ಗದ್ದಲ, ಗಲಾಟೆಯಲ್ಲಿ ಕಳೆದು ಹೋದ ಪಾಲಿಕೆ ಸಾಮಾನ್ಯಸಭೆ

5
Published on


ಮೈಸೂರು: ಸದಸ್ಯರ ಗದ್ದಲ, ಗಲಾಟೆ, ವಾಗ್ವಾದ-ಮಾತಿನ ಚಕಮಕಿ ನಡುವೆಯೇ ಮೈಸೂರು ಮಹಾನಗರಪಾಲಿಕೆ ಸಾಮಾನ್ಯ ಸಭೆ ಕಳೆದುಹೋಯಿತು. ಈ ಮಧ್ಯೆಯೇ ಚರ್ಚೆ ಇಲ್ಲದೆ 6 ಪ್ರಮುಖ ವಿಷಯಗಳು ಅಂಗೀಕಾರವಾದವು.

ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ಕರೆದಿದ್ದ ಸಾಮಾನ್ಯ ಸಭೆ ಸದಸ್ಯರ ಒಣ ಪ್ರತಿಷ್ಠೆಗೆ ಬಲಿ ಆಯಿತು. ನಗರದ ಯಾವುದೇ ಸಮಸ್ಯೆಗಳ ಕುರಿತು ಚರ್ಚೆಯಾಗಲಿಲ್ಲ. ಬದಲಿಗೆ ಸದಸ್ಯರ ಕಚ್ಚಾಟವೇ ಹೆಚ್ಚು ಮಾರ್ದನಿಸಿತು. ಇದರೊಂದಿಗೆ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ನಡೆದ ಸಭೆ ವ್ಯರ್ಥ ಪ್ರಲಾಪದಲ್ಲೇ ಮುಳುಗಿತು.

ಆಡಳಿತ ಪಕ್ಷವಾದ ಬಿಜೆಪಿ-ಜೆಡಿಎಸ್ ಮತ್ತು ಪ್ರತಿಪಕ್ಷವಾದ ಕಾಂಗ್ರೆಸ್ ಸದಸ್ಯರು ಪರಸ್ಪರ ಕಿಚ್ಚಾಯಿಸುವುದೇ ನಡೆಯಿತು. ಈ ನಡುವೆ, ‘ಕಳೆದ 3 ತಿಂಗಳಿಂದ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ಈ ಕುರಿತು ವಿಳಂಬ ಮಾಡಲಾಗುತ್ತಿದೆ. ತಕ್ಷಣ ದಿನಾಂಕ ನಿಗದಿ ಮಾಡಬೇಕು’ ಎಂದು ಕಾಂಗ್ರೆಸ್ ಸದಸ್ಯರು ಪಟ್ಟುಹಿಡಿದರು. ಆಗ ಜೆಡಿಎಸ್-ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಪರಿಸ್ಥಿತಿ ತಿಳಿಗೊಳಿಸಬೇಕಿದ್ದ ಮೇಯರ್, ‘ಸಾಮಾನ್ಯ ಸಭೆ ಬಳಿಕ ಚುನಾವಣಾ ದಿನಾಂಕವನ್ನು ನಿಗದಿ ಮಾಡಲಾಗುವುದು’ ಎಂದರು. ಇದನ್ನು ಒಪ್ಪದ ಕಾಂಗ್ರೆಸ್ ಸದಸ್ಯರು ‘ಈ ಸಭೆಯಲ್ಲೇ ದಿನಾಂಕ ಘೋಷಿಸಬೇಕು’ ಎಂದು ಪಟ್ಟುಹಿಡಿದು ಮೇಯರ್ ಪೀಠದ ಎದುರು ಪ್ರತಿಭಟನೆಗೆ ಇಳಿದರು. ಆಗ ಗದ್ದಲ ಇನ್ನಷ್ಟು ಹೆಚ್ಚಾಯಿತು. ಆಗ ಮೇಯರ್ 15 ನಿಮಿಷ ಸಭೆ ಮುಂದೂಡಿದರು.

