ಗಮನ ಸೆಳೆದ ಸಿರಿಧಾನ್ಯ ಹಬ್ಬ

mysore
Published on

ಮೈಸೂರು: ಸಿರಿಧಾನ್ಯ ಕೃಷಿಗೆ ಉತ್ತೇಜಿಸಲು, ಆಹಾರ ಅರಿವು ಮೂಡಿಸಲು ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ನಡಿಗೆ ಗಮನ ಸೆಳೆಯಿತು.

ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ‘ಸಿರಿಧಾನ್ಯ ನಡಿಗೆ’ ಜಿಲ್ಲಾಧಿಕಾರಿ ಕಚೇರಿಗೆವರೆಗೆ ನಡೆಯಿತು. ಹೆಜ್ಜೆ ಹಾಕಿದ ರೈತರು, ವಿದ್ಯಾರ್ಥಿಗಳು ನಾಗರಿಕರು ಸಿರಿಧಾನ್ಯ ಮಹತ್ವದ ಕುರಿತು ಅರಿವು ಮೂಡಿಸಿದರು.

ಬಳಿಕ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿರುವ ಪಿ.ಕಾಳಿಂಗರಾವ್ ಸಭಾ ಮಂಟಪದಲ್ಲಿ ಸಿರಿಧಾನ್ಯ ಹಬ್ಬ ಮೇಳೈಸಿತ್ತು. ಸಿರಿಧಾನ್ಯಗಳ ಸುಧಾರಿತ ಬೇಸಾಯ ಕ್ರಮಗಳು, ಮೌಲ್ಯವರ್ಧನೆ ಕುರಿತು ನುರಿತ ತಜ್ಞರು ಮಾಹಿತಿ ನೀಡಿದರು. ಸಿರಿಧಾನ್ಯಗಳಿಂದ ಮಾಡಿದ ಉತ್ಪನ್ನಗಳ ಮಾರಾಟ ಮಳಿಗೆಗಳು ಆಹಾರೋದ್ಯಮಿಗಳ ಸಾಧನೆಯನ್ನು ಬಿಂಬಿಸಿದವು.

ಜೋಳ, ರಾಗಿ, ಸಜ್ಜೆ, ಕಪ್ಪು ಸಾವೆ, ಹಸಿರುಕಡಲೆಕಾಳು, ಕಪ್ಪು ಕಡಲೆಕಾಳು, ಕಡಲೆಕಾಳು, ಬಿಳಿಭತ್ತ ಹೀಗೆ ಸಿರಿಧಾನ್ಯ ಸಿರಿಯ ಸಂಸ್ಕೃತಿ ಅನಾವರಣಗೊಂಡಿತ್ತು. ಜತೆಯಲ್ಲಿ ಸಿರಿಧಾನ್ಯ ಕೃಷಿಯಲ್ಲಿ ಬದುಕು ರೂಪಿಸಿಕೊಂಡ ಸಹಜ ಕೃಷಿಕರ ಮಾತುಗಳು ರಿಂಗಣಿಸಿದವು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್, ಸಿರಿಧಾನ್ಯಗಳಿಗೆ ವೈಜ್ಞಾನಿಕ ಬೆಲೆ ಸಿಕ್ಕಿದಾಗ ಮಾತ್ರ ರೈತರಿಗೆ ಉತ್ತಮ ಫಲ ದೊರೆಯಲು ಸಾಧ್ಯ. ಹೆಚ್ಚಿನ ಪ್ರಮಾಣದಲ್ಲಿ ಖನಿಜಗಳು, ಪೌಷ್ಟಿಕಾಂಶಗಳು, ಕ್ಯಾಲ್ಸಿಯಂ ಸಿಗುವುದು ಸಿರಿಧಾನ್ಯಗಳಲ್ಲಿ ಮಾತ್ರ. ಇವುಗಳು ಸಾಂಪ್ರದಾಯಿಕ ಬೆಳೆಗಳು.

mysore
ಆದರೆ ಕಾಲ ಬದಲಾದಂತೆ ಸಿರಿಧಾನ್ಯ ಕೃಷಿ ಕಡಿಮೆಯಾಗಿದೆ. ಸಿರಿಧಾನ್ಯ ಬೆಳೆಗಳಿಗೆ ಲಾಭದಾಯಕವಾದ ಹಾಗೂ ಸಮರ್ಪಕವಾದ ಬೆಲೆ ದೊರೆಯಬೇಕು. ಈ ಕೃಷಿ ಕುರಿತು ಅರಿವು, ಪ್ರಚಾರ ಹೆಚ್ಚು ಮಾಡಬೇಕು ಎಂದರು.

