ಗಮನ ಸೆಳೆದ ವಚನ ನೃತ್ಯರೂಪಕ

rangmandir 1
ಬೀದರ್‌ನ ರಂಗಮAದಿರದಲ್ಲಿ ಸಾಣೇಹಳ್ಳಿ ಶಿವಸಂಚಾರ ಕಲಾತಂಡದವರು ಪ್ರಸ್ತುತಪಡಿಸಿದ ನೃತ್ಯರೂಪಕ.
Published on

ಬೀದರ್: ವಿಶ್ವಗುರು ಬಸವಣ್ಣನವರ ೩೮ ವಚನಗಳ ಮೇಲೆ ಚಿತ್ರದುರ್ಗ ಸಾಣೇಹಳ್ಳಿಯ ಶಿವಸಂಚಾರ ಕಲಾತಂಡ ನಗರದಲ್ಲಿ ನೀಡಿದ ನೃತ್ಯರೂಪಕ ಗಮನ ಸೆಳೆಯಿತು.

ಮಹಾತ್ಮ ಬಸವೇಶ್ವರರ ಚಿಂತನೆಗಳನ್ನು ಯುವಪೀಳಿಗೆಗೆ ಪರಿಚಯಿಸುವ ಸದಾಶಯದಿಂದ ದೇಶಾದ್ಯಂತ ಸಂಚರಿಸುತ್ತಿರುವ ಸಾಣೇಹಳ್ಳಿ ಕಲಾತಂಡ ಸೋಮವಾರ ನಗರಕ್ಕೆ ಆಗಮಿಸಿತ್ತು. ಸಂಜೆ ಇಲ್ಲಿನ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನೀನಲ್ಲದೆ ಮತ್ತಾರೂ ಇಲ್ಲವಯ್ಯ ವಿಶಿಷ್ಟ ನೃತ್ಯರೂಪಕ ನೋಡುಗರ ಕಣ್ಮನ ಸೆಳೆಯಿತು. ವಚನಗಳ ಮೇಲೆ ವಿವಿಧ ಭಂಗಿಯಲ್ಲಿ ಕಲಾವಿದರು ನೃತ್ಯ ಮಾಡಿದರು.

ದಯವಿಲ್ಲದ ಧರ್ಮ ಯಾವುದಯ್ಯಾ ?, ಇವನಾರವ ಇವನಾರವ ಎಂದೆನಿಸದಿರಯ್ಯ, ನುಡಿದರೆ ಮುತ್ತಿನ ಹಾರದಂತಿರಬೇಕು, ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ ?, ತಂದೆ ನೀನು ತಾಯಿ ನೂನು, ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯಾ ಸೇರಿದಂತೆ ೩೮ ವಚನಗಳ ಸಾರ ವಿವರಿಸುತ್ತಾ ಕಲಾವಿದರು ಹೆಜ್ಜೆ ಹಾಕಿದರು. ಆಕರ್ಷಕ ಧ್ವನಿ ಬೆಳಕಿನಲ್ಲಿ ರಂಗಮಂದಿರ ಮಿಂದೆದ್ದಿತ್ತು.

ನೀನಲ್ಲದೆ ಮತ್ತಾರೂ ಇಲ್ಲವಯ್ಯ ಶೀರ್ಷಿಕೆ ಅಡಿ ದೇಶದ ವಿವಿಧೆಡೆ ಈ ನೃತ್ಯರೂಪಕ ೧೩ ರಾಜ್ಯಗಳಲ್ಲಿ ೩೯ ಪ್ರದರ್ಶನ ನೀಡಿದ್ದು, ನಗರದಲ್ಲಿ ೪೦ನೇ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಬಸವಣ್ಣನವರ ಬಾಲ್ಯ, ಅವರ ಸಾಮಾಜಿಕ ಕ್ರಾಂತಿ ನೃತ್ಯರೂಪಕದಲ್ಲಿ ಕಟ್ಟಿಕೊಟ್ಟರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಉದ್ಘಾಟಿಸಿದರು. ಪೂಜ್ಯ ಗಂಗಾಬಿಕೆ ಅಕ್ಕ, ಬೆಳಗಾವಿಯ ಪೂಜ್ಯ ಬಸವಗೀತಾ ತಾಯಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧಿಕಾರಿ ಗೋವಿಂದರಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ಎಸ್ಪಿ ಚನ್ನಬಸವಣ್ಣ ಲಂಗೋಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ, ಪ್ರಮುಖರಾದ ಹಾವಶೆಟ್ಟಿ ಪಾಟೀಲ್, ವಿರೂಪಾಕ್ಷ ಗಾದಗಿ, ಸ್ಫೂರ್ತಿ ಧನ್ನೂರ, ರಾಹುಲಕುಮಾರ ಮಿಶ್ರಾ ಇತರರಿದ್ದರು. ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಹಾಗೂ ರಾಷ್ಟ್ರೀಯ ಬಸವ ದಳದ ವತಿಯಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.

ವಚನಗಳು ನಮ್ಮ ಸಂಪತ್ತು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಭಾರತ ವಿಶ್ವಗುರು ಆಗಲಿದೆ. ಅಕ್ಕಮಹಾದೇವಿಯವರ ಒಂದು ವಚನ ನನ್ನಲ್ಲಿ ಬದಲಾವಣೆ ತಂದಿದೆ ಎಂದು ಸುಧಾಮೂರ್ತಿ ಹೇಳಿದ್ದಾರೆ. ಅನೇಕರು ಶರಣರ ವಚನಗಳಿಂದ ಪ್ರಭಾವಿತರಾಗಿ ಬದಲಾಗಿದ್ದಾರೆ.
| ಶ್ರೀ ಗುರುಬಸವ ಪಟ್ಟದ್ದೇವರು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net