ಮತ್ತೆ ಸಭೆ ಆರಂಭವಾದಾಗ ಮೇಯರ್ ಪೀಠದ ಎದುರು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಆಗ ಮೇಯರ್, ‘15 ದಿನದೊಳಗೆ ಚುನಾವಣೆ ಮಾಡಲಾಗುವುದು’ ಎಂದು ಪ್ರಕಟಿಸಿದರು. ಇದರಿಂದ ಕೆರಳಿದ ಕೈ ಸದಸ್ಯರು, ‘ಧಿಕ್ಕಾರ, ಧಿಕ್ಕಾರ’ ಎಂದು ಘೋಷಣೆ ಕೂಗಿದರು. ಮೇಯರ್ ಮನವೊಲಿಕೆಗೆ ಪ್ರತಿಭಟನಾನಿರತ ಸದಸ್ಯರು ಜಗ್ಗಲಿಲ್ಲ. ಈ ನಡುವೆ, ಅಜೆಂಡಾದಲ್ಲಿರುವ 1ರಿಂದ 5ರ ವಿಷಯಗಳನ್ನು ಒಪ್ಪಾಗಿದೆ ಎಂದು ಘೋಷಿಸಿದ ಮೇಯರ್, ಸಭೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.
ಊಟದ ಬಳಿಕ ಮತ್ತೆ ಸಭೆ ಆರಂಭವಾಯಿತು. ಅಷ್ಟು ಹೊತ್ತಿಗೆ ಕಾಂಗ್ರೆಸ್ ಸದಸ್ಯರು ಮೆತ್ತಗಾಗಿದ್ದರು. ‘ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ನಡೆಸಲು 15 ದಿನಗಳ ಕಾಲಾವಕಾಶವನ್ನು ಮೇಯರ್‌ಗೆ ನೀಡಲಾಗುವುದು’ ಎಂದು ಕಾಂಗ್ರೆಸ್‌ನ ಆಯೂಬ್‌ಖಾನ್ ತಿಳಿಸಿದರು.

ಆದರೆ, ಚರ್ಚೆಯಿಲ್ಲದೆ ಅಂಗೀಕಾರವಾಗಿರುವ 5 ವಿಷಯಗಳು ಊರ್ಜಿತವಾಗಿದೆಯೇ ಅಥವಾ ಅನೂರ್ಜಿತವಾಗಿದೆಯೇ? ಈ ಕುರಿತು ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿಯೇ ಉತ್ತರ ನೀಡಬೇಕು ಎಂದು ಕೈ ಸದಸ್ಯರು ಹಠ ಹಿಡಿದರು.
ಈ ಸಂದರ್ಭದಲ್ಲಿ ಮಾತಿಗಿಳಿದ ಆಯೂಬ್ ಖಾನ್, ‘ಚರ್ಚೆ ಇಲ್ಲದೆ ವಿಷಯಗಳನ್ನು ಅಂಗೀಕಾರ ಮಾಡಲಾಗಿದೆ. ಇದನ್ನು ಸಮರ್ಥಿಸಿಕೊಂಡು ಮಾತನಾಡುವ ಆಡಳಿತದ ಪಾಲುದಾರ ಪಕ್ಷವಾದ ಜೆಡಿಎಸ್ ಸದಸ್ಯರಿಗೆ ನಾಚಿಕೆ ಆಗುವುದಿಲ್ವೇ’ ಎಂದು ಕಿಚ್ಚಾಯಿಸಿದರು. ಇದರಿಂದ ರೊಚ್ಚಿಗೆದ್ದ ಜೆಡಿಎಸ್ ಸದಸ್ಯರು ಮೇಯರ್ ಪೀಠದ ಎದುರು ಪ್ರತಿಭಟನೆ ನಡೆಸಿ, ಆಯೂಬ್ ಖಾನ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಇದು ಮತ್ತೊಂದು ಸುತ್ತಿನ ಗಲಾಟೆಗೆ ಕಾರಣವಾಯಿತು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಬೆಂಬಲಿತ, ಪಕ್ಷೇತರ ಸದಸ್ಯ ಎಂ.ಶಿವಕುಮಾರ್, ‘ನಗರದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಜನರು ಛೀ….ತೂ ಎಂದು ಉಗಿಯುತ್ತಿದ್ದಾರೆ’ ಎಂದು ಕಿಡಿಕಾರಿದರು. ಇದರಿಂದ ಇನ್ನಷ್ಟು ಕೆರಳಿದ ಜೆಡಿಎಸ್ ಸದಸ್ಯರು, ಈ ಮಾತು ವಾಪಸ್ ಪಡೆದು, ಕ್ಷಮೆಯಾಚಿಸಿಬೇಕು ಎಂದು ಪಟ್ಟುಹಿಡಿದರು. ಆಗಲೂ ಎರಡು ಕಡೆಯಿಂದ ಮಾತಿನ ಚಕಮಕಿ ಯಥೇಚ್ಛವಾಗಿ ನಡೆಯಿತು.
ಸದಸ್ಯರನ್ನು ಸಮಾಧಾನ ಮಾಡಲು ಮುಂದಾದ ವಿಧಾನಸಭೆ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ‘ಈ ರೀತಿ ಗಲಾಟೆ ಯಾರಿಗೂ ಶೋಭೆ ತರಲ್ಲ’ ಎಂದು ಮನವೊಲಿಸಲು ಪ್ರಯತ್ನಿಸಿದರು. ಆಗ ಪ್ರತಿಭಟನೆ ಕೈಬಿಟ್ಟ ಜೆಡಿಎಸ್ ಸದಸ್ಯರು ತಮ್ಮ ಆಸನದಲ್ಲಿ ಕುಳಿತುಕೊಂಡರು.

