

ಚಿತ್ರದುರ್ಗ: ನಾಡಿನ ಪ್ರಸಿದ್ಧ ಕಲಾ ಪ್ರಕಾರಗಳಲ್ಲಿ ಗಮಕ ಕಲೆಯೂ ಒಂದು. ಶಾಸ್ತ್ರೀಯ ಸಂಗೀತ ಪ್ರಕಾರಗಳು ರಾಗ,ತಾಳಗಳಿಗೆ ಮಹತ್ವವನ್ನು ಕೊಟ್ಟರೆ, ಗಮಕ ಕಲೆ ವಿವಿಧ ರಸ ಭಾವಗಳಿಗೆ ವಿಶೇಷ ಮಹತ್ವ ಕೊಡುತ್ತದೆ ಎಂದು ಚಿತ್ರದುರ್ಗ ಹರಿದಾಸ ಹಬ್ಬದ ಮುಖ್ಯ ಪ್ರವರ್ತಕ ಹುಲಿರಾಜ್ ಜೋಯಿಸ್ ಹೇಳಿದರು.
ನಗರದ ಗಮಕಲಾಭಿಮಾನಿಗಳ ಸಂಘ ಗಾಯತ್ರಿ ಕಲ್ಯಾಣ ಮಂಟಪದ ಶಾರದಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಗಮಕ ವಾಚನ ಮತ್ತು ವ್ಯಾಖ್ಯಾನ ಸರಣಿ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರ,ಗಮಕದಲ್ಲಿ ವಿವಿಧ ರಸಾನುಭವಗಳ ಅನುಭವ ಶ್ರೋತೃಗಳಾಗುತ್ತದೆ. ಆದ್ದರಿಂದಲೇ ಈ ಕಲೆ ಇಂದಿಗೂ ಕಾವ್ಯ ರಸಿಕರ ಮೆಚ್ಚುಗೆ ಪಾತ್ರವಾಗುತ್ತಿದೆ ಎಂದರು.
ಸಂಘದ ಅಧ್ಯಕ್ಷೆ ಕೆ.ಆರ್.ರಮಾದೇವಿ ಅಧ್ಯಕ್ಷತೆ ವಹಿಸಿದ್ದರು. ಹೊಸಳ್ಳಿ ಮತ್ತೂರಿನ ಗಮಕಿಗಳಾದ ಡಾ.ಸನತ್‌ಕುಮಾರ್ ಸೋಮಯಾಜಿ ಅವರು, ಮಹಾಕವಿ ಹರಿಹರನ ಗಿರಿಜಾ ಕಲ್ಯಾಣ ಕಾವ್ಯವನ್ನು ವಾಚಿಸಿದರು. ರಾಜರಾಮ್‌ಮೂರ್ತಿ ವ್ಯಾಖ್ಯಾನಿಸಿದರು. ಮದಕರಿಪುರದ ಗ್ರಾಮೀಣ ಗಮಕ ಕಲಾವಿದ ಕೃಷ್ಣಪ್ಪ ಅವರು ಕುಮಾರವ್ಯಾಸ ಭಾರತದ ನಾಂದಿ ಪದ್ಯಗಳ ವಾಚಿಸಿದರು. ವಿದುಷಿ ಮೀನಾಕ್ಷಿ ಭಟ್ ಅವರು ಸ್ವಾಗತಿಸಿದರೆ,ಬಿ .ಎಲ್.ಉಮಾ ನಿರೂಪಿಸಿದರು. ಸುಶೀಲಪ್ರಸಾದ್ ವಂದಿಸಿದರು.