ಗಮನಸೆಳೆದ ದಸರಾ ಚಿತ್ರಕಲಾ ಪ್ರದರ್ಶನ

27rajesh4
Published on

ಚಾಮರಾಜನಗರ: ಜಿಲ್ಲಾ ಚಿತ್ರಕಲಾವಿದರ ಸಂಘದ ವತಿಯಿಂದ ದಸರಾ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯದ ಮುಂಭಾಗ ವಿವಿಧ ಕಲಾವಿದರು ರಚಿಸಿದ್ದ, ರಾಷ್ಟ್ರೀಯ ಪ್ರಾಣಿ ಹುಲಿ, ಬುದ್ಧ, ವಿಜಯನಗರ ಸಾಮ್ರಾಜ್ಯದ ಕಲ್ಲಿನ ರಥ, ರಾಧ-ಕೃಷ್ಣರ ಸಲ್ಲಾಪ, ಪ್ರಕೃತಿಯ ವಿವಿಧ ಮಜಲುಗಳನ್ನು ಸಾರುವ ವರ್ಣಚಿತ್ರಗಳು ಸಾರ್ವಜನಿಕರನ್ನು ತನ್ನತ್ತಾ ಕೈಬಿಸಿ ಕರೆಯುತ್ತಿದ್ದವು. ಚಿತ್ರಗಳನ್ನು ವೀಕ್ಷಿಸಿದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಅಪರೂಪವಾದ ಚಿತ್ರಕಲೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಲವು ವಿದ್ಯಾರ್ಥಿನಿಯರು ಚಿತ್ರಗಳನ್ನು ಸ್ಪರ್ಶಿಸಿ ಇದು ನಿಜವಾಗಿಯೂ ಚಿತ್ರಿಸಲಾಗಿದೆಯೇ ಎಂದು ಪರೀಕ್ಷಿಸುತ್ತಿದ್ದರು. ಹಾಗೆಯೇ ಇಷ್ಟವಾದ ವರ್ಣಚಿತ್ರಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಂಡರು. ಕೆಲವರು ಕಲಾವಿದರನ್ನು ಪರಿಚಯ ಮಾಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಈ ಬಾರಿ ಸರ್ಕಾರದ ವತಿಯಿಂದ ದಸರಾ ಮಹೋತ್ಸವ ಆಚರಣೆ ಮಾಡದೇ ಇದ್ದರೂ, ಕಲಾವಿದರೇ ಸೇರಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುತ್ತಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಖ್ಯಾತ ಚಿತ್ರಕಲಾವಿದರಾದ ಶಕ್ತಿಪ್ರಸಾದ್, ಅನಿಲ್‌ಕುಮಾರ್, ಸಿ.ಎನ್.ಸಂಪತ್ ಕುಮಾರ್, ಸಿ.ರಾಜಶೇಖರ್, ದುಂಡು ಮಹದೇವಸ್ವಾಮಿ, ಲೋಕೇಶ್ ಯರಗಂಬಳ್ಳಿ, ರಾಚಪ್ಪ, ಲೋಕೇಶ್ ಚಾಮರಾಜನಗರ, ಕೃಷ್ಣ ಅಂಕನಶೆಟ್ಟಿ ಪುರ, ವೆಂಕಟಯ್ಯನಛತ್ರ ಲೊಕೇಶ್, ರಾಜೇಶ್ ದೊಡ್ಡರಾಯಪೇಟೆ ಹಾಗೂ ಇತರರು ಹಾಜರಿದ್ದರು.

ವ್ಯಕ್ತಿತ್ವ ವಿಕಸನಕ್ಕೆ ಚಿತ್ರಕಲೆ ಸಹಕಾರಿ:

ನಮ್ಮ ಆಲೋಚನೆಗಳು ಶುದ್ಧವಾಗಿದ್ದಾಗ ಮಾತ್ರ ಚಿತ್ರಕಲಾವಿದನಾಗಲು ಸಾಧ್ಯವಿದ್ದು, ಚಿತ್ರಕಲೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದು ಸಿಮ್ಸ್ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್ ಹೇಳಿದರು. ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಚಿತ್ರಕಲಾವಿದರು ಸದಾಭಿರುಚಿಯ ಚಿತ್ರಗಳನ್ನು ರಚನೆ ಮಾಡುತ್ತಾರೆ. ಚಿತ್ರಕಲಾವಿದನ ಆಲೋಚನೆಗಳು ಕೂಡ ಸದಾಭಿರುಚಿಯಿಂದಲೇ ಕೂಡಿರುತ್ತದೆ. ನಮ್ಮ ಆಲೋಚನೆ ಶುದ್ಧವಾಗಿದ್ದಾಗ ಮಾತ್ರ ಚಿತ್ರಕಲಾವಿದನಾಗಲು ಸಾಧ್ಯವಾಗುತ್ತದೆ. ಚಿತ್ರಕಲೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜನೆ ಮಾಡಬೇಕು. ಇದರಲ್ಲಿ ಹಣ, ಆಸ್ತಿ ಎಂದಿಗೂ ಬರುವುದಿಲ್ಲ. ಆದರೆ ಪಾಶ್ಚಿಮಾತ್ಯರು ತಮ್ಮ ಜೀವನದಲ್ಲಿ ಗಳಿಸಿರುವುದನ್ನು ಕೊಟ್ಟು ಚಿತ್ರಗಳನ್ನು ಕೊಂಡೊಯ್ಯುತ್ತಾರೆ ಎಂದರು. ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸ್‌ಗೌಡ ಮಾತನಾಡಿ, ನಮ್ಮ ಜಿಲ್ಲೆಯ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದರು.

ನಾಡಹಬ್ಬದ ಅಂಗವಾಗಿ ಆಯೋಜಿಸಿರುವ ಚಿತ್ರಕಲೆ ಪ್ರದರ್ಶನ ಕಾರ್ಯಕ್ರಮ ಬಹಳ ಉಪಯುಕ್ತವಾಗಿದೆ. ಕಲಾವದಿರ ಕಲ್ಪನೆಯನ್ನೇ ನಾವು ದೇವರು ಪೂಜಿಸುತ್ತಿದ್ದೇವೆ. ಕಲಾವಿದರ ಸಕಾರಾತ್ಮಕ ಮನೋಧೋರಣೆ ಪ್ರತಿಯೊಬ್ಬರಿಗೂ ಆದರ್ಶನೀಯ.

ಮಹದೇವಸ್ವಾಮಿ, ಜಿಲ್ಲಾ ಕಾರ್ಯಾಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net