

ಚಾಮರಾಜನಗರ : ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ತಂಗಿ ಮದುವೆಗೆ ಮುಂಚಿತವಾಗಿ ಹೋಗುವುದಕ್ಕೆ ಪತಿ ನಿರಾಕರಿಸಿದ ಎಂದು ಮನನೊಂದ ಎರಡು ತಿಂಗಳ ಗರ್ಭಿಣಿ ಶನಿವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ರಮೇಶ್‌ನಾಯ್ಕ ಅವರ ಪತ್ನಿ ಪವಿತ್ರಾಬಾಯಿ (22) ಮೃತೆ.
ಎಚ್.ಡಿ ಕೋಟೆ ತಾಲೂಕಿನ ಬಾವಿಕೆರೆ ಗ್ರಾಮದವರದ ಪವಿತ್ರಾಬಾಯಿ, ಕಳೆದ 2 ವರ್ಷದ ಹಿಂದೆ ದೊಮ್ಮನಗದ್ದೆ ರಮೇಶ್‌ನಾಯ್ಕನನ್ನು ವಿವಾಹವಾಗಿದ್ದರು. ಮಾ.17 ರಂದು ಎಚ್.ಡಿ ಕೋಟೆಯಲ್ಲಿ ಅವರ ತಂಗಿ ಮದುವೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮುಂಚಿತವಾಗಿ ಆಗಮಿಸುವಂತೆ ತಿಳಿಸಿದ್ದರು.
ಈ ಬಗ್ಗೆ ಅನುಮತಿ ಕೇಳಿದಾಗ ಪತಿ ಮದುವೆಯ ಸಮೀಪದಲ್ಲಿ ಹೋಗುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಪವಿತ್ರಾಬಾಯಿ ಸಂಜೆ ಮನೆಯಲ್ಲಿ ಯಾರು ಇಲ್ಲದ ವೇಳೆ ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಮೃತರ ತಾಯಿ ಜಯಭೋವಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ರಾಮಾಪುರ ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆ ನಡೆಸಿ ಭಾನುವಾರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.