ಗಬ್ಬೆದ್ದು ನಾರುತ್ತಿದೆ ಬೆಟ್ಟದಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ

21BTP02
ಬೆಟ್ಟದಪುರ ಬಸ್ ನಿಲ್ದಾಣದ ಆವರಣದಲ್ಲಿ ಅಳೆತ್ತರಕ್ಕೆ ಬೆಳೆದು ನಿಂತಿರುವ ಗಿಡಗಂಟಿಗಳು.
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಶೌಚಗೃಹ ಆವರಣ ಗಬ್ಬೆದ್ದು ನಾರುತ್ತಿದ್ದು, ಸಾರ್ವಜನಿಕರು ದುರ್ವಾಸನೆಯ ಕಿರಿಕಿರಿ ಅನುಭವಿಸುವಂತಾಗಿದೆ.

ನಿಲ್ದಾಣದ ಕಾಂಪೌಂಡ್ ಬಳಿಯ ಹಳ್ಳದಲ್ಲಿ ಮೂತ್ರ ತುಂಬಿಕೊಂಡಿರುವ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ಸಂಕಟ ಪಡುವಂತಾಗಿದೆ.

ಪ್ರಮುಖ ಕೇಂದ್ರ: ಇಲ್ಲಿನ ಬಸ್ ನಿಲ್ದಾಣದಿಂದ ನಿತ್ಯ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಮೈಸೂರು, ಮಡಿಕೇರಿ, ಹಾಸನ, ಕೆ.ಆರ್ ನಗರ, ಪಿರಿಯಾಪಟ್ಟಣ, ಗೊಣಿಕೊಪ್ಪ ಸೇರಿದಂತೆ ವಿವಿಧೆಡೆಗೆ ಪ್ರಯಾಣ ಮಾಡುತ್ತಾರೆ. ಈ ಸಂದರ್ಭದಲ್ಲಿ ಮೂತ್ರ ಹಾಗೂ ಮಲ ವಿರ್ಸಜನೆ ಮಾಡುವುದಕ್ಕೆ ಇಲ್ಲಿನ ಶೌಚಗೃಹ ಬಳಸುವುದು ಸಾಮಾನ್ಯ. ಆದರೆ ಫಿಟ್ ಗುಂಡಿಯನ್ನು ನಿರ್ವಹಣೆ ಮಾಡದಿರುವ ಹಾಗೂ ಗುಂಡಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕಾಂಪೌಂಡ್ ಹಾಗೂ ನಿಲ್ದಾಣದ ಆವರಣ ಗಬ್ಬೆದ್ದು ನಾರುತ್ತಿದೆ. ಪರಿಣಾಮ, ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಎದುರಾಗಿದೆ.

ನಿಲ್ದಾಣ ಒಳ ಹಾಗೂ ಹೊರಭಾಗದಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದ ಕಸದ ರಾಶಿ ಹೆಚ್ಚಾಗಿ ಚಿಲ್ಲರೆ ಅಂಗಡಿಗಳಿಂದ ಖರೀದಿ ಮಾಡಿದ ತಿಂಡಿ, ಬಿಸ್ಕತ್ ಕವರ್‌ಗಳು ಎಲ್ಲೆಂದರಲ್ಲಿ ಬಿಸಾಡಿರುವ ಪರಿಣಾಮ ಸಮಸ್ಯೆ ಎದುರಾಗಿದೆ. ಬಸ್‌ಗಳು ನಿಲ್ಲುವ ಜಾಗ ಹೊರತುಪಡಿಸಿ ಉಳಿದೆಡೆ ಗಿಡಗಂಟಿ ಬೆಳೆದು ನಿಂತಿದೆ.

ಮಳೆ ಬಂದ ಸಂದರ್ಭದಲ್ಲಿ ಮಲ ಹಾಗೂ ಮೂತ್ರದ ದುರ್ವಾಸನೆ ಹೆಚ್ಚಾಗುವುದರಿಂದ ಈ ವ್ಯಾಪ್ತಿಯಲ್ಲಿ ನಿಲ್ಲುವುದಕ್ಕೂ ಆಗುವು ದಿಲ್ಲ. ನಿಲ್ದಾಣದ ಅವ್ಯವಸ್ಥೆಗೆ ಅಧಿಕಾರಗಳ ಜಾಣ ಕುರುಡತನವೇ ಕಾರಣವಾಗಿದ್ದು, ಸ್ವಚ್ಛತೆಯೊಂದಿಗೆ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ನಮ್ಮ ಮನೆ ಎದುರಿನಲ್ಲಿ ಬಸ್ ನಿಲ್ದಾಣ ಇದ್ದು, ಅಲ್ಲಿನ ಶೌಚಗೃಹದಿಂದ ಬರುವ ಮೂತ್ರ ಕಾಂಪೌಂಡ್ ಬಳಿ ಹರಡಿಕೊಂಡಿದೆ. ಇದರಿಂದ ನಿತ್ಯ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಟಿಸಿ ಹಾಗೂ ಡಿಪೋ ಮ್ಯಾನೇಜರ್ ಬಳಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಶೀಘ್ರ ಸಮಸ್ಯೆ ಬಗೆಹರಿಸದಿದ್ದರೆ ಸ್ಥಳೀಯರು ಒಟ್ಟಾಗಿ ಸೇರಿ ಶೌಹಗೃಹಕ್ಕೆ ಬೀಗ ಜಡಿಯಲಾಗುವುದು.
ಸುರೇಶ್ ಸ್ಥಳೀಯ ನಿವಾಸಿ, ಬೆಟ್ಟದಪುರ

ಈಗಾಗಲೇ ಈ ಸಂಬಂಧ ವ್ಯವಸ್ಥಾಪಕರ ಗಮನ ಸೆಳೆಯಲಾಗಿದೆ. ಅಲ್ಲದೆ, ಶೌಚಗೃಹವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು.
ರಮೇಶ್, ಟಿಸಿ, ಬೆಟ್ಟದಪುರ ಬಸ್ ನಿಲ್ದಾಣ

ಬೆಟ್ಟದಪುರ ಬಸ್ ನಿಲ್ದಾಣ ಬಳಿಯ ಶೌಚಗೃದದ ಫಿಟ್ ಗುಂಡಿ ತುಂಬಿದ ಪರಿಣಾಮ ಈ ಸಮಸ್ಯೆ ಉಂಟಾಗಿದೆ. ಕಳೆದ ಬಾರಿಯೂ ಇದೇ ರೀತಿ ಸಮಸ್ಯೆ ಉಂಟಾದಾಗ ಸ್ವಚ್ಛಗೊಳಿಸಲಾಗಿತ್ತು. ಮತ್ತೆ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದ್ದು, ಮಾಹಿತಿ ಪಡೆದು ಪರಿಶೀಲನೆ ಮಾಡಲಾಗಿದೆ. ಒಂದೆರೆಡು ದಿನದಲ್ಲಿ ಸಮಸ್ಯೆ ಬಗೆಹರಿಸಲಾಗುವುದು.
ದರ್ಶನ್ ಘಟಕ ವ್ಯವಸ್ಥಾಪಕ ಪಿರಿಯಾಪಟ್ಟಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net