

ಮೂರ್ತಿ ಟಿ.ಸಿ.ಎಸ್.ತಿಪಟೂರು
ತಿಪಟೂರಿನ ಸರ್ವೇ ನಂಬರ್ 1ರಲ್ಲಿರುವ ಅಮಾನಿಕೆರೆಯ ಕರ್ಮಕಾಂಡ ಎಳೆಎಳೆಯಾಗಿ ಬಯಲಾಗುತ್ತಿದೆ.
ಕೆರೆ ಅಂಗಳ, ರಾಜಕಾಲುವೆಗಳನ್ನು ರಸಿ ಎಂದು ಸುಪ್ರೀಂಕೋರ್ಟ್ ಪದೇಪದೇ ಹೇಳುತ್ತಿದ್ದರೆ, ಇತ್ತ 2005ರಲ್ಲಿ ಅಮಾನಿಕೆರೆ ಅಂಗಳವನ್ನೇ ಡಿ&ನೋಟಿಫಿಕೇಷನ್ ಮಾಡಿದ ಸರ್ಕಾರವು ಸಾರ್ವಜನಿಕ ಉದ್ದೇಶದ ಬಳಕೆಗೆಂದು ವಿವಿಧ ಇಲಾಖೆಗಳಿಗೆ ಹಂಚಿದೆ.
ಭೂಮಿ ಮಂಜೂರು ಮಾಡಿಸಿಕೊಂಡಿರುವ ಇಲಾಖೆಗಳು ಇಲ್ಲಿವರೆಗೂ ಭೂಮಿಯನ್ನು ಹದ್ದುಬಸ್ತುಗೊಳಿಸಿ, ಉದ್ದೇಶಿತ ಕೆಲಸಕ್ಕೆ ಬಳಸದೆ ಖಾಲಿ ಬಿಟ್ಟಿರುವುದರಿಂದ ಕೆರೆ ಅಂಗಳ ತ್ಯಾಜ್ಯ ನೀರಿನಿಂದ ತುಂಬಿ ತುಳುಕುತ್ತಿದೆ.
ಹಳೇಪಾಳ್ಯಕ್ಕೆ ಸಂಪರ್ಕ ರಸ್ತೆ ನಿರ್ಮಿಸಿದ ಬಳಿಕ ಕೆರೆಯ ಒಂದು ಭಾಗವನ್ನು ವಿವಿಧ ಇಲಾಖೆಗಳ ಕೋರಿಕೆ ಮೇರೆಗೆ ಕೆಎಸ್ಆರ್ಟಿಸಿ ಬಸ್ ಡಿಪೋ, ಮತ್ತು ನೌಕರರ ವಸತಿ ಗೃಹ ನಿರ್ಮಾಣಕ್ಕೆಂದು 6 ಎಕರೆ, ರೈತ ಬಜಾರ್ ನಿರ್ಮಿಸಲು ಎಪಿಎಂಸಿಗೆ 2 ಎಕರೆ, ಖಾಸಗಿ ಬಸ್ ನಿಲ್ದಾಣ ನಿರ್ಮಿಸಲು ನಗರಸಭೆಗೆ 3 ಎಕರೆ, ಸಣ್ಣ ನೀರಾವರಿ ಇಲಾಖಾ ಕಚೇರಿ ನಿರ್ಮಾಣಕ್ಕೆ ಒಂದು ಎಕರೆ ಮತ್ತು ನಿರ್ಮಿತಿ ಕೇಂದ್ರ ಹಾಗೂ ಯುವಕ ತರಬೇತಿ ಕೇಂದ್ರ ನಿರ್ಮಾಣಕ್ಕೆ 1.30 ಎಕರೆ ( ಈ ಪೈಕಿ ಸರ್ಕಾರ ನಿಗದಿಪಡಿಸಿದ ಕಿಮ್ಮತ್ತು ಕಟ್ಟದ ಕಾರಣ ನಿರ್ಮಿತಿ ಕೇಂದ್ರಕ್ಕೆ ಮಂಜೂರಾಗಿದ್ದ 1.30 ಎಕರೆ ಜಾಗ ಹಾಗೇ ಉಳಿದಿದೆ) ಸೇರಿ ಒಟ್ಟು 13.30 ಎಕರೆ ಕೆರೆ ಅಂಗಳವನ್ನು ಎಲ್ಎನ್ಡಿ (ಟಿಪಿಟಿ) ಸಿಆರ್ 119/ 2001&02 ಏ.18 2005ರಲ್ಲಿ ಅಂದಿನ ಜಿಲ್ಲಾಧಿಕಾರಿ ಎಂ.ಬಿ.ದ್ಯಾಬೇರಿ ಮಂಜೂರು ಮಾಡಿದ್ದರು. ಮಂಜೂರಾದ ಭೂಮಿಯನ್ನು 2 ವರ್ಷಗಳ ಒಳಗೆ ಉದ್ದೇಶಿತ ಬಳಕೆಗೆ ಉಪಯೋಗಿಸದಿದ್ದರೆ ಮಂಜೂರಾತಿ ತಂತಾನೆ ರದ್ದಾಗುತ್ತದೆ ಎಂಬ ಷರತ್ತು ವಿಧಿಸಲಾಗಿತ್ತು. ಈ ಪೈಕಿ ಕೆಎಎಸ್ಆರ್ಟಿಸಿ ಮತ್ತು ಎಪಿಎಂಸಿ ಇಲಾಖೆಗಳು ಷರತ್ತಿಗನುಗುಣವಾಗಿ ಮಂಜೂರಾದ ಭೂಮಿಯಲ್ಲಿ ಕಟ್ಟಡ ನಿರ್ಮಿಸಿ, ಬಳಸುತ್ತಿವೆ. ಆದರೆ ನಗರಸಭೆಗೆ ಮಂಜೂರಾಗಿರುವ 