ಗರ್ಭ ಕೊರಳ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಜಾಥ:ಡಿಎಚ್‌ಒ ಡಾ. ಶಿವಸ್ವಾಮಿ

ಗರ್ಭ ಕೊರಳ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಜಾಥ:ಡಿಎಚ್‌ಒ ಡಾ. ಶಿವಸ್ವಾಮಿ
Published on

ಹಾಸನ: ನಗರದ ಹೇಮಾವತಿ ಪ್ರತಿಮೆ ಬಳಿ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಮ್ಮೇಳನದ ಅಂಗವಾಗಿ ಶುಕ್ರವಾರ ಬೆಳಗ್ಗೆ ಸಾರ್ವಜನಿಕರಲ್ಲಿ ಗರ್ಭಕೊರಳ ಕ್ಯಾನ್ಸರ್ ಹಾಗು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಜಾಥಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವಸ್ವಾಮಿ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು.

ಜಾಥ ಉದ್ದೇಶಿಸಿ ಡಾ.ಶಿವಸ್ವಾಮಿ ಅವರು ಮಾತನಾಡಿ, ಇಂದು ಗರ್ಭ ಕಂಠದ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್‌ನಿಂದ ಹೆಚ್ಚು ಮಹಿಳೆಯರು ಸಾವಿಗೀಡಾಗುತ್ತಿದ್ದಾರೆ. ಪ್ರಾರಂಭದಲ್ಲೇ ಈ ಕಾಯಿಲೆ ಗುರುತಿಸಿ ಚಿಕಿತ್ಸೆ ನೀಡಿದರೆ ಗುಣಮುಖರಾಗಬಹುದು. ಜತೆಗೆ ಆಗುವ ಸಾವು ನೋವನ್ನು ತಪ್ಪಿಸಬಹುದು. ಈ ಬಗ್ಗೆ ಇನ್ನು ಅನೇಕರಲ್ಲಿ ತಿಳಿವಳಿಕೆ ಇಲ್ಲ. ಈ ನಿಟ್ಟಿನಲ್ಲಿ ಜಾಥದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮಹಿಳೆಯರು ಕ್ಯಾನ್ಸರ್ ಬಗ್ಗೆ ಮಾಹಿತಿ ತಿಳಿದುಕೊಂಡು ಸಂಬಂಧಿಕರಿಗೆ ಮತ್ತು ಅಕ್ಕಪಕ್ಕದ ಮನೆಯವರಿಗೆ ತಿಳಿಸುವುದರಿಂದ ಆರೋಗ್ಯ ಸಮಾಜ ನಿರ್ಮಾಣ ಮಾಡಬಹುದು. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ನೋವು, ಬ್ಲೀಡಿಂಗ್, ಕೆಟ್ಟ ವಾಸನೆ ಕಂಡು ಬಂದಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ಬ್ಲಡ್ ಕ್ಯಾನ್ಸರ್‌ನಲ್ಲೂ ಕೂಡ ಹೆಚ್ಚು ಸಾವು ನೋವುಗಳು ಕಾಣುತ್ತಿದ್ದೇವೆ. ಚರ್ಮದಲ್ಲಿ ಸೋಂಕು, ಬಣ್ಣ ಬದಲಾವಣೆ, ಕೆಟ್ಟ ದ್ರವಗಳು ಹೊರ ಬರುತ್ತಿದ್ದರೇ ವೈದ್ಯರ ಬಳಿ ಸಲಹೆ ಪಡೆಯಬೇಕು ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಧರಣಿ ಕುಮಾರ್ ಮಾತನಾಡಿ, ಗರ್ಭ ಕಂಠದ ಕ್ಯಾನ್ಸರ್ ಪ್ರಾಥಮಿಕವಾಗಿ ಎಚ್‌ಪಿವಿ ಸೋಂಕಿನಿಂದ ಉಂಟಾಗುತ್ತದೆ. ಈ ಸೋಂಕು ಸಾಮಾನ್ಯವಾಗಿದ್ದು, ಜೀವಿತಾವಧಿಯಲ್ಲಿ ಪ್ರತಿಯೊಬ್ಬರೂ ಎಚ್‌ಪಿವಿ ಸೋಂಕಿಗೆ ಒಳಗಾಗುತ್ತಾರೆ. ಲಸಿಕೆ ಮೂಲಕ ಎಚ್‌ಪಿವಿ ಸೋಂಕನ್ನು ತಡೆಯಲು ಸಾಧ್ಯ. ಈ ಜಾಗೃತಿ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರು ಉತ್ತಮ ಕೆಲಸ ಮಾಡುತ್ತಿದ್ದು, ಇವರು ಸಮಾಜದ ಕಣ್ಣು ಎಂದು ಹೇಳಿದರು.

ಜಾಗೃತಿ ಜಾಥದಲ್ಲಿ ವೈದ್ಯರಾದ ಕಿರಣ, ಆಶಾ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net