ಕೌನ್ಸಿಲ್ ಕಾರ್ಯದರ್ಶಿ ಬದಲಿಗೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಅವರು ಕರ್ನಾಟಕ ಮುನ್ಸಿಪಲ್ ಕಾಯ್ದೆಯ ನಿಯಮಾವಳಿಯನ್ನು ಓದಿ ಸ್ಪಷ್ಟನೆ ಕೊಟ್ಟರು. ಇದು ಕಾಂಗ್ರೆಸ್ ಸದಸ್ಯರಿಗೆ ಸಮಾಧಾನ ತರಿಸಲಿಲ್ಲ. ಈ ನಡುವೆ, ರೂಲಿಂಗ್ ನೀಡಿದ ಮೇಯರ್ 1ರಿಂದ 5 ವಿಷಯಗಳ ಊರ್ಜಿತವಾಗಿದೆ. ಮುಂದಿನ ವಿಷಯಕ್ಕೆ ಹೋಗೋಣ ಎಂದು ಗದ್ದಲ ನಡುವೆಯೇ ಪ್ರಕಟಿಸಿದರು. ಗದ್ದಲ ಹಾಗೆ ಮುಂದುವರಿಯಿತು. ಇದರಿಂದ ಅಸಮಾಧಾನಗೊಂಡ ಮೇಯರ್, 6 ವಿಷಯವನ್ನು ಸಹ ಒಪ್ಪಲಾಗಿದೆ ಎಂದು ಘೋಷಿಸಿ ಸಭೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು.

ಕ್ಷಣಾರ್ಧದಲ್ಲಿ 6 ವಿಷಯಗಳಿಗೆ ಒಪ್ಪಿಗೆ
ಚರ್ಚೆಯಿಲ್ಲದೆ 6 ವಿಷಯಗಳಿಗೆ ಒಪ್ಪಿಗೆ ಪಡೆದುಕೊಳ್ಳಲಾಯಿತು. 2021-22ನೇ ಸಾಲಿನಲ್ಲಿ 24.10ರ ಯೋಜನೆಯಡಿ ಎಸ್ಸಿ ಸಮುದಾಯಕ್ಕೆ ಕಾಯ್ದಿರಿಸಿದ ಪಾಲಿಕೆ ಅನುದಾನಕ್ಕೆ ತಯಾರಿಸಲಾದ ಕ್ರಿಯಾ ಯೋಜನೆ ಮತ್ತು 2021-22ನೇ ಸಾಲಿನ ಕ್ರಿಯಾ ಯೋಜನೆಗೂ ಅನುಮೋದನೆ ದೊರೆಯಿತು. ಪೌರಕಾರ್ಮಿಕರಿಗೆ ಶವ ಸಂಸ್ಕಾರಕ್ಕಾಗಿ 15 ಸಾವಿರ ರೂ.ಸಹಾಯ ಧನ ಪಾವತಿಗೆ ಅನುಮೋದನೆ ನೀಡಲಾಯಿತು.
ಎಲ್ಲೆಂದರಲ್ಲಿ ಕಸ ಎಸೆಯುವ ಜನರಿಗೆ ಮತ್ತು ಉದ್ದಿಮೆದಾರರಿಗೆ, ಪ್ಲಾಸ್ಟಿಕ್ ಬಳಕೆದಾರರಿಗೆ ದಂಡ ವಿಧಿಸಲು ಸಮ್ಮತಿ ದೊರೆಯಿತು. ಅನುಮತಿ ಪಡೆಯದೆ ಎಲ್ಲೆಂದರಲ್ಲಿ ಜಾಹೀರಾತು ಫಲಕ ಹಾಕುವವರಿಗೆ ದಂಡ ಹಾಕಲು ಅನುಮೋದನೆ ದೊರೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net