

ಮೈಸೂರು: ನಗರದಲ್ಲಿ ಚಾಲನೆ ದೊರೆತಿರುವ ಪ್ರಾಚೀನ ನಾಣ್ಯಗಳ ಪ್ರದರ್ಶನದಲ್ಲಿ ಹಲವು ರಾಷ್ಟ್ರಗಳ ಪುರಾತನ ನಾಣ್ಯ ಹಾಗೂ ನೋಟುಗಳು ಗಮನ ಸೆಳೆಯುತ್ತಿವೆ.
ಅಶೋಕ ರಸ್ತೆಯ ಕನ್ಯಕ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ದಿ ಏಂಷಿಯಂಟ್ ಟೈಮ್ಸ್ ಕಂಪನಿ ವತಿಯಿಂದ ಈ ಪ್ರದರ್ಶವನ್ನು ಆಯೋಜಿಸಲಾಗಿದೆ. ಆ.6ರವರೆಗೆ ನಡೆಯುವ ಪ್ರದರ್ಶನಕ್ಕೆ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಸಾರ್ವಜನಿಕರು ಭೇಟಿ ನೀಡಬಹುದು. ವಿಶ್ವದ ಹಲವು ದೇಶಗಳ ಕರೆನ್ಸಿಗಳು ಇಲ್ಲಿ ವೀಕ್ಷಣೆಗೆ ಲಭ್ಯ ಇವೆ.
ಬೆಂಗಳೂರು, ಕೇರಳದ ಕ್ಯಾಲಿಕಟ್, ದೆಹಲಿ, ಕೊಲ್ಕತ್ತ, ತಮಿಳುನಾಡು, ಸೂರತ್, ಮುಂಬೈ ಸೇರಿದಂತೆ ವಿವಿಧೆಡೆಯಿಂದ 30ಕ್ಕೂ ಹೆಚ್ಚು ಜನರು, ತಾವು ಸಂಗ್ರಹಿಸಿರುವ ಹಳೇ ನಾಣ್ಯ, ನೋಟು, ವಿವಿಧ ದೇಶಗಳ ಕರೆನ್ಸಿಗಳನ್ನು ತಂದು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಜತೆಗೆ, ವಿವಿಧ ದೇಶಗಳಲ್ಲಿ 2,600 ವರ್ಷಗಳ ಹಿಂದೆ ಚಾಲ್ತಿಯಲ್ಲಿದ್ದ ಕರೆನ್ಸಿಗಳು ಇಲ್ಲಿ ನೋಡಲು ದೊರೆಯಲಿವೆ.
ಈ ಪ್ರದರ್ಶನದಲ್ಲಿಟ್ಟಿರುವ ನಾಣ್ಯಗಳಲ್ಲಿ ಪ್ರಾಚೀನ ನಾಣ್ಯಗಳು ಕ್ರಿ.ಶ.600ರಿಂದ 1947 ರವರೆಗಿನ ಬ್ರಿಟಿಷ್ ಭಾರತದ ನಾಣ್ಯಗಳೂ ಇಲ್ಲಿವೆ. ಸ್ವಾತಂತ್ರ್ಯದ ಬಳಿಕ 2023ರ ವರೆಗೆ ಭಾರತದಲ್ಲಿ ಚಾಲ್ತಿಯಲ್ಲಿರುವ ನಾಣ್ಯಗಳನ್ನು ಕೆ.ಬಿ.ಬಾಬುರಾಜ್ ಅವರು ಪ್ರದರ್ಶಿಸಿದ್ದಾರೆ.