

ಬೀದರ್: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಭಾಲ್ಕಿ ಹಿರೇಮಠ ಸಂಸ್ಥಾನ ಸಂಚಾಲಿತ ಡಾ. ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದ ವತಿಯಿಂದ ನಗರದಲ್ಲಿ ಶನಿವಾರ ನಡೆದ ಬೃಹತ್ ತಿರಂಗಾ ಕಾಲ್ನಡಿಗೆ ಜಾಥಾ ಸಾರ್ವಜನಿಕರ ಗಮನ ಸೆಳೆಯಿತು.
ಮೈಲೂರು ರಸ್ತೆಯಲ್ಲಿ ಇರುವ ಡಾ. ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಿಂದ ಆರಂಭವಾದ ಜಾಥಾ ವಿದ್ಯಾನಗರ ಕಾಲೊನಿ, ಚಿದ್ರಿ ರಸ್ತೆ, ವಿ.ಕೆ. ಇಂಟರ್‍ನ್ಯಾಷನಲ್ ಪದವಿ ಕಾಲೇಜು, ಬೀದರ್- ಮನ್ನಳ್ಳಿ ರಸ್ತೆ, ರಾಮ ಚೌಕ್, ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮೂಲಕ ಹಾಯ್ದು ಪುನಃ ಪ್ರಸಾದ ನಿಲಯಕ್ಕೆ ಬಂದು ಸಮಾರೋಪಗೊಂಡಿತು.
ರಾವ್ ಬಹಾದ್ದೂರ್ ಶಾಲೆ, ವಿ.ಕೆ. ಇಂಟರ್‍ನ್ಯಾಷನಲ್ ಪಬ್ಲಿಕ್ ಸ್ಕೂಲ್, ವಿದ್ಯಾಶ್ರೀ ಮಾದರಿ ಶಾಲೆ, ಅರುಣೋದಯ ಶಾಲೆ, ಜೀಜಾ ಮಾತಾ ಪ್ರೌಢಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ, ಗಂಗೋತ್ರಿ ಶಾಲೆ, ಆಕ್ಸ್‍ಫರ್ಡ್ ಶಾಲೆ, ರೇಣುಕಾ ಪದವಿಪೂರ್ವ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು 80 ಅಡಿ ಉದ್ದದ ರಾಷ್ಟ್ರ ಧ್ವಜ ಹಿಡಿದು ಹರ್ಷೋಲ್ಲಾಸದೊಂದಿಗೆ ಜಾಥಾದಲ್ಲಿ ಪಾಲ್ಗೊಂಡರು.
ಜಾಥಾದ ಉದ್ದಕ್ಕೂ ಬೋಲೋ ಭಾರತ ಮಾತಾ ಕೀ ಜೈ, ವಂದೇ ಮಾತರಂ ಎಂಬಿತ್ಯಾದಿ ಘೋಷಣೆಗಳು ಮುಗಿಲು ಮುಟ್ಟಿದವು. ಧ್ವನಿವರ್ಧಕದಲ್ಲಿ ಮೊಳಗಿದ ದೇಶಭಕ್ತಿ ಗೀತೆಯ ತಾಳಕ್ಕೆ ತಕ್ಕಂತೆ ವಿದ್ಯಾರ್ಥಿಗಳು, ಯುವಕರು, ಹಿರಿಯರು ಕುಣಿದು ಕುಪ್ಪಳಿಸಿದರು. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಕೂಡ ಹೆಜ್ಜೆ ಹಾಕಿ ಎಲ್ಲರನ್ನು ಹುರಿದುಂಬಿದರು.
ಇದಕ್ಕೂ ಮುನ್ನ ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಹಸಿರು ನಿಶಾನೆ ತೋರಿಸಿ ಜಾಥಾಕ್ಕೆ ಚಾಲನೆ ನೀಡಿದರು.
ಇಂದು ಇಡೀ ದೇಶವೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ ಪ್ರತಿಯೊಬ್ಬರೂ ತಮ್ಮ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ, ದೇಶಾಭಿಮಾನ ಮೆರೆಯಬೇಕು ಎಂದು ಅವರು ಮನವಿ ಮಾಡಿದರು.
ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ದೇಶದ ಪ್ರತಿಯೊಬ್ಬರಿಗೂ ರಾಷ್ಟ್ರಧರ್ಮವೇ ಮೊದಲಾಗಬೇಕು ಎಂದು ತಿಳಿಸಿದರು.
ನಮ್ಮ ಪೂರ್ವಜರು ತಂದುಕೊಟ್ಟ ಸ್ವಾತಂತ್ರ್ಯದಿಂದಾಗಿಯೇ ಇಂದು ನಾವು ಸ್ವತಂತ್ರವಾಗಿ, ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದು ಸಾನಿಧ್ಯ ವಹಿಸಿದ್ದ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.
ಸ್ವಾತಂತ್ರ್ಯ ಹೋರಾಟಗಾರರು, ಗಡಿ ಕಾಯುವ ಸೈನಿಕರು ಹಾಗೂ ಅನ್ನ ಕೊಡುವ ರೈತರೇ ದೇಶದ ನಿಜವಾದ ಹೀರೋಗಳು. ಯುವಕರು ಅವರನ್ನೇ ಮಾದರಿಯನ್ನಾಗಿಸಿಕೊಳ್ಳಬೇಕು ಎಂದು ಹೇಳಿದರು.
ಬಿಡಿಎ ಅಧ್ಯಕ್ಷ ಬಾಬುವಾಲಿ, ಜಿ.ಕೆ. ಫೌಂಡೇಷನ್ ಅಧ್ಯಕ್ಷ ಗುರುನಾಥ ಕೊಳ್ಳೂರು, ಮುಖಂಡರಾದ ಜಗದೀಶ ಖೂಬಾ, ಜೈರಾಜ ಖಂಡ್ರೆ, ಪ್ರಕಾಶ ಟೊಣ್ಣೆ, ರೇವಣಸಿದ್ದಪ್ಪ ಜಲಾದೆ, ವೈಜಿನಾಥ ಕಮಠಾಣೆ, ಶಿವಕುಮಾರ ಭಾಲ್ಕೆ, ಶರಣಪ್ಪ ಚಿಮಕೋಡ್, ಬಸವರಾಜ ಮಲ್ಕಪ್ಪನೋರ್, ಪ್ರೊ. ಉಮಾಕಾಂತ ಮೀಸೆ, ಮಲ್ಲಿಕಾರ್ಜುನ ಹುಡಗೆ, ಸಂಗ್ರಾಮ ಎಂಗಳೆ, ಸತ್ಯವಾನ್ ಬೋಗಾರ್, ಪ್ರಸಾದ ನಿಲಯದ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ, ಡಾ. ದಿಲೀಪ್ ಕಮಠಾಣೆ, ಪರಮೇಶ್ವರ ಬಿರಾದಾರ, ಸಂತೋಷ ಮಂಗಳೂರೆ, ಸುವರ್ಣ ಚಿಮಕೋಡೆ, ರೇಣುಕಾ ಮಂಗಳೂರೆ, ಗುಣವಂತ ಭಾವಿಕಟ್ಟಿ, ರಾಚಪ್ಪ ಪಾಟೀಲ, ಚಂದ್ರಕಾಂತ ಮಿರ್ಚೆ, ಲಕ್ಷ್ಮಿ ಬಿರಾದಾರ, ಶಾಂತಾ ಖಂಡ್ರೆ, ಮಾಲಾಶ್ರೀ ಹಜ್ಜರಗಿ, ಅಕ್ಕಮಹಾದೇವಿ ಬಳಗದ ಪದಾಧಿಕಾರಿಗಳು, ಅನುಭವ ಮಂಟಪ ಸಂಸ್ಕøತಿ ವಿದ್ಯಾಲಯ, ಪ್ರಸಾದ ನಿಲಯದ ವಿದ್ಯಾರ್ಥಿಗಳು ಇದ್ದರು. ಶರಣರ ದರ್ಶನ ಪ್ರವಚನ ಸ್ವಾಗತ ಸಮಿತಿಯ ಅಧ್ಯಕ್ಷ ಯೋಗೇಂದ್ರ ಯದಲಾಪುರೆ ಸ್ವಾಗತಿಸಿ, ನಿರೂಪಿಸಿದರು.