ಸಿರಿ ಎಂದರೆ ಲಕ್ಷ್ಮೀ, ಐಶ್ವರ್ಯ ಹಾಗೂ ಶ್ರೀಮಂತಿಕೆಯ ಸಂಕೇತ. ನಿತ್ಯ ಸೇವಿಸುವ ಆಹಾರಕ್ಕಿಂತ ಹೆಚ್ಚಿನ ಪೌಷ್ಟಿಕಾಂಶವನ್ನು ಸಮೃದ್ಧವಾಗಿ ಸಿರಿಧಾನ್ಯಗಳು ಹೊಂದಿದೆ. ಸಿರಿ ಎಂದರೆ ಅನೇಕ ಉತ್ತಮ ಗುಣಗಳಿರುವ ಒಂದು ಹೆಸರು. ಸಿರಿಧಾನ್ಯವೂ ಎಲ್ಲ ರೀತಿಯ ಗುಣ ಹೊಂದಿದೆ ಎಂದು ತಿಳಿಸಿದರು.

ಸಿರಿಧಾನ್ಯಗಳನ್ನು ಬೆಳೆಯುವುದರಲ್ಲಿ ರೈತ ಮಹಿಳೆಯರು ಹೆಚ್ಚಿನ ಸಂಖ್ಯೆ ತೊಡಗಿಸಿಕೊಂಡಿರುವುದು ಗಮನಾರ್ಹ ಸಂಗತಿ. ಕೃಷಿಕ ಮಹಿಳೆ ಹೆಚ್ಚು ಗೌರವ ಸ್ಥಾನ ಪಡೆದುಕೊಂಡಿದ್ದಾರೆ. ಮಹಿಳೆಯರು ಮನೆಯನ್ನು ನಡೆಸಿಕೊಂಡು ಹೋಗುವುದರ ಜತೆಗೆ ಹೊಲದಲ್ಲಿ ಕೆಲಸ ಮಾಡಿಕೊಂಡು ಕೃಷಿಗೆ ಬೆನ್ನಲುಬಾಗಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರ ಎಂದರು.

ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಕೃಷಿ ಕ್ಷೇತ್ರವನ್ನು ಕೈಗಾರೀಕರಣ ಮಾಡಬೇಕು. ಇದರಿಂದ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ, ಮಾರುಕಟ್ಟೆ ದೊರೆಯುತ್ತದೆ. ಆದರೀಗ ರೈತರು ಬೆಳೆದ ಬೆಳೆಗಳಿಗೆ ಉತ್ತಮವಾದ ಬೆಲೆ ಸಿಗುತ್ತಿಲ್ಲ. ಅದು ಮಧ್ಯವರ್ತಿಗಳ ಪಾಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು.

ಸರ್ಕಾರವು ಸಿರಿಧಾನ್ಯಕ್ಕೆ ಸಬ್ಸಿಡಿ ನೀಡಿದೆ. ಹೊಲದಲ್ಲಿ ಕೆಲಸ ಮಾಡುವ ರೈತರು ಭಯವನ್ನು ತೊರೆದು ಕೆಲಸ ಮಾಡುತ್ತಾರೆ. ಹೀಗಾಗಿ ಅನ್ನಕೊಡುವ ರೈತರನ್ನು ಮುಂಚೂಣಿಗೆ ತರಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ, ವಸ್ತುಪ್ರದರ್ಶನದ ಪ್ರಾಧಿಕಾರದ ಸಿಇಒ ರುದ್ರೇಶ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕಲ್ಮಳ್ಳಿ ಶಿವಕುಮಾರ್, ಕೃಷಿಕ ಸಮಾಜದ ಉಪಾಧ್ಯಕ್ಷ ನಾಗರಾಜು, ಸಾಲಿಗ್ರಾಮದ ಕೃಷಿಕ ಸಮಾಜದ ಅಧ್ಯಕ್ಷ ಅಣ್ಣೇಗೌಡ, ಪಿರಿಯಾಪಟ್ಟಣ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಫಿವುಲ್ಲಾ, ಎಚ್.ಡಿ. ಕೋಟೆ ತಾಲೂಕಿನ ಕೃಷಿಕ ಸಮಾಜದ ಅಧ್ಯಕ್ಷ ಕಾಳೇಗೌಡ, ರಾಜ್ಯ ರೈತ ಸಂಘದ ಬನ್ನೂರು ನಾರಾಯಣ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಎಲ್.ಟಿ. ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net