ಗಬ್ಬೆದ್ದು ನಾರುತ್ತಿದೆ ರಾಜೂರು

26 GAJENDRAGAD 1 A
Published on

ಗಜೇಂದ್ರಗಡ: ಸ್ವಚ್ಛತೆ ಕಾಣದೇ ಗಬ್ಬೆದ್ದು ನಾರುವ ಗಟಾರಗಳು. ಎಲ್ಲೂ ಕಾಣಿಸದ ಕಸದ ತೊಟ್ಟಿಗಳು. ಊರ ತುಂಬಾ ಗುಂಯ್ಗುಡುವ ಸೊಳ್ಳೆಗಳು. ಮೂಗು ಮುಚ್ಚಿಕೊಂಡೇ ಓಡಾಡುವ ಊರ ಜನರು...

ಇದು ಜಿಲ್ಲೆಯ ಪ್ರಮುಖ ವಾಣಿಜ್ಯ ಪಟ್ಟಣ ಎಂದೇ ಹೆಸರಾದ ಗಜೇಂದ್ರಗಡದಿಂದ ಕೇವಲ ನಾಲ್ಕು ಕಿ.ಮೀ. ದೂರದಲ್ಲಿರುವ ರಾಜೂರು ಗ್ರಾಮದ ವಾಸ್ತವ ಸ್ಥಿತಿಗತಿ.

ಗ್ರಾಮದ ಕೆಲವೆಡೆ ಅವೈಜ್ಞಾನಿಕ ಕಾಮಗಾರಿಗಳಿಂದ ಚರಂಡಿ ನೀರು ರಸ್ತೆ ಮೇಲೆ ನೀರು ಹರಿಯುತ್ತಿದೆ. ಅಲ್ಲದೆ, ತಗ್ಗುಗಳಲಿ ನೀರು ಸಂಗ್ರಹವಾಗಿ ದುರ್ನಾತ ಬೀರುತ್ತದೆ. ಕೊಳಚೆ ನೀರು ಒಂದೆಡೆ ಸಂಗ್ರಹವಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಹಗಲಲ್ಲೂ ಕಚ್ಚುತ್ತಿವೆ. ಹೀಗಾಗಿ ಇಡೀ ಊರಿನ ಜನರಿಗೆ ಮಲೇರಿಯಾ, ಡೆಂಘೆ, ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ. ಹಲವಾರು ಜನ ಈಗಾಗಲೇ ಆಸ್ಪತ್ರೆಗಳಿಗೆ ಅಲೆದಾಡಿ ಸುಸ್ತಾಗುತ್ತಿದ್ದಾರೆ. ಆದರೆ, ಸಂಬಂಧಪಟ್ಟ ಗ್ರಾಮ ಪಂಚಾಯಿತಿಯವರು ಸ್ವಚ್ಛತೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ. ಸುಮಾರು ನಾಲ್ಕು ಸಾವಿರ ಜನಸಂಖ್ಯೆ ಇರುವ ರಾಜೂರು ಗ್ರಾಮದಲ್ಲಿ ಇರೋದು ಒಂದೇ ಶುದ್ಧ ಕುಡಿಯುವ ನೀರಿನ ಘಟಕ. ಆದರೆ, ಅದು ಕೂಡ ಸಮರ್ಪಕ ನಿರ್ವಹಣೆ ಇಲ್ಲದೇ ಸಂಪೂರ್ಣ ನಿರುಪಯುಕ್ತವಾಗಿದೆ. ಶುಧ್ಧ ಕುಡಿಯುವ ನೀರು ಬೇಕೆಂದರೆ ಗ್ರಾಮಸ್ಥರು 4 ಕಿ.ಮೀ ದೂರದ ಗಜೇಂದ್ರಗಡಕ್ಕೆ ಹೋಗಿ ತರಬೇಕಿದೆ.

