

ಮೈಸೂರು: ಕುತೂಹಲ ಕೆರಳಿಸಿರುವ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ (ಎಂಸಿಡಿಸಿಸಿ) ಚುನಾವಣೆ ಗರಿಗೆದರಿದೆ.
ಇಷ್ಟು ದಿನ ವಿವಿಧ ಕಾರಣಕ್ಕೆ ಎಲೆಕ್ಷನ್ ಮುಂದೂಡಿಕೊಂಡು ಬರಲಾಗಿತ್ತು. ಇದೀಗ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಜೂನ್ 26ಕ್ಕೆ ಮುಹೂರ್ತ ನಿಗದಿಯಾಗಿದೆ. ಅಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಂಜರಾಜ ಬಹದ್ದೂರ್ ಛತ್ರದಲ್ಲಿ ಮತದಾನ ನಡೆಯಲಿದೆ.
ಕೋರ್ಟ್ ತಡೆಯಾಜ್ಞೆ ಇಲ್ಲದಿರುವ 13 ಕ್ಷೇತ್ರಗಳಿಗೆ ಮಾತ್ರವೆ ಇದೀಗ ಚುನಾವಣೆ ನಡೆಯಲಿದೆ. ಮೈಸೂರು ಉಪವಿಭಾಗಾಧಿಕಾರಿ ಚುನಾವಣಾಧಿಕಾರಿಯಾಗಿ ನಿಯೋಜಿಸಿದ್ದು, ಅವರಿಗೆ ನಾಮಪತ್ರ ಸಲ್ಲಿಕೆ ಮಾಡಬೇಕಿದೆ.
ನಾಮಪತ್ರ ಸಲ್ಲಿಕೆ ಜೂ.18 ಕೊನೆಯ ದಿನವಾಗಿದೆ.
ಜೂ.20 ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ. 22ರಂದು ಅಭ್ಯರ್ಥಿಗಳಿಗೆ ಚಿಹ್ನೆಯನ್ನು ನೀಡಲಾಗುತ್ತದೆ. 26ರಂದು ಮತದಾನ ನಡೆಯಲಿದೆ. ಬಳಿಕ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಉಪವಿಭಾಗಾಧಿಕಾರಿ ಅವರು ಫಲಿತಾಂಶವನ್ನು ಪ್ರಕಟಿಸಲಿದ್ದಾರೆ.
19 ನಿರ್ದೇಶಕರ ಬಲವನ್ನು ಹೊಂದಿರುವ ಆಡಳಿತ ಮಂಡಳಿಯಲ್ಲಿ 16 ಸ್ಥಾನಗಳ ಆಯ್ಕೆಗಾಗಿ ಚುನಾವಣೆ ನಡೆಸಬೇಕು. ಉಳಿದ ಮೂವರು ಸದಸ್ಯರಲ್ಲಿ ಒಬ್ಬರು ಸರ್ಕಾರದಿಂದ ನಾಮ ನಿರ್ದೇಶನಗೊಂಡವರು, ಇನ್ನೊಬ್ಬರು ಅಪೆಕ್ಸ್ ಬ್ಯಾಂಕಿನಿಂದ ನಾಮನಿರ್ದೇಶನಗೊಂಡವರು. ಮತ್ತೊಬ್ಬರು ಡಿಆರ್‌ಸಿಎಸ್(ಸಹಕಾರ ಸಂಘಗಳ ಜಂಟಿ ನಿಬಂಧಕ) ಪದನಿಮಿತ್ತ ಸದಸ್ಯ ಆಗಿರುತ್ತಾರೆ.
ಈ ಸಲ ಘೋಷಣೆಯಾಗಿರುವ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದೆ. ಉಳಿದ ಸ್ಥಾನಗಳ ವಿಚಾರ ಕೋರ್ಟ್‌ನಲ್ಲಿ ಇದ್ದು, ಸದ್ಯಕ್ಕೆ ಮೂರು ಕ್ಷೇತ್ರಗಳಿಗೆ ಎಲೆಕ್ಷನ್ ನಡೆಯುತ್ತಿಲ್ಲ.
