ಗರ್ಜಿಸದ ರಾಜಾಹುಲಿ ಬಜೆಟ್

Hyderabad-Karnataka
Published on

ವಾದಿರಾಜ ವ್ಯಾಸಮುದ್ರ ಕಲಬುರಗಿ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದಂತೆ `ರಾಜಾ ಹುಲಿ' ಬಜೆಟ್ ಗಜರ್ಿಸಲಿಲ್ಲ. ಹೆಸರು ಬದಲಾದರೂ ಚಹರೆ ಬದಲಾಗಲಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಮಂಡಿಸಿದ 2020-21ರ ಬಜೆಟ್ ಬಗ್ಗೆ ಈ ಭಾಗದ ಜನರಿಂದ ವ್ಯಕ್ತವಾದ ಅಭಿಪ್ರಾಯವಿದು.
ಆಯವ್ಯಯ ಪತ್ರದಲ್ಲಿ ಸಾಕಷ್ಟು ನೆರವು ಸಿಗಬಹುದು ಎಂದು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡ ಈ ಭಾಗದ ಜನ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಈಡೇರದಿರುವುದಕ್ಕೆ ವ್ಯಾಪಕ ಅಸಮಾಧಾನ ಮೂಡಿಸಿದೆ.
ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಿಸಿ ಜನತೆಯಲ್ಲಿ ಭರವಸೆ ಮೂಡಿಸಿದ್ದ ಯಡಿಯೂರಪ್ಪ ಈ ಭಾಗಕ್ಕೆ ನಿರೀಕ್ಷಿತ ಹಣ ಒದಗಿಸಿಲ್ಲ. ತೊಗರಿ ಮಂಡಳಿ, ನಿಮ್ಜ್ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆಗಬೇಕಿರುವ ಯೋಜನೆಗಳ ಬಗ್ಗೆ ಒಂದೇ ಒಂದು ಮಾತು ಆಡಿಲ್ಲ.
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವರೂ ಆದ ಶಾಸಕ ಪ್ರಿಯಾಂಕ್ ಖರ್ಗೆ , ಹಣಕಾಸು ಖಾತೆ ನೋಡಿಕೊಳ್ಳುತ್ತಿರುವ ಯಡಿಯೂರಪ್ಪ ಇನ್ನೂ ಒಂದಿಷ್ಟು ಅವಕಾಶ ಕಲ್ಪಿಸದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಭಾಗಕ್ಕೆ ನಿರೀಕ್ಷಿತ ಮಟ್ಟದಲ್ಲಿ ಮಂತ್ರಿಗಿರಿಯೂ ಸಿಕ್ಕಿಲ್ಲ. ಅಂತಲೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2000 ಕೋಟಿ ರೂ. ನೀಡಬೇಕೆಂದು ಸುರಪುರ ಶಾಸಕ ನರಸಿಂಹ ನಾಯಕ (ರಾಜುಗೌಡ) ನೇತೃತ್ವದಲ್ಲಿ 38 ಶಾಸಕರು ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದ್ದರು. ಆರಂಭದಲ್ಲಿ ಈ ಬಗ್ಗೆ ಒಲವು ತೋರಿದ್ದ ಬಿಎಸ್ವೈ ಹೇಳಿದಂತೆ ನಡೆದುಕೊಂಡಿಲ್ಲ. ಇದು ಬಿಜೆಪಿ ಶಾಸಕರ ಅತೃಪ್ತಿಗೂ ಕಾರಣವಾಗಿದೆ.
ಬಜೆಟ್ನಲ್ಲಿ 2000 ಕೋಟಿ ರೂ. ಬದಲು ಹಿಂದಿನ ಸರ್ಕಾರ ನೀಡಿದಂತೆ 1,500 ಕೋಟಿ ರೂ.ಗಳನ್ನೇ ಈ ಸರ್ಕಾರವೂ ಒದಗಿಸಿದೆ. ಮಾಜಿ ಸಂಸದ ಡಾ.ಬಸವರಾಜ ಪಾಟೀಲ್ ಸೇಡಂ ನೇತೃತ್ವದಲ್ಲಿ ಈ ಭಾಗದ ಸರ್ವತೋಮುಖ ಏಳಿಗೆಗೆ ರಚಿಸಿರುವ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ 500 ಕೋಟಿ ರೂ. ಕೊಡುವುದಾಗಿ ಘೋಷಿಸಿದ್ದೇ ಸಾಧನೆ.
ನಿರೀಕ್ಷಿತ ಮಟ್ಟದಲ್ಲಿ ಹಣ ನೀಡದ್ದಕ್ಕೆ ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಹಿರಂಗವಾಗಿಯೇ ಅತೃಪ್ತಿ ಹೊರಹಾಕಿದ್ದಾರೆ. ಇನ್ನು ಬಿಜೆಪಿ ಶಾಸಕರೂ ಒಳಗಿಂದೊಳಗೆ ಕುದಿಯುತ್ತಿದ್ದಾರೆ.

