

ಧಾರವಾಡ: ಗ್ರಾಮಗಳಲ್ಲಿ ದನಗಳ ಸಂತೆ ನಡೆಸುವುದು ಸಾಮಾನ್ಯ. ಆದರೆ, ಈ ಗ್ರಾಮದಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ಹಾಲು ಹಿಂಡುವ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.
ತಾಲೂಕಿನ ಗರಗ ಗ್ರಾಮದ ಶ್ರೀ ಮಡಿವಾಳೇಶ್ವರ ಜಾತ್ರೆ ನಿಮಿತ್ತ, ಹೈನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶ್ರೀ ಜಗದ್ಗುರು ಮಡಿವಾಳೇಶ್ವರ ಕಲ್ಮಠ ಟ್ರಸ್ಟ್, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಎಪಿಎಂಸಿ ಸಹಯೋಗದಲ್ಲಿ ಬುಧವಾರ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯಲ್ಲೇ ಮೊದಲ ಬಾರಿ ನಡೆದ ಈ ವಿನೂತನ ಪ್ರಯತ್ನದಲ್ಲಿ ಗರಗ, ಹಂಗರಕಿ, ತಡಕೋಡ, ಕಬ್ಬೇನೂರ ಸೇರಿ ಸುತ್ತಲಿನ ಅನೇಕ ಗ್ರಾಮಗಳ ರೈತರು ಪಾಲ್ಗೊಂಡಿದ್ದರು. ಎಚ್ಎಫ್, ಜೆರ್ಸಿ ತಳಿ ಆಕಳು ಹಾಗೂ ಮುರ್ರಾ, ಸುರ್ತಿ ತಳಿಗಳ ಎಮ್ಮೆಗಳಿಗೆ ಪ್ರತ್ಯೇಕ ನಡೆದ ಸ್ಪರ್ಧೆಗಳಲ್ಲಿ ಹಾಲು ಹಿಂಡಲು ಅವುಗಳ ಮಾಲೀಕರಿಗೆ 20 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು.
ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಜಂಬುನಾಥ ಗದ್ದಿ ಮಾತನಾಡಿ, ಹೈನುಗಾರಿಕೆಗೆ ಪ್ರೋತ್ಸಾಹಿಸುವುದು, ಕೃಷಿ ಜತೆಗೆ ಉಪಕಸುಬುಗಳ ಮಹತ್ವ ತಿಳಿಸುವುದು ಮತ್ತು ನಿರುದ್ಯೋಗ ನಿವಾರಣೆ ಆಶಯದೊಂದಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಇದರ ಜತೆಗೆ ಹೈನುಗಾರರಿಗೆ ಜಾನುವಾರುಗಳ ವೈಜ್ಞಾನಿಕ ಪೋಷಣೆ ವಿಧಾನ, ಸ್ವಚ್ಛತೆ, ಖನಿಜಾಂಶಯುಕ್ತ ಆಹಾರ ನೀಡುವ ಕುರಿತು ತಿಳಿವಳಿಕೆ ನೀಡಲಾಗುತ್ತಿದೆ ಎಂದರು.
ಪಶುವೈದ್ಯ ಸೇವಾ ಇಲಾಖೆಯ ಡಾ. ಸಾಯಿಕುಮಾರ ಹಿಳ್ಳಿ, ಡಾ. ರಮೇಶ ಹೆಬ್ಬಳ್ಳಿ, ಡಾ. ಮುತ್ತನಗೌಡ, ಡಾ.ಆನಂದ ತಡೆಪ್ಪನವರ, ಡಾ.ಪ್ರಕಾಶ ಬೆನ್ನೂರ, ಡಾ. ಶರಣಬಸವ ಸಜ್ಜನ, ಕುಂತಿನಾಥ ಇಜಾರಿ, ಶಿವಲಿಂಗ ಕಾಶಿದಾರ್, ಪ್ರಕಾಶ ಸಂಗೊಳ್ಳಿ, ಇತರರು ಇದ್ದರು.
ಡಾ. ಎಚ್.ಆರ್. ಬಾಲನಗೌಡರ, ಡಾ. ಸುರೇಶ ಅರಕೇರಿ, ಡಾ. ತಿಪ್ಪಣ್ಣ ರಾಮಪುರೆ, ಡಾ. ಅಲ್ತಾಫ್ ಯಲ್ಲಾಪುರ, ಮಾರ್ತಾಡಪ್ಪ ಕತ್ತಿ ತೀರ್ಪಗಾರರಾಗಿದ್ದರು. ವಿಜೇತರಿಗೆ ನಗದು ಪುರಸ್ಕಾರ ಹಾಗೂ ಭಾಗವಹಿಸಿದ ಎಲ್ಲ ರೈತರಿಗೆ ಪಶು ಆಹಾರ ಮತ್ತು ಪೋಷಕಾಂಶಗಳನ್ನು ನೀಡಿ ಗೌರವಿಸಲಾಯಿತು.
ಸ್ಪರ್ಧೆ ವಿಜೇತರು: ಹಾಲು ಹಿಂಡುವ ಸ್ಪರ್ಧೆಯ ಆಕಳು ವಿಭಾಗದಲ್ಲಿ ಕಬ್ಬೇನೂರಿನ ಮಹಾಂತೇಶಗೌಡ ಮುದಿಗೌಡ್ರ (13.580 ಕೆ.ಜಿ.) ಪ್ರಥಮ, ಗರಗ ಗ್ರಾಮದ ಸಿದ್ದಲಿಂಗ ಎಚ್. ಚಿಕ್ಕಮಠ (13.192) ದ್ವಿತೀಯ, ಹಂಗರಕಿಯ ಪಾಲಾಕ್ಷಿಗೌಡ ನಾಗನಗೌಡ (12.416) ತೃತೀಯ, ಮಡಿವಾಳಪ್ಪ ಹುಲಗಣ್ಣನವರ (10.573) ಚತುರ್ಥ, ಧಾರವಾಡದ ಪ್ರವೀಣ ಘಾಟಗೆ (9.215) ಐದನೇ ಸ್ಥಾನ ಪಡೆದರು.
ಎಮ್ಮೆಗಳ ವಿಭಾಗದಲ್ಲಿ ಮಮ್ಮಿಗಟ್ಟಿಯ ಪ್ರಕಾಶಗೌಡ ಕರೆಕ್ಕನವರ (10.185) ಪ್ರಥಮ, ಗರಗನ ಮಡಿವಾಳೆಪ್ಪ ತುರಕಾರ (9.021) ದ್ವಿತೀಯ, ಧಾರವಾಡದ ಪ್ರವೀಣ ಘಾಟಗೆ (8.051) ತೃತೀಯ, ಹಂಗರಕಿಯ ಬಸವನಗೌಡ ನಾಗನಗೌಡರ (7.081) ಚತುರ್ಥ ಹಾಗೂ ಮಡಿವಾಳೆಪ್ಪ ಶಿಗಳ್ಳಿ (6.693) ಐದನೇ ಸ್ಥಾನ ಪಡೆದರು.