ಮೈಸೂರು-ಚಾಮರಾಜನಗರ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರು (ತಾಲೂಕಿಗೆ ಒಬ್ಬರಂತೆ) 11 ಜನರು, ಉಭಯ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣ ಸಹಕಾರ ಬ್ಯಾಂಕ್ ಹಾಗೂ ಗೃಹ ನಿರ್ಮಾಣ ಸಹಕಾರ ಸಂಘಗಳಿಂದ ಒಬ್ಬ ಪ್ರತಿನಿಧಿ, ತಾಲೂಕು, ಜಿಲ್ಲೆ ಹಾಗೂ ಜಿಲ್ಲಾ ಮೇಲ್ಪಟ್ಟು ಕಾರ್ಯವ್ಯಾಪ್ತಿ ಹೊಂದಿರುವ ಸಹಕಾರ ಬ್ಯಾಂಕ್‌ಗಳು ಮತ್ತು ಸಹಕಾರ ಸಂಘಗಳಿಂದ ಒಬ್ಬ ಪ್ರತಿನಿಧಿ ಆಯ್ಕೆಗೆ ಚುನಾವಣೆ ಘೋಷಣೆಯಾಗಿದೆ.
ಹಾಲು ಒಕ್ಕೂಟ-2 ಮತ್ತು ಟಿಎಪಿಸಿಎಂಎಸ್-1 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿಲ್ಲ.
ಈ ಸಲವೂ ಕೆಲ ಕಾಂಗ್ರೆಸ್ ಶಾಸಕರು ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಈ ಮೂಲಕ ಅಧಿಕಾರದ ಗಾದಿಯನ್ನು ವಶಪಡಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಡುಗೊರೆ ನೀಡಲು ಕಾಂಗ್ರೆಸ್ ಸಂಕಲ್ಪ ಮಾಡಿದೆ. ಇದರಿಂದ ಚುನಾವಣೆ ರಂಗೇರಿದೆ.
ಸಹಕಾರ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಶಾಸಕ ಜಿ.ಟಿ.ದೇವೇಗೌಡ ಅವರಿಗೂ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಹಿಂದಿನ ಅವಧಿಯಲ್ಲಿ ತಮ್ಮ ಪುತ್ರ ಶಾಸಕ ಜಿ.ಡಿ.ಹರೀಶ್‌ಗೌಡ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಈ ಸಲವೂ ಸಹಕಾರ ಕ್ಷೇತ್ರದಲ್ಲಿ ಪ್ರಭಾವ ಮುಂದುವರಿಸಿಕೊಂಡು ಹೋಗಬೇಕಿದೆ. ಅದಕ್ಕಾಗಿ ತಂತ್ರಗಾರಿಕೆ ರೂಪಿಸಿದ್ದಾರೆ. ಕಾಂಗ್ರೆಸ್ ಹಿಂದೆ ಬಿದ್ದಿಲ್ಲ. ಈ ಸಲ ಜಿಟಿಡಿ ಅವರಿಗೆ ತಿರುಗೇಟು ಕೊಡಲು ಕೈ ಪಡೆ ಮುಂದಾಗಿದೆ.
ಅದಕ್ಕಾಗಿ ಉಭಯ ಜಿಲ್ಲೆಗಳ ಕೆಲ ಕಾಂಗ್ರೆಸ್ ಶಾಸಕರು, ಅನೇಕ ಪ್ರಭಾವಿ ನಾಯಕರು ಸ್ಪರ್ಧೆ ಮಾಡುವ ಸಾಧ್ಯತೆ ಇದೆ.
