ಗಮನ ಸೆಳೆದ ಸಿರಿಧಾನ್ಯ ಮೇಳ

15
Published on

ಮೈಸೂರು: ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನದ ಸಿರಿಧಾನ್ಯ ಮೇಳವು ಸಿರಿಧಾನ್ಯಗಳ ಗ್ರಾಮೀಣ ಸೊಗಡು ಬಿಂಬಿಸಿತು.

ಸುಮಾರು 250ಕ್ಕೂ ಹೆಚ್ಚಿನ ಸಿರಿಧಾನ್ಯಗಳ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ರಾಗಿ, ಸಾವೆ, ನವಣೆ, ಸಜ್ಜೆ, ಜೋಳ, ಹಾರಕ, ಬರಗು, ಊದಲು, ಕೊರಲೆ ಇಲ್ಲಿ ಲಭ್ಯ ಇವೆ. ವಿವಿಧ ರೈತ ಗುಂಪುಗಳು ಸಿರಿಧಾನ್ಯ, ಅಕ್ಕಿ ಹಾಗೂ ಮೌಲ್ಯವರ್ಧಿತ ತಿನಿಸು ಗಮನ ಸೆಳೆದವು.

ಜಾರ್ಖಂಡ್, ಒಡಿಶಾ, ಛತ್ತೀಸಗಢ, ಮಧ್ಯಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯದ ಸಿರಿಧಾನ್ಯ ಬೆಳೆಗಾರರ ಗುಂಪುಗಳು ಭಾಗವಹಿಸಿವೆ. ಮಧ್ಯಪ್ರದೇಶದ ಬೈಗಾ ಸಮುದಾಯದ ಸಿಖಿಯಾ, ನಾಗಾಲ್ಯಾಂಡಿನ ಅಪರೂಪದ ಜಾಬ್ ಟಿಯರ್ಸ್ ಇಲ್ಲಿ ನೋಡಲು ಸಿಗಲಿದೆ.


ಕುಂದಗೋಳದ ‘ದೇವಧಾನ್ಯ ರೈತ ಉತ್ಪಾದಕರ ಕಂಪನಿಯು ಸಿರಿಧಾನ್ಯಗಳ ಅಕ್ಕಿ, ಮಹಿಳಾ ರೈತ ಗುಂಪುಗಳು ಮೌಲ್ಯವರ್ಧಿತ ಪದಾರ್ಥಗಳನ್ನು ಮಾರಾಟಕ್ಕೆ ಇಡಲಾಗಿದೆ. ಬಾಯಿ ಚಪ್ಪರಿಸಲು ದೇಸಿ ಅಡುಗೆ, ಕೈತೋಟದಲ್ಲಿ ಬಿತ್ತಲು ನಾಟಿ ಬೀಜ ಮತ್ತು ಸಾವಯವ ಪದಾರ್ಥಗಳು ಲಭ್ಯವಿವೆ.

ಹಣ್ಣಿನ ಗಿಡಗಳು, ಬಾಕಾಹು (ಬಾಳೆಕಾಯಿ ಹುಡಿ) ಪದಾರ್ಥಗಳು, ಸಾವಯವ ಬೀಜ, ಶುದ್ಧ ನೈಸರ್ಗಿಕ ಎಣ್ಣೆ, ಉಪ್ಪಿನಕಾಯಿ, ಐಸ್ ಕ್ರೀಂ, ಕರಕುಶಲ ಸಾಮಗ್ರಿಗಳು ಮಾರಾಟಕ್ಕೆ ಲಭ್ಯ ಇವೆ.

ಸಿರಿಧಾನ್ಯಗಳ ಅಡುಗೆ ಹಾಗೂ ರುಚಿಕರ ತಿನಿಸುಗಳನ್ನು ಇಲ್ಲಿಗೆ ಭೇಟಿ ನೀಡಿದವರು ಸವಿಯಬಹುದು. ವೈವಿಧ್ಯಮಯ ದೇಸಿ ತಿಂಡಿಗಳಾದ ಸಿರಿಧಾನ್ಯದ ಬಿಸ್ಕತ್, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಉಂಡೆಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net