ಸಂತಸ ತಂದ ಜಲಾಶಯ
ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆ ಜನರಿಗೆ ಕುಡಿಯುವ ನೀರು ಮತ್ತು ಸಾಧ್ಯವಾದರೆ ಕೃಷಿಗಾಗಿ ಸುರಪುರ ತಾಲೂಕಿನ ತಿಂಥಣಿ ಬಳಿ ಜಲಾಶಯ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲು ಹೇಳಿರುವುದು, ಬಸವಕಲ್ಯಾಣದಲ್ಲಿ ಹೊಸ ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ ರೂ. ಘೋಷಿಸಿರುವುದು ಒಂದಿಷ್ಟು ಸಂತಸ ತಂದಿದೆ.
ಹಿಂದಿನ ಸರ್ಕಾರಗಳು ಕೆಲ ಹೊಸ ತಾಲೂಕುಗಳನ್ನು ಘೋಷಿಸಿದ್ದರೂ ಸೂಕ್ತ ಬಜೆಟ್ ನೀಡಿರಲಿಲ್ಲ. ಇದೇ ಸಂಪ್ರದಾಯ ಮುಂದುವರಿಸಿರುವ ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕದ ಹೊಸ ತಾಲೂಕುಗಳ ಅಭಿವೃದ್ಧಿಯತ್ತ ಗಮನ ಹರಿಸಿಲ್ಲ. ಮಳೆಗಾಲ ಸಂದರ್ಭದಲ್ಲಿ ಕೃಷ್ಣಾ ಮತ್ತು ಭೀಮಾ ನದಿಗಳಿಂದ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆಹಿಡಿಯಲು ಯೋಜನೆ ರೂಪಿಸಬೇಕೆಂಬ ಮನವಿಗೆ ಆದ್ಯತೆ ಸಿಕ್ಕಿಲ್ಲ.
ಈ ಭಾಗದ ಪ್ರಮುಖ ಬೇಡಿಕೆಯಲ್ಲಿ ಒಂದಾದ ದಾಲ್ಮಿಲ್ಗಳನ್ನು ಕೃಷಿ ಆಧಾರಿತ ಉದ್ಯಮ ಎಂದು ಪರಿಗಣಿಸಬೇಕೆಂಬ ದಾಲ್ಮಿಲ್ ಮಾಲೀಕರ ಬೇಡಿಕೆಗೂ ಸರ್ಕಾರ ಕ್ಯಾರೆ ಎಂದಿಲ್ಲ.


ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್ ರೈತ ಮತ್ತು ಜನಪರವಾಗಿದೆ. ಕೆಕೆಆರ್ಡಿಬಿಗೆ 1500 ಕೋಟಿ ರೂ., ಹೊಸದಾಗಿ ಸ್ಥಾಪಿಸಿರುವ ಕಕ ಮಾನವ ಸಂಪನ್ಮೂಲ ಮತ್ತು ಕೃಷಿ ಸಾಂಸ್ಕೃತಿಕ ಸಂಘಕ್ಕೆ 500 ಕೋಟಿ ಸೇರಿ ಕಲ್ಯಾಣ ಕನರ್ಾಟಕಕ್ಕೆ 2000 ಕೋಟಿ ರೂ.ನೀಡಲಾಗಿದೆ. ವಿಶೇಷ ಅಭಿವೃದ್ಧಿ ಯೋಜನೆಗೆ 3060 ಕೋಟಿ ರೂ. ಮೀಸಲಿಡಲಾಗಿದೆ. ಬಸವ ಕಲ್ಯಾಣ ಅನುಭವ ಮಂಟಪಕ್ಕೆ 500 ಕೋಟಿ ರೂ. ತೆಗೆದಿರಿಸಿದ್ದಾರೆ. ಈ ಮೂಲಕ ಈ ಭಾಗವನ್ನು ನಿಜಾರ್ಥದಲ್ಲಿ ಕಲ್ಯಾಣ ಮಾಡಲು ಸಿಎಂ ಮುಂದಾಗಿದ್ದಾರೆ.
| ಬಿ.ಜಿ.ಪಾಟೀಲ್ ವಿಧಾನ ಪರಿಷತ್ ಸದಸ್ಯ

ಬಜೆಟ್ನಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡಿಲ್ಲ. ಕಲ್ಯಾಣ ಕನರ್ಾಟಕ ಕೈಗಾರಿಕೆ ನೀತಿ ಬಗ್ಗೆ ಪ್ರಸ್ತಾಪವಿಲ್ಲ. ಕೈಗಾರಿಕಾ ಕಾರಿಡಾರ್ ಸ್ಥಾಪನೆ, ವಿಶೇಷ ಆರ್ಥಿಕ ವಲಯಗಳಿಗೆ ಆದ್ಯತೆ ನೀಡಿಲ್ಲ. ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಪಾಲಿಗೆ ಇದು ನಿರಾಶಾದಾಯಕ ಬಜೆಟ್. ಆದರೆ ಕೆಕೆಆರ್ಡಿಬಿಗೆ 1500 ಕೋಟಿ ರೂ., ಕಕ ಸಾಂಸ್ಕೃತಿಕ ಸಂಘಕ್ಕೆ 500 ಕೋಟಿ ರೂ., ಅಂಜನಾದ್ರಿ ಬೆಟ್ಟದ ಅಭಿವೃದ್ಧಿ, ಬಸವಕಲ್ಯಾಣದ ಅನುಭವ ಮಂಟಪಕ್ಕೆ 500 ಕೋಟಿ ರೂ. ಘೋಷಿಸಿದ್ದು ಸ್ವಾಗತಾರ್ಹ.
| ಅಮರನಾಥ ಸಿ.ಪಾಟೀಲ್ ಎಚ್ಕೆಸಿಸಿಐ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net