

ಹುಣಸೂರು: ಪಟ್ಟಣದ ರೋಟರಿ ವಿದ್ಯಾಸಂಸ್ಥೆಯಲ್ಲಿ ಪೃಥ್ವಿ ಜುವೆಲ್ಲರ್ಸ್ ಸಹಯೋಗದಲ್ಲಿ ಬುಧವಾರ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಆಯೋಜಿಸಿದ್ದ ರಾಧಾಕೃಷ್ಣರ ವೇಷಭೂಷಣ ಸ್ಪರ್ಧೆಯಲ್ಲಿ ಹಿಂದು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಕ್ಕಳು ಭಾಗವಹಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು.
ಎರಡರಿಂದ ಐದು ವರ್ಷದವರೆಗಿನ ಮಕ್ಕಳಿಗಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 80ಕ್ಕೂ ಹೆಚ್ಚು ಮಕ್ಕಳು ರಾಧಾ- ಕೃಷ್ಣ ವೇಷಧಾರಿಯಾಗಿ ಭಾಗವಹಿಸಿದ್ದರು. ಪಾಲಕರು ಮಕ್ಕಳನ್ನು ಕೃಷ್ಣವೇಷ ತೊಡಿಸಿ, ರಾಧೆಯಾಗಿ ಸಿಂಗರಿಸಿ ಸಂಭ್ರಮಿಸಿ ಸ್ಪರ್ಧೆಗಿಳಿಸಿದ್ದರು. ಸಿಂಗಾರಗೊಂಡ ಮಕ್ಕಳಲ್ಲಿ ಕೆಲ ಮಕ್ಕಳು ಚೂಟಿಯಾಗಿ ವೇದಿಕೆಯಲ್ಲಿ ಕೊಳಲನ್ನು ಬೀಸುತ್ತ ನಿಂತರೆ, ಮತ್ತೆ ಕೆಲ ಪುಟಾಣಿಗಳು ಅಮ್ಮನನ್ನು ನೋಡುತ್ತ ಅಳುತ್ತಲೇ ಕೈಬೀಸುತ್ತಿದ್ದ ದೃಶ್ಯ ಮನಮೋಹಕವಾಗಿತ್ತು. ಕೃಷ್ಣವರ್ಣದ ಕೃಷ್ಣ, ರಾಧೆಯೊಂದಿಗೆ ಸರಸ ಸಲ್ಲಾಪದಲ್ಲಿರುವ ಕೃಷ್ಣ, ಕಡೆಗೋಲು ಹಿಡಿದು ಬಂದ ಬಾಲಕೃಷ್ಣ, ಬೆಣ್ಣೆ ಕದ್ದು ತಿನ್ನುವ ಕೃಷ್ಣ, ಕಾಳಿಂಗಮರ್ದನ ಮಾಡಿ ಹೆಮ್ಮೆಯಿಂದ ಬೀಗಿದ ಕೃಷ್ಣ… ಹೀಗೆ ಬಾಲಕೃಷ್ಣನ ವೇಷಧಾರಿಗಳು ವೇದಿಕೆಯ ಅಂದವನ್ನು ಹೆಚ್ಚಿಸಿದರು.
ಡಿ.ಸಿ.ವಿಧಾತ್ ಪ್ರಥಮ: ಸ್ಪರ್ಧೆಯಲ್ಲಿ ಡಿ.ಸಿ.ವಿಧಾತ್‌ಗೆ ಪ್ರಥಮ ಬಹುಮಾನ, ಜಸ್ವಂತ್(ದ್ವಿತೀಯ) ಹಾಗೂ ಚಿರಂತ್ ತೃತೀಯ ಸ್ಥಾನ ಗಳಿಸಿದರು. ಸಮಾಧಾನಕರ ಬಹುಮಾನವನ್ನು ಇಂಪನಾ ಮತ್ತು ಗುಣಸ್ಮಿತಾ ಪಡೆದುಕೊಂಡರು. ತೀರ್ಪುಗಾರರಾಗಿ ಕಲಾವಿದ ಲೋಕೇಶ್‌ಬಾಬು, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಅಕ್ಕ ನಾಗಶ್ರೀ, ಪೂಜಾ ಫ್ಯಾಷನ್ ಸ್ಟುಡಿಯೋದ ಪೂಜಾ ಭಾಗವಹಿಸಿದ್ದರು.
ರೋಟರಿ ಕ್ಲಬ್ ಅಧ್ಯಕ್ಷ ಚನ್ನಕೇಶವ, ಕಾರ್ಯದರ್ಶಿ ಕೆ.ಪಿ. ಪ್ರಸನ್ನ, ಇನ್ನರ್‌ವ್ಹೀಲ್ ಅಧ್ಯಕ್ಷೆ ಸ್ಮಿತಾ ದಯಾನಂದ್, ರೋಟರಿ ಸದಸ್ಯರಾದ ಸರೋಜಿನಿ, ಗಿರೀಶ್, ಆನಂದ್, ಶಾಮಣ್ಣ, ಪಾಂಡುಕುಮಾರ್ ಇತರರು ಇದ್ದರು.