ಗರ್ಭಿಣಿ ಜೀವ ಉಳಿಸಿದ ಎಸ್​ಡಿಎಂ

SDM HOSPITAL
Published on

ಧಾರವಾಡ: ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ (ಎಸ್​ಡಿಎಂ)ಯ ಕ್ರಿಟಿಕಲ್ ಕೇರ್ ವಿಭಾಗದ ವೈದ್ಯರು (ಎಕ್ಮೊ) (ಕೃತಕ ಶ್ವಾಸಕೋಶ) ಎಂಬ ಅತ್ಯಾಧುನಿಕ ಚಿಕಿತ್ಸೆ ಮೂಲಕ ತುಂಬು ಗರ್ಭಿಣಿ ಜೀವ ಉಳಿಸಿ ಸಾಧನೆ ಮಾಡಿದ್ದಾರೆ.
ವೈರಲ್ ನ್ಯೂಮೋನಿಯಾದಿಂದ ಬಳಲುತ್ತಿದ್ದ ಹುಬ್ಬಳ್ಳಿಯ 35 ವರ್ಷದ ಗರ್ಭಿಣಿ ಜು. 5ರಂದು ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟರ್ ಚಿಕಿತ್ಸೆಗೂ ಸ್ಪಂದಿಸದ ಕಾರಣ ಎಕ್ಮೊ ಚಿಕಿತ್ಸೆಗಾಗಿ ಎಸ್​ಡಿಎಂ ಕ್ರಿಟಿಕಲ್ ಕೇರ್ ವಿಭಾಗಕ್ಕೆ ಕಳುಹಿಸಲಾಗಿತ್ತು.
ಸತತ 7 ದಿನಗಳ ಎಕ್ಮೊ ಚಿಕಿತ್ಸೆ ನಂತರ ಹೊಟ್ಟೆಯಲ್ಲಿದ್ದ ಮಗುವನ್ನು ಸುರಕ್ಷತೆ ದೃಷ್ಟಿಯಿಂದ ಹಿರಿಯ ಪ್ರಸೂತಿ ತಜ್ಞರು, ನವಜಾತ ಶಿಶು ತಜ್ಞರ ಸಹಕಾರದಿಂದ ಹೊರತೆಗೆಯಲಾಯಿತು. ಜು. 15ರಂದು ತಾಯಿ ಆರೋಗ್ಯ ಸುಧಾರಿಸಿದ್ದರಿಂದ ಎಕ್ಮೊ ಚಿಕಿತ್ಸೆ ನಿಲ್ಲಿಸಲಾಗಿತ್ತು. ಉಸಿರಾಟ ಸರಾಗವಾಗಿ ಆರೋಗ್ಯವಾಗಿದ್ದರಿಂದ ಜು. 27ರಂದು ಮನೆಗೆ ಕಳುಹಿಸಲಾಗಿದೆ.
ಎಕ್ಮೊ ಚಿಕಿತ್ಸೆಯಲ್ಲಿ ದೇಹದ ರಕ್ತವನ್ನು ಎಕ್ಮೊ ಯಂತ್ರದಲ್ಲಿ ಪಂಪ್ ಮಾಡಲಾಗುತ್ತದೆ. ಆ ಯಂತ್ರದಲ್ಲೇ ರಕ್ತದಲ್ಲಿನ ಇಂಗಾಲದ ಡೈ ಆಕ್ಸೈಡ್ ತೆಗೆದು ಆಮ್ಲಜನಕ ಸೇರಿಸಲಾಗುತ್ತದೆ. ಹೀಗೆ ಶುದ್ಧೀಕರಣಗೊಂಡ ರಕ್ತವನ್ನು ಮತ್ತೆ ದೇಹದೊಳಗೆ ಪಂಪ್ ಮಾಡಲಾಗುತ್ತದೆ. ಹೃದಯ ಹಾಗೂ ಶ್ವಾಸಕೋಶಗಳೆರಡು ವಿಫಲವಾದ ಸನ್ನಿವೇಶಗಳಲ್ಲಿ ಈ ತರಹದ ಚಿಕಿತ್ಸೆ ಉಪಯೋಗಿಯಾಗಿದೆ.
ಈ ಚಿಕಿತ್ಸೆಯಲ್ಲಿ ಎಸ್​ಡಿಎಂ ಆಸ್ಪತ್ರೆ ಪ್ರಸೂತಿ ವಿಭಾಗದ ತಜ್ಞ ವೈದ್ಯರು, ನವಜಾತ ಶಿಶು ತಜ್ಞರು, ರಕ್ತ ಭಂಡಾರದ ವೈದ್ಯರು ಹಾಗೂ ಆಡಳಿತ ಸಿಬ್ಬಂದಿ ಸಹಕರಿಸಿದ್ದಾರೆ. ಗರ್ಭಿಣಿಗೆ ಸೂಕ್ತ ಚಿಕಿತ್ಸೆ ನೀಡಿ ಜೀವ ಉಳಿಸಿದ ವೈದ್ಯರ ಕಾರ್ಯಕ್ಕೆ ಎಸ್​ಡಿಎಂ ವಿವಿ ಕುಲಪತಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಉಪಕುಲಪತಿ ಡಾ. ನಿರಂಜನ್ ಕುಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net