ಗರಿಷ್ಠ ಸುರಕ್ಷತೆಗೆ ಕ್ರಮವಹಿಸಿ

9-hvr-04
Published on

ಹಾವೇರಿ: ಪರೀಕ್ಷಾ ಕೇಂದ್ರದ ಮಾಹಿತಿ ಕೊರತೆ ಹಾಗೂ ಸಾರಿಗೆ ಅನಾನುಕೂಲ ಕಾರಣದಿಂದ ಜಿಲ್ಲೆಯಲ್ಲಿ ಯಾವುದೇ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಿಂದ ವಂಚಿತವಾಗಬಾರದು. ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಸಂಪರ್ಕ ಸಾಧಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಪರೀಕ್ಷಾ ಕೇಂದ್ರಕ್ಕೆ ಬರುವ ಸಂಪರ್ಕ ಕುರಿತು ಮಾಹಿತಿ ನೀಡಬೇಕು. ಸಾರಿಗೆ ಅನಾನುಕೂಲದಿಂದ ಬರಲಾಗಿಲ್ಲ ಎಂಬ ದೂರುಗಳು ಬಂದರೆ ಶಾಲಾ ಮುಖ್ಯಾಧ್ಯಾಪಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಎಚ್ಚರಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತೆ, ಕೋವಿಡ್ ಮಾರ್ಗಸೂಚಿ, ವಿದ್ಯಾರ್ಥಿಗಳಿಗೆ ಸಾರಿಗೆ ಸೌಕರ್ಯ ಕುರಿತು ಮಂಗಳವಾರ ಆಯೋಜಿಸಿದ್ದ ಜಿಲ್ಲೆಯ ಶಿಕ್ಷಣಾಧಿಕಾರಿಗಳು ಹಾಗೂ ಪರೀಕ್ಷಾ ಸಿದ್ಧತೆಯ ಪೂರಕ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಜೂ. 25ರಿಂದ ಜುಲೈ 3ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ಕೋವಿಡ್ ಮಾರ್ಗಸೂಚಿ ಪ್ರಕಾರ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. 3 ದಿನ ಮುಂಚಿತವಾಗಿ ಕೇಂದ್ರಗಳ ಸ್ವಚ್ಛತೆ, ಸ್ಯಾನಿಟೈಸೇಷನ್ ಮಾಡಬೇಕು. ಪರೀಕ್ಷೆಯ ಪ್ರತಿದಿನ ಸ್ಯಾನಿಟೈಸೇೕಷನ್ ಮಾಡಬೇಕು. ಒಬ್ಬರಿಂದ ಒಬ್ಬರಿಗೆ ಕನಿಷ್ಠ ಮುರೂವರೆ ಅಡಿ ಅಂತರ ಕಾಪಾಡಿ ವಿದ್ಯಾರ್ಥಿಗಳನ್ನು ಕೂರಿಸಬೇಕು. ಎಲ್ಲರಿಗೂ ಸ್ಕ್ರೀನಿಂಗ್ ಮಾಡಬೇಕು. ಪ್ರತಿ ವಿದ್ಯಾರ್ಥಿಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಜ್ವರ, ಕೆಮ್ಮಿನ ಲಕ್ಷಣಗಳು ಅಥವಾ ಕಂಟೇನ್ಮೆಂಟ್ ಕೇಂದ್ರದಿಂದ ಬರುವ ಪರೀಕ್ಷಾರ್ಥಿಗಳಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಿ ಮಾರ್ಗಸೂಚಿಯಂತೆ ಆರು ಅಡಿ ಅಂತರದಲ್ಲಿ ಪರೀಕ್ಷೆ ಬರೆಯಲು ಮುನ್ನೆಚ್ಚರಿಕೆ ವಹಿಸಬೇಕು. ಕೋವಿಡ್ ಸುರಕ್ಷತೆಯ ಗರಿಷ್ಠ ಕ್ರಮಗಳನ್ನು ಪ್ರತಿ ಕೇಂದ್ರಗಳಲ್ಲೂ ಕೈಗೊಳ್ಳಬೇಕು ಎಂದರು.

