ಗದ್ದುಗೆ ಮಂಟಪದ ತಯಾರಿ ಭರ್ಜರಿ

19SIRSI4
Published on

ಶಿರಸಿ: ಜಾಗೃತ ಶಕ್ತಿಪೀಠಗಳಲ್ಲಿ ಒಂದಾದ ಶಿರಸಿ ಮಾರಿಕಾಂಬಾದೇವಿಯ ಜಾತ್ರೆಗೆ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ. ಜಾತ್ರೆ ಸಂದರ್ಭದಲ್ಲಿ ನವದಿನಗಳ ಕಾಲ ದೇವಿ ವಿರಾಜಮಾನವಾಗುವ ಗದ್ದುಗೆ ಮಂಟಪದ ತಯಾರಿ ಆರಂಭವಾಗಿದೆ.

ಮಾ. 3ರಿಂದ 11ರವರೆಗೆ ನಡೆಯುವ ದೇವಿ ಜಾತ್ರೆಯ ಗದ್ದುಗೆ ಕಳೆ ತುಂಬಿಕೊಳ್ಳುತ್ತಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ದೇವಾಲಯದ ವತಿಯಿಂದ ಜಾತ್ರಾ ಗದ್ದುಗೆಗೆ ಬಣ್ಣ ಬಳಿಯುವ ಕಾರ್ಯ ನಡೆದಿದೆ. ಜಾತ್ರೆ ಆರಂಭದಿಂದ ಮುಕ್ತಾಯದವರೆಗೆ ಮಾರಿಕಾಂಬಾದೇವಿ ವಿರಾಜಮಾನಳಾಗಿ ಭಕ್ತರಿಗೆ ದರ್ಶನ ನೀಡುವ ಬಿಡಕಿ ಬೈಲಿನಲ್ಲಿರುವ ಜಾತ್ರಾ ಗದ್ದುಗೆಯೂ ಜನಾಕರ್ಷಣೆಯ ಕೇಂದ್ರವಾಗಿದ್ದು, ಅದನ್ನು ಸುಂದರಗೊಳಿಸುವ ಕೆಲಸ ಆಗುತ್ತಿದೆ. ಹತ್ತಾರು ಜನರು ಗದ್ದುಗೆ, ಗೋಪುರವನ್ನು ಶುಚಿಗೊಳಿಸಿ, ಬಣ್ಣ ಬಳಿಯುತ್ತಿದ್ದಾರೆ. ಜತೆಗೆ ಹಣ್ಣು- ಕಾಯಿ ಮಾಡಿಸುವ ವೇಳೆ ಹಾಗೂ ದೇವಿಯ ದರ್ಶನದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರನ್ನು ಬಿಸಿಲಿನ ಬೇಗೆಯಿಂದ ರಕ್ಷಿಸಲು ಚಪ್ಪರ ನಿರ್ವಿುಸಲಾಗುತ್ತಿದೆ.

ಗದ್ದುಗೆ ಮತ್ತು ಮುಖ ಮಂಟಪದ ಕೆಲಸಗಳು ಶೇ. 50ರಷ್ಟು ಮುಗಿದಿದ್ದು, ಈ ಕೆಲಸಕ್ಕಾಗಿ 50ಕ್ಕೂ ಹೆಚ್ಚಿನ ಕಾರ್ವಿುಕರು ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಚಪ್ಪರ ಕಟ್ಟುವ ಕೆಲಸವನ್ನು ಶಿರಸಿಯ ಆನಂದ ಗೌಳಿ ಜವಾಬ್ದಾರಿ ವಹಿಸಿಕೊಂಡರೆ ಇಡೀ ಜಾತ್ರೆಯನ್ನೆ ರಂಗೇರಿಸುವಂತೆ ಮಾಡುವ ಮುಖ ಮಂಟಪ ಕಟ್ಟುವ ಕಾರ್ಯಕ್ಕೆ ಉಡುಪಿಯ ರಾಜು ಉಡುಪಿ ಮುಂದಾಗಿದ್ದಾರೆ. ಇದರ ಜತೆಯಲ್ಲಿಯೇ ಜಾತ್ರಾ ಗದ್ದುಗೆಯಿರುವ ಬಿಡಕಿಬೈಲಿನ ಸುತ್ತಲಿನ ಅಂಗಡಿಗಳನ್ನು ಅಂಗಡಿಕಾರರು ಪ್ರತಿ ವರ್ಷದಂತೆ ಸ್ವಯಂ ಪ್ರೇರಿತರಾಗಿ ಬಿಟ್ಟುಕೊಟ್ಟು ಸ್ಥಳಾಂತರಗೊಂಡಿದ್ದಾರೆ. ಇದರಿಂದಾಗಿ ಗದ್ದುಗೆಯಲ್ಲಿ ಅಮ್ಮ ಬರುವ ಸಿದ್ಧತೆಗಾಗಿ ಸಕಲ ಕಾರ್ಯಗಳೂ ಸಮರೋಪಾದಿಯಲ್ಲಿ ನಡೆಯುತ್ತಿವೆ.

ಜಾತ್ರೆ ಮಹೋತ್ಸವ ವಿಜೃಂಭಣೆಯಿಂದ ನಡೆಸಲು ಸಾಕಷ್ಟು ತಯಾರಿ ಮಾಡಲಾಗುತ್ತಿದೆ. ಈಗಾಗಲೇ ಚಪ್ಪರ, ಮುಖಮಂಟಪ ಕಾರ್ಯ ಭರದಿಂದ ಸಾಗಿದ್ದು, ಶೀಘ್ರದಲ್ಲಿ ಉಳಿದ ಕಾರ್ಯಗಳು ಪೂರ್ಣಗೊಳ್ಳಲಿವೆ. ಈ ಬಗ್ಗೆ ಪ್ರತ್ಯೇಕ ವಿಭಾಗಗಳನ್ನೇ ಮಾಡಿದ್ದು, ಧರ್ಮದರ್ಶಿಗಳು ಹಾಗೂ ಸಂಬಂಧಪಟ್ಟವರು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.| ಡಾ. ವೆಂಕಟೇಶ ನಾಯ್ಕದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net