

ಜಯತೀರ್ಥ ಪಾಟೀಲ ಕಲಬುರಗಿ
ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಘೋಷಿಸಿದ್ದರೂ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ಸಲ್ಲಿಸಿ ರೂಪುರೇಷೆ ಬಗ್ಗೆ ವಿವರ ಮಾಹಿತಿ ನೀಡಿದ್ದು, ವಿಷಯ ಮತ್ತೆ ಗರಿಗೆದರುವಂತೆ ಮಾಡಿದೆ.
ಪ್ರಾದೇಶಿಕ ಆಯುಕ್ತರೂ ಆಗಿದ್ದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ್ ಯಾದವ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಮಂಡಳಿ ಕಾರ್ಯದರ್ಶಿ ಹುದ್ದೆಯನ್ನು ಸರ್ಕಾರದ ಪದನಿಮಿತ್ತ ಕಾರ್ಯದರ್ಶಿ , ಉಪ ಕಾರ್ಯದರ್ಶಿ ಹುದ್ದೆಯನ್ನು ಸರ್ಕಾರದ ಪದನಿಮಿತ್ತ ಉಪ ಕಾರ್ಯದರ್ಶಿ , ಮಂಡಳಿ ಅಧೀನ ಕಾರ್ಯದರ್ಶಿ ಹುದ್ದೆಯನ್ನು ಸರ್ಕಾರದ ಪದನಿಮಿತ್ತ ಅಧೀನ ಕಾರ್ಯದರ್ಶಿ ಎಂದು ಮರು ನಾಮಕರಣ ಮಾಡುವಂತೆ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಹಾಗೂ ಈ ಭಾಗದ ಜವಾಬ್ದಾರಿ ಒಟ್ಟಾರೆ ವಹಿಸಿಕೊಳ್ಳಲು ಅನುಕೂಲವಾಗುವಂತೆ ಈಗಿನ ಹುದ್ದೆಗಳ ಮರು ನಾಮಕರಣದ ಅಗತ್ಯವಿದೆ. ಆಗಲೇ ಸ್ವತಂತ್ರವಾಗಿ ಕಾರ್ಯನಿರ್ವಹಣೆ ಸಾಧ್ಯವಾಗಲಿದೆ. ಮಂಡಳಿ ಕಾರ್ಯದಶರ್ಿಗೆ ಪದನಿಮಿತ್ತ ಸಕರ್ಾರದ ಕಾರ್ಯದರ್ಶಿ ಸ್ಥಾನಮಾನ ನೀಡಿದ್ದಲ್ಲಿ ಸಚಿವಾಲಯ ಮಾದರಿಯಲ್ಲಿ ಆಡಳಿತಾತ್ಮಕ, ಹಣಕಾಸಿನ ಶಿಸ್ತು ಇತರ ಅಧಿಕಾರ ಚಲಾಯಿಸಲು ಸಾಧ್ಯವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ನೀಲಿನಕ್ಷೆ ಅಗತ್ಯ
ಈಗಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಯಾವುದೇ ಪಕ್ಕಾ ನೀಲಿನಕ್ಷೆ ಇಲ್ಲವಾಗಿದೆ. ಯಾವುದೇ ಒಂದು ಉದ್ದೇಶಕ್ಕೆ ಮೀಸಲಿದ್ದ ಅನುದಾನ ಇನ್ನಾವುದೋ ಉದ್ದೇಶಕ್ಕೆ ಖರ್ಚಾಗುತ್ತಿದೆ. ನಿಗದಿತ ಯೋಜನೆ ಇಲ್ಲ. ಇತ್ತೀಚೆಗೆ ಕಲಬುರಗಿಯ ಜಯದೇವ ಆಸ್ಪತ್ರೆಗೆ ಸರ್ಕಾರ ನೀಡಬೇಕಿದ್ದ 150 ಕೋಟಿ ಅನುದಾನ ಮಂಡಳಿ ನೀಡಲಾಯಿತು. ರಾಜ್ಯ ಸರ್ಕಾರ ವಿಮಾನ ನಿಲ್ದಾಣಕ್ಕೆ ನೀಡಬೇಕಿದ್ದ ಅನುದಾನ ಸಹ ಮಂಡಳಿಯೇ ಕೊಟ್ಟಿದೆ. ಕೆಲ ಯೋಜನೆಗಳಿಗೆ ಸರ್ಕಾರ ತನ್ನ ಪಾಲಿನ ಅನುದಾನ ನೀಡಲೇಬೇಕು. ಈ ಭಾಗದ ಒಟ್ಟಾರೆ ಅಭಿವೃದ್ಧಿಗೆ ಮೀಸಲಿರುವ ಮಂಡಳಿ ಅನುದಾನವನ್ನು ಸರ್ಕಾರ ತನ್ನ ಅನ್ಯ ಕಾರ್ಯಗಳಿಗೆ ಖರ್ಚು ಮಾಡಿದರೆ ಮಂಡಳಿಗೆ ಅಸ್ತಿತ್ವದ ಪ್ರಶ್ನೆ ಕಾಡಲಿದೆ. ಜತೆಗೆ ಈ ಭಾಗದ ಅಭಿವೃದ್ಧಿ ಅರ್ಥವೇ ಕಳೆದುಕೊಳ್ಳಲಿದೆ.
ಪ್ರತ್ಯೇಕ ಸಚಿವರ ನೇಮಕ
ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯ ಕಲಬುರಗಿಯಲ್ಲೇ ಸ್ಥಾಪಿಸಬೇಕು. ನಿರ್ವಹಣೆಗೆ ಪ್ರತ್ಯೇಕ ಸಚಿವರನ್ನೂ ನೀಡಬೇಕು. ಪಕ್ಕಾ ರೋಡ್ಮ್ಯಾಪ್ ಅಗತ್ಯ. ಈ ಭಾಗದ ಸಂಪೂರ್ಣ ಅಭಿವೃದ್ಧಿ ಈ ಸಚಿವಾಲಯದಿಂದಲೇ ಆಗಬೇಕು. ಲೋಕೋಪಯೋಗಿ, ಭೂಸೇನಾ ನಿಗಮ ಇತರ ಏಜೆನ್ಸಿಗಳ ಅವಲಂಬನೆಯಿಂದ ಹೊರಬರಬೇಕು. ಸ್ವಂತ ನೆಟ್ ವರ್ಕ ಹೊಂದುವುದು ಜರೂರಿ. ಸಾಮಾಜಿಕ, ಆರ್ಥಿಕ ಅಭವೃದ್ಧಿ ಗುರಿಯೊಂದಿಗೆ ಸಚಿವಾಲಯ ಕೆಲಸ ಮಾಡಬೇಕು. ಕಟ್ಟಡ, ರಸ್ತೆ ಮಾಡಿದ ಮಾತ್ರಕ್ಕೆ ಕಲ್ಯಾಣವಾಗಲು ಸಾಧ್ಯವಿಲ್ಲ ಎಂಬುದು ತಜ್ಞರು ಅಭಿಪ್ರಾಯ.
ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈ ಭಾಗದ ಒಟ್ಟಾರೆ ಪ್ರಗತಿ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ. ಮಂಡಳಿಗೆ ಅನುದಾನ ಹೆಚ್ಚಳ, ಪ್ರತ್ಯೇಕ ಸಚಿವಾಲಯ, ವಿಶೇಷ ಆರ್ಥಿಕ ವಲಯ ಸ್ಥಾಪನೆ ಸೇರಿ ಪ್ರಮುಖ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾದಾಗ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ. ಸಕರ್ಾರ ಬಜೆಟ್ನಲ್ಲಿ ಈ ಬಗ್ಗೆ ಸ್ಪಷ್ಟಪಡಿಸಬೇಕು.
| ಅಮರನಾಥ ಸಿ.ಪಾಟೀಲ್ ಎಚ್ಕೆಸಿಸಿಐ ಅಧ್ಯಕ್ಷ