

ಚಿತ್ರದುರ್ಗ: ಬುರುಜನಹಟ್ಟಿಯ ಐತಿಹಾಸಿಕ ಗರಡಿ ಮನೆಯಲ್ಲಿ ನೂಲು ಹುಣ್ಣಿಮೆ ಅಂಗವಾಗಿ ಶನಿವಾರ ಅತ್ಯಂತ ವಿಜೃಂಭಣೆಯಿಂದ ಮಟ್ಟಿ ಪೂಜಾ ಮಹೋತ್ಸವ ನೆರವೇರಿತು.
ಅಖಾಡಕ್ಕಿಳಿಯುವ ಮಣ್ಣಿನ ರಾಶಿಯಿಂದ ಮಟ್ಟಿ ನಿರ್ಮಿಸಿ ಅರಿಶಿಣ, ಕುಂಕುಮ, ಹಾಲು, ತುಪ್ಪ ಹಾಕಿ ಹದ ಮಾಡಿ ಸಂಪ್ರದಾಯದಂತೆ ಸಿದ್ಧಪಡಿಸಿ ಪೂಜೆ ಸಲ್ಲಿಸಲಾಯಿತು.
ಮಟ್ಟಿಗೆ ಮೇಲ್ಭಾಗ ಕೊಳಲು ನುಡಿಸುತ್ತಿರುವ ಶ್ರೀಕೃಷ್ಣ, ಮಧ್ಯ ಭಾಗದಲ್ಲಿ ಎದೆಬಗೆದು ಶ್ರೀರಾಮ ಸೀತಾ ಮಾತೆಯನ್ನು ಪ್ರದರ್ಶಿಸುವ ಆಂಜನೇಯ ಸ್ವಾಮಿ ಮಾದರಿಯ ಅಲಂಕಾರ ಆಕರ್ಷಣೀಯವಾಗಿತ್ತು.
ಗರಡಿ ಮನೆಯಲ್ಲಿನ ಗೋಪಾಲಕೃಷ್ಣ, ಆಂಜನೇಯ ಸ್ವಾಮಿ ಮೂರ್ತಿಗಳಿಗೆ ವಿಶೇಷ ಅಲಂಕಾರ ಸೇವೆ ನಡೆಯಿತು. ಅಲ್ಲದೆ, ಜಟ್ಟಿಗಳು ವ್ಯಾಯಾಮಕ್ಕೆ ಬಳಸುವ ಉಪಕರಣಗಳನ್ನು ಸಿಂಗರಿಸಲಾಗಿತ್ತು. ಸಂಜೆ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿತು. ಬಳಿಕ ಪ್ರಸಾದ ವಿತರಿಸಲಾಯಿತು.
ಗರಡಿ ಮನೆಯೂ ಸುಣ್ಣ ಬಣ್ಣ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿತು. ಸಂಚರಿಸುವ ಮಾರ್ಗವೂ ಇದಕ್ಕೆ ಹೊರತಾಗಿರಲಿಲ್ಲ. ಬುರುಜನಹಟ್ಟಿ ಗರಡಿ ಮನೆ ಯುವಕರ ಸಂಘದ ಪದಾಧಿಕಾರಿಗಳು, ಯುವಕರು ಉತ್ಸಾಹದಿಂದ ಪಾಲ್ಗೊಂಡು ಮಟ್ಟಿ ಪೂಜೆ ಕಣ್ತುಂಬಿಕೊಂಡರು.
ತೆಂಗಿನ ಕಾಯಿ ಹುಡುಕಿದವರಿಗೆ ವರ್ಷದ ಪೈಲ್ವಾನ ಪಟ್ಟ: ಮಟ್ಟಿ ಒಳಗೆ ತೆಂಗಿನ ಕಾಯಿ ಇರಿಸಲಾಗಿದ್ದು, ಭಾನುವಾರ ಮುಂಜಾನೆ ಪೈಲ್ವಾನರು ಅಖಾಡಕ್ಕೆ ಇಳಿದು ಯಾವುದೇ ಆಯುಧ ಅಥವಾ ಉಪಕರಣ ಬಳಸದೆ ಕೇವಲ ಕೈಯಿಂದಲೇ ಮಟ್ಟಿ ಒಡೆಯಲಾಗುತ್ತದೆ. ಈ ರೀತಿ ಮಟ್ಟಿ ಒಡೆದು ಒಳಗಿನಿಂದ ತೆಂಗಿನ ಕಾಯಿ ತೆಗೆಯುವವರನ್ನು ವರ್ಷದ ಪೈಲ್ವಾನ ಎಂಬ ಪಟ್ಟ ಕಟ್ಟುವ ಪದ್ಧತಿ ಈಗಲೂ ಮುಂದುವರೆದಿದೆ.