ರಾಜೂರ ಗ್ರಾ.ಪಂ.ಗೆ ಒಳಪಡುವ ಕಾಲಕಾಲೇಶ್ವರ, ಬೈರಾಪೂರ, ಬೈರಾಪೂರ ತಾಂಡಾ, ದಿಂಡೂರ ಗ್ರಾಮದ ಸಾರ್ವಜನಿಕರು ನರೇಗಾ, ರೇಷನ್ ಕಾರ್ಡ್, ರಹವಾಸಿ, ಜಾತಿ ಪ್ರಮಾಣಪತ್ರ ಸೇರಿದಂತೆ ಹಲವಾರು ಕೆಲಸಗಳಿಗಾಗಿ ಗ್ರಾಮ ಪಂಚಾಯಿತಿಗೆ ಬಂದರೆ ಕಂಪ್ಯೂಟರ್ ಆಪರೇಟರ್ ಸಮಯಕ್ಕೆ ಸರಿಯಾಗಿ ಬಾರದ ಕಾರಣ ಬರಿಗೈಲಿ ವಾಪಾಸ್ ಆಗುವ ಸ್ಥಿತಿ ನಿರ್ವಣವಾಗಿದೆ.

ಹಳ್ಳಿಗಳಲ್ಲಿ ಮೂಲ ಸೌಕರ್ಯ ಒದಗಿಸಲು ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತದೆ. ಆದರೆ, ಪಂಚಾಯಿತಿಗೆ ಬರುವ ಹಣ ಸಮರ್ಪಕವಾಗಿ ಬಳಕೆಯಾಗದೇ ಎಲ್ಲಿ ಖರ್ಚಾಗುತ್ತದೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ನೀರು, ಸೂರು ಸ್ವಚ್ಛತೆ ಸೇರಿದಂತೆ ಯಾವುದೇ ಕೆಲಸಗಳು ಸಮರ್ಪಕವಾಗಿ ಆಗದಿರುವುದು ಸ್ಥಳೀಯಲ್ಲಿ ಅಸಮಾಧಾನ ಮೂಡಿಸಿದೆ.

ಗ್ರಾಮ ಪಂಚಾಯಿತಿ ಊರಿನ ಹೊರ ಭಾಗದಲ್ಲಿ ಇರುವುದರಿಂದ ಗ್ರಾಮದ ಜನಪ್ರತಿನಿಧಿಗಳು, ಅಧಿಕಾರಿಗಳು ಊರಿನ ಒಳಗಡೆ ಬರಲ್ಲ. ಹೀಗಾಗಿ ಗ್ರಾಮದ ಸಮಸ್ಯೆಗಳು ಅವರಿಗೆ ಅರ್ಥವಾಗುವುದಿಲ್ಲ. ಊರನ್ನು ಸ್ವಚ್ಛವಾಗಿಡಲು ಅಧಿಕಾರಿಗಳು, ಜನಪ್ರತಿನಿದಿಗಳು ಶ್ರಮಿಸಬೇಕು ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಮುಂದೆ ಗ್ರಾಮಸ್ಥರೆಲ್ಲರು ಕೂಡಿ ಪ್ರತಿಭಟನೆ ಮಾಡಲಾಗುತ್ತದೆ. | ಶರಣು ಪೂಜಾರ ರಾಜೂರು ಗ್ರಾಮಸ್ಥ

ನಾನು ರಾಜೂರು ಗ್ರಾಪಂನಲ್ಲಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇನ್ನುಮುಂದೆ ರಾಜೂರ ಗ್ರಾ.ಪಂ.ಗೆ ಒಳಪಡುವ ಗ್ರಾಮಗಳನ್ನು ಸ್ವಚ್ಚ ಹಾಗೂ ಸುಂದರವಾಗಿಡಲು ಶ್ರಮಿಸುತ್ತೇನೆ. | ಎಂ.ಬಿ. ಇಟಗಿಮಠ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net