ಗ್ರಾಮದುದ್ದಕ್ಕೂ ಮೈದೆಳೆದ ದೇಶಭಕ್ತಿ ಕಳೆ

KLDG 20 PATHASANCHALAN
ಗದ್ದನಕೇರಿ ಕ್ರಾಸ್‌ನಲ್ಲಿ ಕಂಡ ಆರ್‌ಎಸ್‌ಎಸ್‌ನ ಗಣವೇಷಧಾರಿಗಳ ಪಥಸಂಚಲನದ ನೋಟ.
Published on

ಕಲಾದಗಿ: ಗಣವೇಷದಲ್ಲಿ ಶಿಸ್ತುಬದ್ಧ ಹೆಜ್ಜೆಹಾಕುತ್ತಿದ್ದ ಸಯಂಸೇವಕರು, ಲಯಬದ್ಧವಾಗಿ ಮೊಳಗುತ್ತಿದ್ದ ಘೋಷ್ ವಾದ್ಯ, ಅಲಂಕಾರಗೊಂಡ ರಸ್ತೆಗಳು, ದಾರಿಯ ಎರಡೂ ಬದಿಯಲ್ಲೂ ಪುಷ್ಪವೃಷ್ಠಿ, ಪಟಾಕ್ಷಿ ಸಿಡಿತ ಹಾಗೂ ದೇಶಭಕ್ತಿ ಪರ ಘೋಷಣೆಗಳು..

ಇದು ಸಮೀಪದ ಗದ್ದನಕೇರಿಯಲ್ಲಿ ಭಾನುವಾರ ಪ್ರಥಮಬಾರಿಗೆ ಬಾಗಲಕೋಟೆ ಗ್ರಾಮಾಂತರ, ತಾಲೂಕು, ಗದ್ದನಕೇರಿ ಹೋಬಳಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನದ ದೃಶ್ಯಗಳು.

ಸಂಜೆ 4.15 ಗಂಟೆಗೆ ಗದ್ದನಕೇರಿಯ ಸರ್ಕಾರಿ ಶಾಲೆಯಿಂದ ಆರಂಭವಾದ ಪಥಸಂಚಲನ ವೀರಪುಲಕೇಶಿ ಬ್ಯಾಂಕ್, ಸಪ್ತಗಿರಿ ಬಡಾವಣೆ 3ನೇ ಕ್ರಾಸ್, ಗಣೇಶ ಗುಡಿ, ಸಿದ್ರಾಮೇಶ್ವರ ಬಡಾವಣೆ, ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆೆ, ಏವೂರ್ ಬುಕ್‌ಸ್ಟಾಲ್, ಗ್ರಾಮ ಪಂಚಾಯಿತಿ, ಹಣಮಂತದೇವರ ಗುಡಿ(ಅಗಸಿ) ಮೂಲಕ ಸಾಗುತ್ತಿದ್ದಂತೆ ಗ್ರಾಮಸ್ಥರು ಮನೆಗಳು, ಅಂಗಡಿಗಳ ಮುಂದೆ ರಂಗೋಲಿ ಚಿತ್ತಾರ ಬಿಡಿಸಿ ಸ್ವಾಗತಿಸಿದರು. ಓಣಿಗಳೆಲ್ಲ ಕೇಸರಿ ತೋರಣಗಳಿಂದ ಅಲಂಕರಿಸಿದ್ದವು. ಪಥಸಂಚಲನದ ಮೇಲೆ ಗ್ರಾಮಸ್ಥರು ಪುಷ್ಪವೃಷ್ಠಿಗೈದು ಸಂಭ್ರಮಿಸಿದರು.

ಗಮನಸೆಳೆದ ಚಿಣ್ಣರ ವೇಷಗಳು: ಮಾರ್ಗದುದ್ದಕ್ಕೂ ಮಹಾತ್ಮ ಗಾಂಧಿ, ವನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ, ಛತ್ರಪತಿ ಶಿವಾಜಿ, ಸ್ವಾಮಿ ವಿವೇಕಾನಂದ ನೇತಾಜಿ ಸುಭಾಷಚಂದ್ರಭೋಸ್ ಸೇರಿ ವಿವಿಧ ದೇಶಭಕ್ತರ ವೇಷಧರಿಸಿ ಚಿಣ್ಣರು ಗಮನಸೆಳೆದರು.

ಪಥಸಂಚಲನ ಬಿ.ಎನ್.ಎ. ಇಟ್ಟಂಗಿ ಬಟ್ಟಿ ಆವರಣ ತಲುಪಿ ಅಲ್ಲಿ ಸಭೆ ನಡೆಸಿತು.

ಪೊಲೀಸ್ ಬಿಗಿ ಭದ್ರತೆ: ಡಿವೈಎಸ್‌ಪಿ ಪಂಪನಗೌಡ, ಸಿಪಿಐಗಳಾದ ಎಚ್.ಆರ್. ಪಾಟೀಲ, ಬಸವರಾಜ ಹಳಬಣ್ಣವರ, ಕೆ.ಟಿ. ಶೋಭಾ, ಪಿಎಸ್‌ಐ ಚಂದ್ರಶೇಖರ ಹೆರಕಲ್ ಮತ್ತಿತರರು ಸ್ಥಳದಲ್ಲಿದ್ದು ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net