿವೆ. ಅಧಿಕಾರಿಗಳ ಜಾಣ ಕುರುಡುತನದಿಂದ 8 ತಿಂಗಳಿನಿಂದ ಯಾವುದೇ ಅಂಗನವಾಡಿ ಕೇಂದ್ರಕ್ಕೂ ಶುದ್ಧ ಕುಡಿಯುವ ನೀರು ಪೊರೈಕೆಯಾಗಿಲ್ಲ. ಗರ್ಭಿಣಿಯರು, ಮಕ್ಕಳು, ಮನೆಯಿಂದಲೇ ಶುದ್ಧ ನೀರು ತರಬೇಕಾದ ಅನಿವಾರ್ಯತೆ ಉಂಟಾಗಿದೆ.

ಎಲ್ಲ ಅಂಗನವಾಡಿಗಳಿಗೆ ಟಂಟಂ ವಾಹನದ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, 8 ತಿಂಗಳ ಹಿಂದೆ ಪ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾದ ಕಾರಣ ನೀರು ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಆದರೆ, ನೀರಿನ ಸಮಸ್ಯೆ ನಿವಾರಣೆಯಾದರೂ ಅಂಗನವಾಡಿಗಳಿಗೆ ಶುದ್ಧ ನೀರು ಪೂರೈಸುವುದನ್ನು ಪ.ಪಂ. ಅಧಿಕಾರಿಗಳು ಮರೆತಿದ್ದಾರೆ. ಪಟ್ಟಣದ ಶುದ್ಧ ಕುಡಿಯುವ ನೀರಿನ ಘಟಕಗಳು ಕೂಡ ಸದಾ ಬಾಗಿಲು ಮುಚ್ಚಿರುವುದರಿಂದ ಶುದ್ಧ ನೀರಿಗಾಗಿ ಹಾತೊರೆಯುವಂತಾಗಿದೆ.

ಕಟ್ಟಡ ಸಮಸ್ಯೆ: 17 ಅಂಗನವಾಡಿ ಕೇಂದ್ರದಲ್ಲಿ 10ಕ್ಕೆ ಮಾತ್ರ ಸ್ವಂತ ಕಟ್ಟಡವಿದ್ದು, ಇನ್ನು 7 ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. 2 ಕೇಂದ್ರಗಳು ಸರ್ಕಾರಿ ಶಾಲೆಗಳ ಕೊಠಡಿಯಲ್ಲಿ ಹಾಗೂ 5 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಂಗನವಾಡಿ ಕೇಂದ್ರಗಳಿಗೆ ನಿವೇಶನ ನೀಡಬೇಕಾದ ಪ.ಪಂ. ಅಧಿಕಾರಿಗಳು ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ಇದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಹೆಸರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳು: ಪಟ್ಟಣದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಲಕ್ಷಾಂತರ ರೂ. ಖರ್ಚು ಮಾಡಿ ಪ.ಪಂ. ವ್ಯಾಪ್ತಿಯಲ್ಲಿ 10 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಅದರಲ್ಲಿ 3 ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 7 ಘಟಕಗಳು ನಿರ್ವಹಣೆ ಕೊರತೆಯಿಂದ ಯಂತ್ರೋಪಕರಣಗಳು ಹಾಳಾಗಿದ್ದು, ಘಟಕಗಳು ಬೀಗ ಹಾಕಿ ವರ್ಷಗಳೇ ಕಳೆದಿವೆ. ವ್ಯಾಪ್ತಿಯ 10 ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಕೈಗೊಂಡು, ಅವುಗಳನ್ನು ಖಾಸಗಿಯವರಿಗೆ ಟೆಂಡರ್ ನೀಡುವ ಮೂಲಕ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ನರೇಗಲ್ಲ ವಲಯದ ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಅದರ ಬಗ್ಗೆ ಮೇಲ್ವಿಚಾರಕಿಯರನ್ನು ವಿಚಾರಿಸುತ್ತೇನೆ. ಪ.ಪಂ. ಅಧಿಕಾರಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಮನವಿ ಸಲ್ಲಿಸಲಾಗುತ್ತದೆ. | ನಾಗನಗೌಡ ಪಾಟೀಲ, ಸಿಡಿಪಿಒ ರೋಣ

ಸಮಸ್ಯೆ ಬಗೆಹರಿಸಿಲ್ಲ!: ಮೊದಲೇ ಬೇಸಿಗೆ ಪ್ರಾರಂಭವಾಗಿದೆ. ಮಕ್ಕಳಿಗೆ ಸಾಕಷ್ಟು ನೀರಿನ ಅವಶ್ಯಕತೆ ಇದೆ. ಆದರೆ, 8 ತಿಂಗಳಿನಿಂದ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಪ.ಪಂ. ಅಧಿಕಾರಿಗಳಿಗೆ ಹಲವಾರು ಸಲ ಮೌಖಿಕವಾಗಿ ಮನವಿ ಮಾಡಲಾಗಿದೆ. ಜ. 26ರಂದು ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಪ.ಪಂ ಮುಖ್ಯಾಧಿಕಾರಿಗೆ ಈ ಬಗ್ಗೆ ತಿಳಿಸಲಾಗಿದೆ. ಒಂದು ವಾರದಲ್ಲಿ ಶುದ್ಧ ನೀರು ಪೂರೈಸಲಾಗುತ್ತದೆ ಎಂದು ಹೇಳಿದ್ದರು. ಆದರೆ, ಇನ್ನೂ ಸಮಸ್ಯೆ ಬಗೆಹರಿಸಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಂಗನವಾಡಿ ಕಾರ್ಯಕರ್ತೆರು.

ಅಂಗನವಾಡಿ ಕೇಂದ್ರಗಳಿಗೆ ಪ.ಪಂ. ವತಿಯಿಂದ ನಳದ ಸಂಪರ್ಕ ನೀಡಬಹುದು. ಆದರೆ, ಶುದ್ಧ ಕುಡಿಯುವ ನೀರು ಪೂರೈಕೆ ನಮಗೆ ಸಂಬಂಧಿಸಿದ್ದಲ್ಲ. ಅದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪೂರೈಸಬೇಕು. ಪ.ಪಂ. ವ್ಯಾಪ್ತಿಯ ಯಾವ ಯಾವ ಕೇಂದ್ರಗಳಿಗೂ ಸ್ವಂತ ಕಟ್ಟಡಗಳಿಲ್ಲ ಎಂಬುದರ ಬಗ್ಗೆ ಮಾಹಿತಿ ಪಡೆದು, ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. | ಎಂ.ಎ. ನೂರುಲ್ಲಾಖಾನ್, ಪ.ಪಂ. ಮುಖ್ಯಾಧಿಕಾರಿ, ನರೇಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net