3 ಎಕರೆ ಭೂಮಿ ಪೈಕಿ ಒಂದು ಬದಿ ಖಾಸಗಿ ಬಸ್ ನಿಲ್ದಾಣ ನಿರ್ಮಿಸಿ ಉಳಿದಿರುವುದನ್ನು ಖಾಲಿ ಬಿಟ್ಟಿರುವುದು, ಮತ್ತು ನಿರ್ಮಿತಿ ಕೇಂದ್ರಕ್ಕೆ ಮಂಜೂರಾಗಿದ್ದ 1.30ಎಕರೆ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಮಂಜೂರಾಗಿದ್ದ 1 ಎಕರೆ ಭೂಮಿ (ಕೆರೆ ಅಂಗಳ ) ಈಗಲೂ ಖಾಲಿ ಉಳಿದಿದೆ. ಇದನ್ನು ಖಾಲಿ ಬಿಟ್ಟರೆ ಚೆನ್ನಾಗಿ ಕಾಣಲ್ಲ ಎಂಬ ಉದ್ದೇಶಕ್ಕೋ, ಏನೊ? ನಗರಸಭೆ ಚರಂಡಿ ಮತ್ತು ರಾಜ ಕಾಲುವೆಯ ತ್ಯಾಜ್ಯ ನೀರನ್ನು ಯಥೇಚ್ಚವಾಗಿ ಕೆರೆ ಅಂಗಳಕ್ಕೆ ಹರಿಸಲಾಗುತ್ತಿದೆ. ಪರಿಣಾಮ ಇಡೀ ಕೆರೆ ಅಂಗಳ ಕಡುಗಪ್ಪು ನೀರಿನಿಂದ ಭರ್ತಿಯಾಗಿದೆ. ನೀರಿನ ಮೇಲ್ಮೆಯೇ ಕಾಣದಷ್ಟು ದಟ್ಟವಾಗಿ ಪಾಚಿ ಬೆಳೆದಿದೆ. ಎಪಿಎಂಸಿ ಮಾರುಕಟ್ಟೆಗೆ ಹೋಗುವವರು ಈ ಪ್ರದೇಶದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ರಾಜಕಾಲುವೆ ಒತ್ತುವರಿ: ಈ ಕೆರೆಗೆ ನೀರು ಬರುತ್ತಿರುವುದು ಎತ್ತರದ ಗಾಂಧಿನಗರ ಮತ್ತು ಐಬಿ ವೃತ್ತದ ರಾಜಕಾಲುವೆ ಮೂಲಕ ಎನ್ನಲಾಗುತ್ತಿದೆ. ಸುಪ್ರೀಂಕೋರ್ಟಿನ ಸ್ಪಷ್ಟ ಆದೇಶದಂತೆ ರಾಜಕಾಲುವೆ ಒತ್ತುವರಿ ಮಾಡುವಂತಿಲ್ಲ, ಆದರೆ ಒಂದು ಚೈನ್ (33 ಅಡಿ ಅಗಲ) ವಿಸ್ತೀರ್ಣದ ರಾಜಕಾಲುವೆಯ ಎರಡೂ ಬದಿಗಳಲ್ಲಿ 33 ಮೀಟರ್ ವ್ಯಾಪ್ತಿಯ ಬಫರ್ ಜೋನ್ ಹೊಂದಿರಬೇಕಾದ ರಾಜಕಾಲುವೆ ಜಾಗದಲ್ಲಿ ಬಾಕ್ಸ್ ಡ್ರೆನ್ ನಿರ್ಮಿಸಲಾಗಿದೆ.
ರಾಜ ಕಾಲುವೆಗೆ ಚರಂಡಿ ನೀರನ್ನು ಬಿಡಬೇಡಿ ಎಂದು ನಗರಸಭೆಗೆ ಪತ್ರ ಬರೆಯಲಾಗಿದೆ. ರಾಜ ಕಾಲುವೆ ವಿಸ್ತೀರ್ಣ ಗುರುತಿಸಿಕೊಡಲು ಸರ್ವೇ ಇಲಾಖೆಗೆ ಕೋರಲಾಗಿದೆ. ನಂತರ ಸೂಕ್ತ ಕ್ರಮ ವಹಿಸಲಾಗುವುದು. > ದೊಡ್ಡಯ್ಯ, ಸಣ್ಣ ನೀರಾವರಿ ಇಲಾಖೆ ಅಭಿಯಂತ ತಿಪಟೂರು. ಖಾಲಿ ಇರುವ ಜಾಗದಲ್ಲಿ ಫುಡ್ಪಾರ್ಕ್ ನಿರ್ಮಿಸಲು ಬಜೆಟ್ನಲ್ಲಿ ಒಂದು ಕೋಟಿ ರೂಪಾಯಿ ಮೀಸಲಿಡಲಾಗಿದೆ. ರಾಜಕಾಲುವೆಗೆ ಯುಜಿಡಿ ನೀರು ಬಿಟ್ಟಿಲ್ಲ. ನಿಂತು, ನಿಂತು ಸಾಗುವ ಮಳೆ ನೀರು ಕಪ್ಪು ಬಣ್ಣಕ್ಕೆ ತಿರುಗಿರಬಹುದು. > ಪಿ.ಜೆ.ರಾಮ ಮೋಹನ್ ನಗರಸಭೆ ಅಧ್ಯಕ್ಷ