ಗರ್ಭದಲ್ಲಿ ಇರುವಾಗಲೇ ಮಗುವಿಗೆ ಕಾನೂನು ರಕ್ಷಣೆ:ನ್ಯಾ. ಉಷಾರಾಣಿ

ಗರ್ಭದಲ್ಲಿ ಇರುವಾಗಲೇ ಮಗುವಿಗೆ ಕಾನೂನು ರಕ್ಷಣೆ:ನ್ಯಾ. ಉಷಾರಾಣಿ
Published on

ಹಾಸನ: ಮಗುವು ಗರ್ಭದಲ್ಲಿ ಇರುವಾಗಲೇ ಕಾನೂನಿನಡಿ ರಕ್ಷಣೆ ಪ್ರಾರಂಭವಾಗುತ್ತದೆ. ಹೆಣ್ಣಾಗಲಿ, ಗಂಡಾಗಲಿ ಒಬ್ಬ ಮನುಷ್ಯ ಹುಟ್ಟಿನಿಂದ ಸಾಯುವ ತನಕ ಕಾನೂನಿನ ಕರುಳ ಬಳ್ಳಿ ಇರುತ್ತದೆ. ಇದನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಎ.ಡಿ.ಆರ್. ಕಟ್ಟಡದ ಸಭಾಂಗಣದಲ್ಲಿ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಧಾನ್ ಸೇ ಸಮಾಧಾನ್ ಕುರಿತು ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ರಕ್ಷಣೆ ಮತ್ತು ಪೋಷಣೆಗೆ ಕಾನೂನು ಅತ್ಯವಶ್ಯಕವಾಗಿದೆ. ಮನುಷ್ಯ ತಾಯಿಯ ಗರ್ಭದಲ್ಲಿ ಇರುವಾಗ ಹೇಗೆ ಕರುಳ ಬಳ್ಳಿ ಮಗುವನ್ನು ಸುತ್ತಿಕೊಂಡು ರಕ್ಷಣೆ ಮಾಡುತ್ತದೆಯೊ ಹಾಗೇ ಒಂದು ಮಗು ಗರ್ಭದಲ್ಲಿ ಇರುವಾಗಲೇ ಮಗುವಿನ ರಕ್ಷಣೆಯನ್ನು ನಮ್ಮ ಕಾನೂನುಗಳು ಮಾಡುತ್ತದೆ. ಹುಟ್ಟಿನಿಂದ ಸಾಯುವ ತನಕ ಈ ಕಾನೂನಿನ ಕರುಳ ಬಳ್ಳಿ ನಮ್ಮೊಂದಿಗೆ ಇರುತ್ತದೆ ಎಂದು ಹೇಳಿದರು.
ಮಗು ಗರ್ಭದಲ್ಲಿ ಇದ್ದಾಗ ಹೆಣ್ಣು ಮತ್ತು ಗಂಡು ಎಂದು ಲಿಂಗ ನಿರ್ಧಾರ ಮಾಡುವುದು ಹಾಗೂ ಭ್ರೂಣ ಹತ್ಯೆ ಮಾಡುವುದು ಅಪರಾಧವಾಗಿದೆ. ಇದರಿಂದ ಸಮಾಜದಲ್ಲಿ ಅಸಮತೋಲನ ಉಂಟಾಗುತ್ತದೆ. ಪುರುಷರು ಮತ್ತು ಮಹಿಳೆಯರು ಒಂದೇ ಸಂಖ್ಯೆಯಲ್ಲಿ ಇರುವುದಿಲ್ಲ. ಈ ವೇಳೆ ಸಮಾಜದಲ್ಲಿ ಬಹಳಷ್ಟು ಅನಾಚಾರಗಳಿಗೆ ಎಡೆ ಮಾಡಿಕೊಡುತ್ತದೆ. ಜತೆಗೆ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳಗಳು ಹೆಚ್ಚಾಗುತ್ತದೆ ಎಂದರು.
