

ಪಾಂಡವಪುರ: ಪಟ್ಟಣದ ಹೃದಯ ಭಾಗದ ರಸ್ತೆಗಳು ಹದಗೆಟ್ಟಿವೆ. ಚರಂಡಿಗಳಲ್ಲಿ ಕಸ-ಕಡ್ಡಿಗಳು ಕಟ್ಟಿಕೊಂಡು ಗಬ್ಬು ನಾರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ಎಲ್.ಅಶೋಕ್ ಆರೋಪಿಸಿದರು.
ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು ಅಧ್ಯಕ್ಷತೆಯಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಉಪಸ್ಥಿತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಹಳೇ ಬಸ್ ನಿಲ್ದಾಣ ಮತ್ತು ದೊಡ್ಡಿಬೀದಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿ ಚರ್ಚೆ ಮಾಡಿದರು. ದೊಡ್ಡಬೀದಿ ರಸ್ತೆ ಡಾಂಬರೀಕರಣಗೊಂಡು 20 ವರ್ಷ ಕಳೆದಿದೆ. ಕಸ ವಿಲೇವಾರಿಯಾದ ಕೆಲವೇ ಹೊತ್ತಿನಲ್ಲಿ ಮತ್ತೆ ಕಸದ ರಾಶಿ ಸಂಗ್ರಹವಾಗುತ್ತಿದೆ. ಪ್ರಮುಖ ರಸ್ತೆಗಳಲ್ಲಿ ವಾಟರ್ ಲೈನ್ ಪೈಪ್ ಒಡೆದು ನೀರು ಹರಿಯುತ್ತಿದೆ. ಇಷ್ಟಾದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಶಾಸಕರನ್ನು ಅಭಿವೃದ್ಧಿ ಹರಿಕಾರ ಎನ್ನುತ್ತಾರೆ ಆದರೆ ಪಟ್ಟಣದ ರಸ್ತೆಗಳೇ ಅಭಿವೃದ್ಧಿಯಾಗಿಲ್ಲ. ಕಸದ ರಾಶಿಗಳು ಅಲ್ಲಲ್ಲಿ ಕಾಣಸಿಗುತ್ತಿವೆ ಎಂದರು. ಮಧ್ಯೆ ಪ್ರವೇಶಿಸಿದ ಶಾಸಕ ಸಿ.ಎಸ್.ಪುಟ್ಟರಾಜು, ನೀವು ನಮ್ಮ ಹತ್ತಿರ ಬಂದು ಸಮಸ್ಯೆ ಹೇಳಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ, ನಿಮ್ಮ ಹತ್ತಿರ ಬಂದರೆ ಮಾತ್ರ ಸಮಸ್ಯೆ ಬಗೆಹರಿಯೋದಾ ಎಂದು ಮರು ಪ್ರಶ್ನೆ ಹಾಕಿದರು.
ಸುನೀತಾ ಮಾತನಾಡಿ, ವಾರ್ಡಿಗೆ ಸಂಬಂಧಿಸಿದ ಕೆಲಸ ಮಾಡಿಸುವ ವೇಳೆ ಅಧ್ಯಕ್ಷರ ಪತಿ ಬಂದು ಕಂಪ್ಯೂಟರ್ ಆಫ್ ಮಾಡಿ ನಮ್ಮ ಕೆಲಸ ಆಗೋವರೆಗೂ ಬೇರೆಯವರ ಕೆಲಸ ಮಾಡಬಾರದೆಂದು ದಬಾಯಿಸುತ್ತಾರೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಪಾರ್ಥಸಾರಥಿ, ನಾನು ಪುರಸಭೆ ಸದಸ್ಯನಾಗಿದ್ದೇನೆ. ನನ್ನ ಬದಲು ನನ್ನ ತಾಯಿ ಅಥವಾ ಪತ್ನಿ ಬಂದು ಅಧಿಕಾರ ಚಲಾಯಿಸಬಹುದಾ? ಇದಕ್ಕೆ ಕಡಿವಾಣ ಹಾಕಬೇಕು ಎಂದರಲ್ಲದೆ, ಟಿಎಪಿಸಿಎಂಎಸ್ ಕಚೇರಿ ಎದುರು ಅಶೋಕ್ ಎಂಪೋರಿಯಂ ಮಾಲೀಕ 6*150 ಅಡಿ ಉದ್ದದ ಪುರಸಭೆಗೆ ಸೇರಿದ ನಿವೇಶನವನ್ನು ಕಬಳಿಸಿ ಕಟ್ಟಡ ನಿರ್ಮಿಸಿದ್ದಾರೆ. ಕಾಮಗಾರಿ ತಡೆದು ಪುರಸಭೆಗೆ ಸೇರಿದ ನಿವೇಶನದಲ್ಲಿ ನಿರ್ಮಿಸಲಾಗಿರುವ ಕಟ್ಟಡ ತೆರವುಗೊಳಿಸಬೇಕು. ಇಲ್ಲವೇ ಮಾರುಕಟ್ಟೆ ದರ ಕಟ್ಟಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಮುಖ್ಯಾಧಿಕಾರಿ ವೀಣಾ, ಸದಸ್ಯರಾದ ಆರ್.ಸೋಮಶೇಖರ್, ಬಿ.ವೈ.ಬಾಬು, ಶ್ರೀನಿವಾಸನಾಯಕ, ಡೇರಿ ರಾಮಲಿಂಗಂ, ಸರಸ್ವತಿ ಇದ್ದರು.