ವಿಧಾನಸಭೆ, ಲೋಕಸಭಾ ಮೈತ್ರಿ ಮಾಡಿಕೊಂಡಿರುವ ಬಿಜೆಪಿ-ಜೆಡಿಎಸ್ ಈ ಚುನಾವಣೆಯಲ್ಲಿ ದೋಸ್ತಿಯನ್ನು ಮುಂದುವರಿಸಿಕೊಂಡು ಹೋಗಲು ಆಸಕ್ತಿ ತೋರಿದೆ. ಯಾವ ಕ್ಷೇತ್ರದಲ್ಲಿ ತಮ್ಮ ಪಕ್ಷದ ಪ್ರಭಾವ ಇರುವುದೋ ಅಲ್ಲಿ ತಮ್ಮ-ತಮ್ಮ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಲು ಚಿಂತನೆ ನಡೆಸಿವೆ. ಎರಡೂ ಪಕ್ಷಗಳು ಒಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಡಿಸಿಸಿ ಬ್ಯಾಂಕ್ ಅವಿಭಜಿತ ಮೈಸೂರು-ಚಾಮರಾಜನಗರ ಜಿಲ್ಲೆಯ ಸಹಕಾರ ಸಂಘಗಳು, ಸಹಕಾರ ಬ್ಯಾಂಕ್‌ಗಳಿಗೆ ಸಾಲವನ್ನು ಮಂಜೂರು ಮಾಡುವ ಪ್ರಮುಖ ಬ್ಯಾಂಕ್ ಆಗಿದೆ. ಇದರ ಮೇಲೆ ನಿಯಂತ್ರಣ ಸಾಧಿಸಿದರೆ ಉಭಯ ಜಿಲ್ಲೆಗಳ ರೈತರ ವಿಶ್ವಾಸವನ್ನು ಗಳಿಸಲು ಸಾಧ್ಯವಾಗುತ್ತದೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ರೈತರಿಗೆ ಈ ಬ್ಯಾಂಕ್‌ಗಳಲ್ಲಿ ಶೂನ್ಯ ಬಡ್ಡಿಯಲ್ಲಿ ಲಕ್ಷದವರೆಗೂ ಸಾಲವನ್ನು ನೀಡಲು ಅವಕಾಶ ಒದಗಿಸಿದೆ. ಆದ್ದರಿಂದ ರೈತರಿಗೆ ಸಾಲವನ್ನು ಕೊಡಿಸುವ ಮೂಲಕ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು, ರೈತರ ಒಲವು ಗಳಿಸಬಹುದು ಎಂಬ ಲೆಕ್ಕಾಚಾರ ಇದೆ. ಜತೆಗೆ, ಜನಪ್ರತಿನಿಧಿಗಳು ಇದರಲ್ಲಿ ಸ್ಪರ್ಧೆ ಮಾಡಿದರೆ ತಮ್ಮ ವರ್ಚಸ್ಸಿನ ಮೂಲಕ ಜಯ ಗಳಿಸುವುದು ಸುಲಭವಾಗಲಿದೆ.
35ನೇ ಅಧ್ಯಕ್ಷರಾಗಿ ಜೆಡಿಎಸ್‌ನ ಜಿ.ಡಿ.ಹರೀಶ್‌ಗೌಡ, ಉಪಾಧ್ಯಕ್ಷರಾಗಿ ಬಿಜೆಪಿಯ ಬಿ.ಎನ್.ಸದಾನಂದ ಅವಿರೋಧವಾಗಿ ಆಯ್ಕೆಯಾಗಿದ್ದರು. 5 ಕ್ಷೇತ್ರಗಳಿಗೆ ಅವಿರೋಧವಾಗಿ ನಿರ್ದೇಶಕರು ಆಯ್ಕೆಯಾಗಿತ್ತು. ಉಳಿದಂತೆ ತಿ.ನರಸೀಪುರದಿಂದ ಸಿ.ಬಸವೇಗೌಡ, ಹುಣಸೂರಿನಿಂದ ಜಿ.ಡಿ.ಹರೀಶ್‌ಗೌಡ, ಕೆ.ಆರ್.ನಗರದಿಂದ ಅಮಿತ್‌ವಿಶ್ವನಾಥ್, ಕೊಳ್ಳೇಗಾಲದಿಂದ ಆರ್.ನರೇಂದ್ರ, ಯಳಂದೂರಿನಿಂದ ವೈ.ಡಿ.ಜಯರಾಮ್ ಆಯ್ಕೆಯಾಗಿದ್ದರು. 17 ಸ್ಥಾನಗಳ ಪೈಕಿ ಉಳಿದ 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಬೆಂಬಲಿತ ಹಾಗೂ ಬ್ಯಾಂಕಿನ ಹಾಲಿ ಅಧ್ಯಕ್ಷ ಎಸ್.ಚಂದ್ರಶೇಖರ್ ಬಣಕ್ಕೆ ಸೋಲಾಗಿತ್ತು. ಈ ಬಣದ ಆರ್.ನರೇಂದ್ರ ಹಾಗೂ ಜಯರಾಮ್ ಮಾತ್ರ ಅವಿರೋಧವಾಗಿ ಆಯ್ಕೆಯಾಗಿದ್ದರು. ಸ್ವತಃ ಚಂದ್ರಶೇಖರ್ ಅವರು ಪರಾಭವಗೊಂಡಿದ್ದರು.