ಗದ್ದಲದ ಗೂಡಾದ ಸರ್ವ ಸಾಧಾರಣ ಸಭೆ

web6
ಖಾನಪೇಠ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಮಲ್ಲಣ್ಣ ಯಾದವಾಡ, ಮಹಾದೇವಪ್ಪ ಯಾದವಾಡ ಇದ್ದರು.
Published on

ರಾಮದುರ್ಗ: ತಾಲೂಕಿನ ಖಾನಪೇಠ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಶುಕ್ರವಾರ ಜರುಗಿದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅಧ್ಯಕ್ಷ ಮಲ್ಲಣ್ಣ ಯಾದವಾಡ ಅವರು ಷೇರುದಾರರು ಕೇಳಿದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಕೆಲಕಾಲ ಗದ್ದಲ ಉಂಟಾಗಿ ಮಾತಿನ ಚಕಮಕಿ ನಡೆಯಿತು.

ರೈತ ಮುಖಂಡ ರಾಮನಗೌಡ ಪಾಟೀಲ ಮಾತನಾಡಿ, ಸಭೆಗೆ ಹಾಜರಾದ ಸದಸ್ಯರಿಗೆ ಕಳೆದ ವರ್ಷ ಹಾಜರಾತಿ ಪತ್ರ ನೀಡಿಲ್ಲ. ಈ ಬಾರಿ ಹಾಜರಾತಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ಕಳೆದ ಬಾರಿ ಗದ್ದಲ ಸೃಷ್ಟಿಸಿ ನೀವೇ ಹಾಜರಾತಿ ಪತ್ರ ಹರಿದು ಹಾಕಿದ್ದೀರಿ ಎಂದು ಆಕ್ರೋಶಗೊಂಡರು. ಷೇರುದಾರರ ಸಹಿ ಹಾಗೂ ಮತದಾರರ ಪಟ್ಟಿ ತಯಾರಿಕೆಯಲ್ಲಿ ನಡೆದ ಲೋಪಗಳ ಕುರಿತು ಸಕ್ಕರೆ ಆಯುಕ್ತಾಲಯಕ್ಕೆ ದೂರು ನೀಡಿ, ಕೇಸ್ ದಾಖಲಿಸಿದ್ದಾರೆ. ಕೇಸ್ ವಾಪಸ್ ತೆಗೆದುಕೊಳ್ಳಲು ರಾಮನಗೌಡ 5 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದರು. ಪೊಲೀಸರು ಹಾಗೂ ರೈತರು ಮಧ್ಯೆ ಪ್ರವೇಶಿಸಿ ಉಂಟಾಗಿದ್ದ ಗದ್ದಲ ತಿಳಿಗೊಳಿಸಿದರು.


ನಿರ್ದೇಶಕ ಮಹಾದೇವಪ್ಪ ಯಾದವಾಡ ಮಾತನಾಡಿ, ಕಾರ್ಖಾನೆ ಅಭ್ಯುದಯಕ್ಕೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾರ್ಖಾನೆ ದೇಶದಲ್ಲಿಯೆ ನಂ.1 ಸ್ಥಾನದಲ್ಲಿರಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ಪ್ರಶ್ನೆಗಳು ರೈತರ ಸಮಸ್ಯೆಗಳಿಗೆ ಸಂಬಂಧಿಸಿರಲಿ ಎಂದರು.

ಕಿಲ್ಲಾ ತೊರಗಲ್ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಖಾನೆ ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ್ರ, ಎ.ಸಿ ಸುರಗ, ಬಿ.ಎಂ. ತುಪ್ಪದ, ಎಂ.ಎಂ. ಆತಾರ, ಎಸ್.ಜಿ. ಪಾಟೀಲ, ದುಂಡಪ್ಪ ದೇವರಡ್ಡಿ, ಎಸ್.ಎಲ್. ಡುಳ್ಳೊಳ್ಳಿ, ಸಿ.ಎಸ್.ರಜಪೂತ, ವೈ.ಐ. ಚಾಕಲಬ್ಬಿ, ಬಿ.ವಿ.ಪಾಟೀಲ, ಎನ್.ಎಸ್. ಚಾಕಲಬ್ಬಿ, ಎನ್.ಟಿ ಮುರಗೋಡ, ಶಶಿಕಲಾ ಸೋಮಗೊಂಡ, ಎಸ್.ಆರ್. ಕರದಿನ, ಶಿವಪ್ಪ ಮೇಟಿ, ವೃತ್ತಿಪರ ಸಲಹೆಗಾರ ಶಂಭು ಮಾಳವಾಡ, ವ್ಯವಸ್ಥಾಪಕಿ ಶಾಹೀನ್ ಅಖ್ತರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net