ಗರ್ಭಿಣಿ, ಬಾಣಂತಿಯರಿಗೆ ಕೊಳೆತ ಮೊಟ್ಟೆ ವಿತರಣೆ

12Kush03
Published on

ಕುಶಾಲನಗರ: ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿಗಳ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರಿಗೆ ಕೊಳೆತ ಹಾಗೂ ವಾಸನೆಯಿಂದ ಕೂಡಿದ ಕೋಳಿ ಮೊಟ್ಟೆಗಳನ್ನು ವಿತರಿಸಿದ್ದು, ಈ ಕುರಿತು ಕೂಡಿಗೆ ಭಾಗದ ಹಲವು ಫಲಾನುಭವಿ ಮಹಿಳೆಯರು ದೂರಿದ್ದಾರೆ.


ಕೂಡಿಗೆ ಬಳಿಯ ಬಸವನತ್ತೂರು ಅಂಗನವಾಡಿ ಕೇಂದ್ರದಲ್ಲಿ ಕೂಡಿಗೆಯ ಬಾಣಂತಿ ಗೀತಾ ಎಂಬುವವರಿಗೆ ನೀಡಿದ್ದ ಮೊಟ್ಟೆಗಳನ್ನು ಬೇಯಿಸಿ ನೋಡಿದಾಗ ಅವುಗಳು ಕಪ್ಪು ಬಣ್ಣಕ್ಕೆ ತಿರುಗಿದ್ದು, ಕೊಳೆತ ವಾಸನೆ ಬರುತ್ತಿತ್ತು ಎಂದು ದೂರಲಾಗಿದೆ.


ಒಂದು ವೇಳೆ ಈ ಕೊಳೆತ ಮೊಟ್ಟೆಗಳನ್ನು ತಿಂದಿದ್ದಲ್ಲಿ ಬಾಣಂತಿ ಹಾಗೂ ಶಿಶುಗಳ ಆರೋಗ್ಯದ ಸ್ಥಿತಿ ಏನಾಗುತ್ತಿತ್ತೊ ಎಂದು ಮಹಿಳೆಯರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.


ಮಹಿಳೆಯರು ಹಾಗೂ ಎಳೆಯ ಹಸುಳೆಗಳ ಆರೋಗ್ಯದ ಹಿತದೃಷ್ಟಿಯಿಂದ ನೀಡುತ್ತಿರುವ ಪೌಷ್ಟಿಕ ಆಹಾರ, ಉತ್ತಮ ಗುಣಮಟ್ಟದ ಮೊಟ್ಟೆಯನ್ನು ನೀಡುವಲ್ಲಿ ಬೇಜವಾಬ್ದಾರಿ ತೋರಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕೆಂದು ನೊಂದ ಮಹಿಳೆಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net