ಪರೀಕ್ಷಾ ಕೇಂದ್ರಗಳಿಗೆ ವಿವಿಧ ಹಳ್ಳಿಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕೈಗೊಳ್ಳಬೇಕು. ಬಿಇಒಗಳು ಸಾರಿಗೆ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಬಸ್ ಓಡುವ ಮಾರ್ಗಗಳು, ಸಮಯ ನಿಗದಿಗೊಳಿಸಬೇಕು. ಒಂದೇ ಗ್ರಾಮ ಅಥವಾ ಶಾಲೆಯಿಂದ ಪರೀಕ್ಷಾ ಕೇಂದ್ರಕ್ಕೆ ಹೆಚ್ಚು ವಿದ್ಯಾರ್ಥಿಗಳಿದ್ದರೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಬೇಕು. ಸಾರಿಗೆ ಮಾರ್ಗಗಳಿಲ್ಲದ ಊರುಗಳಿಗೆ ಖಾಸಗಿ ಶಾಲಾ ಬಸ್​ಗಳ ವ್ಯವಸ್ಥೆ ಮಾಡಬೇಕು. ಈ ಕುರಿತು ಪಾಲಕರು ವಿದ್ಯಾರ್ಥಿಗಳು ಸಂರ್ಪಸಲು ಅನುಕೂಲವಾಗುವಂತೆ ಸಹಾಯವಾಣಿಗಳನ್ನು ಸ್ಥಾಪಿಸಿ ಸಂಪರ್ಕ ಸಂಖ್ಯೆಗಳನ್ನು ವಿನಿಮಯ ಮಾಡಿಕೊಳ್ಳಬೇಕು ಎಂದರು.

ಯಾವ ವಿದ್ಯಾರ್ಥಿಗಳು ಯಾವ ಕೇಂದ್ರ, ಯಾವ ನೋಂದಣಿ ಸಂಖ್ಯೆ, ಯಾವ ಕೇಂದ್ರದ ಎಷ್ಟನೇ ಕೊಠಡಿಯಲ್ಲಿದೆ ಎಂಬ ಮಾಹಿತಿಯನ್ನು ಮುಂಚಿತವಾಗಿಯೇ ವಾಟ್ಸ್ ಆಪ್ ಗ್ರೂಪ್, ವೆಬ್​ಸೈಟ್ ಹಾಗೂ ಎಲ್ಲ ಶಾಲೆಗಳ ನೋಟಿಸ್ ಬೋರ್ಡ್​ನಲ್ಲಿ ಪ್ರಕಟಿಸಬೇಕು. ಎಲ್ಲೂ ಗುಂಪು ಸೇರದಂತೆ ಪರಸ್ಪರ ಅಂತರ ಕಾಯ್ದುಕೊಳ್ಳಲು ಸ್ಕೌಟ್ಸ್ ಆಂಡ್ ಗೈಡ್ಸ್ ಕಾಲೇಜ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕು ಎಂದರು.

ಜಿಪಂ ಸಿಇಒ ರಮೇಶ ದೇಸಾಯಿ ಮಾತನಾಡಿ, ವಾಹನ ವ್ಯವಸ್ಥೆಯಿಲ್ಲದೇ ಒಂದೇ ಒಂದು ಮಗುವೂ ಪರೀಕ್ಷೆಯಿಂದ ವಂಚಿತವಾಗಬಾರದು. ಪರೀಕ್ಷಾ ಸಮಯಕ್ಕೆ ಸರಿಯಾಗಿ ಬಸ್ ಓಡಿಸಬೇಕು. ಬಸ್ ಹೊರಡುವ ಮಾರ್ಗ, ಸಮಯ, ಬಸ್ ನಂಬರ್, ಚಾಲಕನ ನಂಬರ್​ಗಳನ್ನು ವಿದ್ಯಾರ್ಥಿಗಳಿಗೆ ಪಾಲಕರಿಗೆ ಮುಂಚಿತವಾಗಿ ತಿಳಿಸಬೇಕು. ಈ ಕುರಿತು ಎಲ್ಲ ಬಿಇಒಗಳು, ಮುಖ್ಯಾಧ್ಯಾಪಕರು ಸಮನ್ವಯದಿಂದ ಮುಂಚಿತವಾಗಿ ಪ್ಲಾನ್ ಮಾಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಆರ್​ಸಿಎಚ್ ಅಧಿಕಾರಿ ಡಾ. ಎಂ. ಜಯಾನಂದ, ಡಯಟ್ ಪ್ರಾಚಾರ್ಯ ಜಿ.ಎಂ. ಬಸವಣ್ಣೆಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರಾ, ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಮುಜುಂದಾರ, ಬಿಇಒಗಳು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಹಾಜರಿದ್ದರು.