ಮಹಿಳೆಯರು ತಮ್ಮ ತಮ್ಮ ಜವಾಬ್ದಾರಿ ಅರಿತು ನಿಮ್ಮೊಟ್ಟಿಗೆ ಇರುವವರಿಗೆ ತಿಳಿ ಹೇಳಿ ಸದೃಢವಾದ ಭಾರತ ದೇಶವನ್ನು ನಿರ್ಮಿಸಬಹುದು. ಗಂಡು, ಹೆಣ್ಣು ಎನ್ನುವ ಬೇಧ ಭಾವ ಮನೆಯಿಂದಲೇ ಅಳಿಸಿ ಹೋಗಬೇಕು. ಕಾನೂನನ್ನು ಯಾವ ರೀತಿ ಬಳಸಬೇಕು ಅದೇ ರೀತಿ ಬಳಕೆ ಮಾಡಬೇಕು. ಪ್ರತಿದಿನ ದೌರ್ಜನ್ಯಗಳು ಹೆಣ್ಣು ಮಕ್ಕಳ ಮೇಲೆ ಸಂಭವಿಸುತ್ತಿದ್ದು, ಮಹಿಳೆಯರ ರಕ್ಷಣೆಗಾಗಿ ಮತ್ತು ಸಂರಕ್ಷಣೆಗಾಗಿ ಹಲವು ಕಾನೂನುಗಳಿವೆ. ಯಾವ ಸ್ಥಳದಲ್ಲಿ ಹೆಣ್ಣು ಮಕ್ಕಳು ಕೆಲಸ ಮಾಡುತ್ತಾರೆ ಅಲ್ಲಿನ ಮಾಲೀಕರಿಗೆ ದೌರ್ಜನ್ಯದ ನಿರ್ದೇಶನ ನೀಡಿದ್ದು, ಇದನ್ನು ಪಾಲಿಸಲೇಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಂ.ಆರ್. ಧರಣಿ ಕುಮಾರ್ ಮಾತನಾಡಿ, ಅಷ್ಟೊಂದು ಜೀವ ಸಂಕುಲದಲ್ಲಿ ಮನುಷ್ಯ ಜೀವ ಸಂಕುಲ ವಿಶೇಷವಾಗಿದೆ. ಮನುಷ್ಯನಿಗೆ ಹೆಚ್ಚು ಬುದ್ಧಿ ಶಕ್ತಿ ನೀಡಿದೆ. ಮನುಷ್ಯನಲ್ಲೇ ಮೇಲು, ಕೀಳು ತಾರತಮ್ಯ ಹಾಗೂ ನಾನು ಗಂಡು, ಹೆಣ್ಣು ಎಂಬುದು ಹುಟ್ಟಿಕೊಂಡಿದೆ. ಈ ತಾರತಮ್ಯ ಹೋಗಲಾಡಿಸಲು ಅನೇಕ ಕಾನೂನುಗಳು ಬಂದಿದೆ. ಪ್ರತಿಯೊಬ್ಬರೂ ಕಾನೂನನ್ನು ತಿಳಿದು ಪರಿಪಾಲಿಸಬೇಕು. ಜತೆಗೆ ಸುತ್ತಮುತ್ತಲ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಕೆ. ದಾಕ್ಷಾಯಿಣಿ, ವಕೀಲರ ಸಂಘದ ಅಧ್ಯಕ್ಷ ಡಿ.ಟಿ. ಪ್ರಸನ್ನ, ತಾಲೂಕು ಸಿಡಿಪಿಒ ಕೆ.ಸಿ. ಜ್ಯೋತಿ ಲಕ್ಷ್ಮೀ, ವಕೀಲರ ಸಂಘದ ಕಾರ್ಯದರ್ಶಿ ಬಿ.ಎಂ. ಸಂತೋಷ್, ವಕೀಲರಾದ ಎಂ.ಬಿ. ಗಿರಿಜಾಂಬಿಕಾ, ಕೆ.ಆರ್. ಬಿಂದೇಶ್ವರಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net