

ಹುಣಸೂರು: ತಾಲೂಕಿನ ಸಿಂಗರಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಗಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಪ್ರಯುಕ್ತ ಆಯೋಜಿಸಿದ್ದ ವಿಜ್ಞಾನ ವಸ್ತುಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ವಿದ್ಯಾರ್ಥಿಗಳು ತಾವು ತಯಾರಿಸಿದ್ದ ವಿಜ್ಞಾನದ ಮಾದರಿಗಳನ್ನು ನೋಡುಗರಿಗೆ ವಿವರಿಸಿದರು. ಒಂದೆಡೆ ಸೌರಮಂಡಲ, ರೋಬೋ, ಮಿದುಳಿನ ಮಾದರಿ, ಏರ್‌ಕೂಲರ್, ಹುಲ್ಲು ಕತ್ತರಿಸುವ ಯಂತ್ರ, ಚಲಿಸುವ ಜೇಡ ಮುಂತಾದ ಮಾದರಿಗಳನ್ನು ಪ್ರದರ್ಶಿಸಿ ಜನರ ಕುತೂಹಲ ತಣಿಸಿದರು.
ಮತ್ತೊಂದೆಡೆ ಪರಿಸರ ಕಾಳಜಿಯನ್ನು ಒಳಗೊಂಡ ಗೀತೆಗಳ ಗಾಯನ, ವಿಜ್ಞಾನ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡು ರಂಗೋಲಿಯ ಮೂಲಕ ದ್ಯುತಿಸಂಶ್ಲೇಷಣೆ ಕ್ರಿಯೆ, ಸೌರಮಂಡಲ, ಜೀರ್ಣಾಂಗ, ವಿಸರ್ಜನಾಂಗ ವ್ಯವಸ್ಥೆಗಳನ್ನು ಬಣ್ಣಬಣ್ಣದ ರಂಗೋಲಿಯ ಮೂಲಕ ಚಿತ್ರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಪರಿಸರ ಸ್ನೇಹಿ ಕರಕುಶಲ ವಸ್ತುಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. ಸರಳ ವಿದ್ಯುತ್‌ನ ಬೆಳಕಿನ ಗುಚ್ಛ, ಡೇಂಜರ್ ಅಲಾರಂ, ಆಮ್ಲ-ಪ್ರತ್ಯಾಮ್ಲಗಳ ಪ್ರಯೋಗಗಳು, ತಿರುಗುವ ಕಮಲ, ಜ್ವಾಲಾಮುಖಿ, ಮಿದುಳಿನ ಮಾದರಿ, ವಿಜ್ಞಾನ ಪುಸ್ತಕ ಪ್ರದರ್ಶನ ಹೀಗೆ ವೈಜ್ಞಾನಿಕ ಪ್ರಯೋಗಗಳು, ಮಾದರಿಗಳು ಇಡೀ ಶಾಲೆಯ ತುಂಬೆಲ್ಲಾ ಪಸರಿಸಿ ಗ್ರಾಮದ ಜನರ ಮನಗೆದ್ದಿತು.
ಪಡಿಒ ಮಂಜುಳಾ ಮಾತನಾಡಿದರು. ಗ್ರಾಪಂ ಸದಸ್ಯರಾದ ಮೀನಾಕ್ಷಮ್ಮಣ್ಣಿ, ಪಳನಿಸ್ವಾಮಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಮಂಗಳಾ, ಊರಿನ ಹಿರಿಯರಾದ ನಾಗರಾಜೇ ಅರಸ್ ಶಾಂತಾ ಇತರರು ಹಾಜರಿದ್ದರು.