22,511 ವಿದ್ಯಾರ್ಥಿಗಳು ನೋಂದಣಿ: ಡಿಡಿಪಿಐ ಅಂದಾನಪ್ಪ ವಡಗೇರಿ ಮಾತನಾಡಿ, ಜಿಲ್ಲೆಯಲ್ಲಿ 22,511 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 75 ಮುಖ್ಯ ಪರೀಕ್ಷಾ ಕೇಂದ್ರಗಳು, 15 ಬ್ಲಾಕ್ ಕೇಂದ್ರಗಳನ್ನು ಗುರುತಿಸಲಾಗಿದೆ. 1,420 ಕೊಠಡಿಗಳನ್ನು ಸಿದ್ಧಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಸೇರಿ ಪರೀಕ್ಷಾ ಮೇಲ್ವಿಚಾರಕರಿಗೂ ಕೇಂದ್ರದೊಳಗೆ ಮೊಬೈಲ್ ಅಥವಾ ಯಾವುದೇ ಇಲೆಕ್ಟ್ರಾನಿಕ್ಸ್ ಡಿವೈಸ್ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಕೋವಿಡ್ ಮಾರ್ಗಸೂಚಿಯಂತೆ ಎಲ್ಲ ಮುನ್ನೆಚ್ಚರಿಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರ ಸಂಪರ್ಕಕ್ಕೆ 9480574530 ಸಹಾಯವಾಣಿ ಸ್ಥಾಪಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಆರೋಗ್ಯ ಸಹಾಯಕರ ನೇಮಕ, ಸ್ಥಳೀಯ ಸಂಸ್ಥೆಗಳಿಂದ ಪರೀಕ್ಷಾ ಕೇಂದ್ರಗಳ ಸ್ವಚ್ಛತೆ ಸೇರಿ ಗರಿಷ್ಠ ಸುಕರ್ಷತಾ ಮುನ್ನೆಚ್ಚರಿಕೆ ಕ್ರಮಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ಹಸ್ತಾಂತರ: ಜೂನ್ ಕೊನೆಯ ವಾರದಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ವಿದ್ಯಾರ್ಥಿಗಳಿಗಾಗಿ 10,500 ಮಾಸ್ಕ್​ಗಳನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನಪ್ಪ ವಡಗೇರಿ ಅವರಿಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಹಸ್ತಾಂತರಿಸಲಾಯಿತು.

ಸ್ಕೌಟ್ಸ್​ನ ಜಿಲ್ಲಾ ಆಯುಕ್ತೆ ಮಾಧುರಿ ದೇವಧರ, ಕಾರ್ಯದರ್ಶಿ ಆರ್.ಆರ್. ಕಾಶೆಪ್ಪನವರ, ಖಜಾಂಚಿ ಜಿ.ವಿ. ಹಿರೇಗೌಡ್ರ, ತಾಲೂಕು ಅಧ್ಯಕ್ಷ ನಂದೀಶ ಹಾವಣಗಿ, ಮಲ್ಲಿಕಾರ್ಜುನ ಕೊಟೂರ, ಸುಜಿತ್ ಜೈನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net