ಗಮನ ಸೆಳೆದ ಶಾಲಾ ಮಕ್ಕಳ ನೃತ್ಯ

02
ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ಅರವಿಂದ ಶಾಲೆಯ ವತಿಯಿಂದ ಮಂಗಳವಾರ ನಗರದ ವಿವಿಧ ವೃತ್ತಗಳಲ್ಲಿ ದಿನವಿಡೀ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು.
Published on

ಹಾಸನ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ಅರವಿಂದ ಶಾಲೆಯ ವತಿಯಿಂದ ಮಂಗಳವಾರ ದಿನವಿಡೀ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕನ್ನಡ ಹಾಡಿಗೆ ನೃತ್ಯ ಪ್ರದರ್ಶಿಸಿ ನಗರದ ಜನತೆಯ ಗಮನ ಸೆಳೆದರು.

ನಗರದ ಕುವೆಂಪು ವೃತ್ತ, ದಾಸರಕೊಪ್ಪಲು, ಸಾಲಗಾಮೆ ವೃತ್ತ, ಸ್ಲೆಟರ್ಸ್ ಹಾಲ್ ವೃತ್ತ, ಹೇಮಾವತಿ ವೃತ್ತ, ಸಂತೆ ಪೇಟೆ, ಎನ್.ಆರ್ ವೃತ್ತ, ಆಡುವಳ್ಳಿ, ಡೈರಿ ವೃತ್ತ, ಭುವನಹಳ್ಳಿ ಸೇರಿ ಸುಮಾರು ಹತ್ತು ವೃತ್ತಗಳಲ್ಲಿ ಸಾಂಸ್ಕೃತಿಕ ವೈಭವವನ್ನು ಶಾಲಾ ಮಕ್ಕಳು ಸಾರಿದರು. ಕನ್ನಡ ಭಾಷೆ ಹಾಗೂ ನಾಡು, ನುಡಿ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯಕ್ರಮಗಳು ಜರುಗಿದವು. ಭರತನಾಟ್ಯ, ಕಂಸಾಳೆ, ಡೊಳ್ಳು ಕುಣಿತ ಹೀಗೆ ವಿವಿಧ ದೇಶೀಯ ಕಲೆಗಳು ಪ್ರದರ್ಶನಗೊಂಡವು. ಬೃಹತ್ ಕನ್ನಡ ಬಾವುಟದ ಮುಂದೆ ಮಕ್ಕಳು ಕನ್ನಡ ಭಾಷೆಯ ಹಾಡಿಗೆ ನೃತ್ಯ ಮಾಡಿದರು.

ಇದೆ ವೇಳೆ ಶಾಲೆಯ ಕನ್ನಡ ಶಿಕ್ಷಕ ಅರುಣ್ ಕುಮಾರ್ ಮಾತನಾಡಿ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಏರ್ಪಡಿಸಿದ್ದೇವೆ. ಕನ್ನಡ ನಶಿಸಿ ಹೋಗುತ್ತಿರುವ ಕಾಲದಲ್ಲಿ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇಂದಿನ ಯುವ ಪೀಳಿಗೆಗೆ ಇಂತಹ ಕಾರ್ಯಕ್ರಮ ಮಾದರಿಯಾಗಲಿದೆ ಎಂದರು.

ಇದೆ ವೇಳೆ ಸಂಸ್ಥೆಯ ಶಿಕ್ಷಕ ಅರವಿಂದ್, ಸಂಯೋಜಕ ಸಹ್ಯಾದ್ ಅಬ್ರಹಾಂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net