ಗಬ್ಬೆದ್ದು ನಾರುತ್ತಿದೆ ಕಾರ್ಮಾಡು

24 VTP 3 kolache
ಅಮ್ಮತ್ತಿ ಪಟ್ಟಣದಲ್ಲಿರುವ ಕೊಳಚೆ ಚರಂಡಿ
Published on

ವಿರಾಜಪೇಟೆ: ಪಂಚಾಯಿತಿಯ ದುರಾಡಳಿತದಿಂದ ಕಾರ್ಮಾಡು ಗ್ರಾಮ ಗಬ್ಬೆದ್ದು ನಾರುತ್ತಿದ್ದು, ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ಸಾರ್ವಜನಿಕರ ದೂರಿಗೆ ಯಾವುದೇ ಮನ್ನಣೆ ನೀಡುತ್ತಿಲ್ಲ ಎಂದು ಕಾರ್ಮಾಡು ವಲಯ ಅಧ್ಯಕ್ಷ ಜಾಲಿ ಪೂಣಚ್ಚ ಆರೋಪಿಸಿದ್ದಾರೆ.

ಅಮ್ಮತ್ತಿ ಪಟ್ಟಣದಿಂದ ಪಾಲಿಬೆಟ್ಟಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ಹೋಟೆಲ್, ಬೇಕರಿ ಈ ಅಂಗಡಿಗಳಿಂದ ಹರಿದು ಬರುವ ಕೊಳಚೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದೆ ದುರ್ನಾತ ಬೀರುತ್ತಿದೆ. ಇದರಿಂದ ಸಾರ್ವಜನಿಕರು ಅಂಗಡಿ- ಮುಂಗಟ್ಟುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಸ್ಥಳೀಯ ಕಾರ್ಮಾಡು ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಭಾಗದಲ್ಲಿ ಶಾಲೆಗಳು, ದೇವಸ್ಥಾನಗಳಿದ್ದು, ನೂರಾರು ಮಂದಿ ಇದೇ ದಾರಿಯಲ್ಲಿ ಸಂಚರಿಸಬೇಕಾಗಿದೆ.

ಮುಂದಿನ ದಿನಗಳಲ್ಲಿ ಬೇಸಿಗೆ ಕಾಲ ಬರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಸಾರ್ವಜನಿಕರಲ್ಲಿ ಎದುರಾಗಿದೆ. ನೈರ್ಮಲ್ಯ ಹಾಗೂ ಶುಚಿತ್ವವನ್ನು ಕಾಪಾಡಬೇಕಾದ ಪಂಚಾಯಿತಿಯ ವ್ಯವಸ್ಥೆ ತೆರಿಗೆ ಸಂಗ್ರಹಕ್ಕೆ ಮಾತ್ರ ಸೀಮಿತವಾಗಿದೆ. ಅಭಿವೃದ್ಧಿ ಕಾರ್ಯ ಶೂನ್ಯವಾಗಿದೆ. ಒಂದು ವಾರದಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸದಿದ್ದರೆ ಪಕ್ಷದ ವತಿಯಿಂದ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net