

ಗದಗ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಹಿತ್ಯ, ಕಲೆ, ಕೃಷಿ ಚಟುವಟಿಕೆಗಳು ಹೀಗೆ ಹತ್ತು ಹಲವು ಉದ್ದೇಶಗಳಿಗೆ ಸ್ವ-ಸಹಾಯ ಸಂಘಗಳ ಮುಖಾಂತರ ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಯಾಗುವಲ್ಲಿ ಸಂಘಟನೆಯ ಮೂಲಕ ಕಾರ್ಯೋನ್ಮುಖಗೊಂಡಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಯಾಣ ಕರ್ನಾಟಕ ಕೊಪ್ಪಳದ ಪ್ರಾದೇಶಿಕ ನಿರ್ದೇಶಕ ಗಣೇಶ್ ಬಿ. ಹೇಳಿದರು.
ಶಿಂಗಟಾಲೂರ ಗ್ರಾಮದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ಲಕ್ಷ್ಮೀ ಪೂಜೆ ಹಾಗೂ ಸಾಧನಾ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಿರ್ಗತಿಕರಿಗೆ ಮಾಶಾಸನ, ಮಕ್ಕಳ ಶಿಷ್ಯವೇತನ, ಟ್ಯೂಷನ್ ಕ್ಲಾಸ್ ಗಳು, ವಿಕಲಚೇತನರಿಗೆ ಪರಿಕರಗಳನ್ನು ವಿತರಿಸಲಾಗುತ್ತಿದೆ. ಜೀವಭದ್ರತೆ, ಉಳಿತಾಯ ಮನೋಭಾವನೆಯೊಂದಿಗೆ ವಿಮಾ ಆರ್ಥಿಕ ಸೇರ್ಪಡೆ ಕಾರ್ಯಗಳನ್ನು ತಲುಪಿಸಿದೆ. ಕೇಂದ್ರ ಸರ್ಕಾರದ ಸೌಲಭ್ಯ ಹಾಗೂ ಸೇವೆಗಳನ್ನು ಒದಗಿಸುವಲ್ಲಿ ಗ್ರಾಮೀಣ ಮಟ್ಟದಲ್ಲಿ ಸಿಎಸ್‌ಸಿ ಕೇಂದ್ರಗಳನ್ನು ಸ್ಥಾಪಿಸಿ ಸೇವೆ ಗೈಯುತ್ತಿದೆ. ಜ್ಞಾನದೀಪ ಶಿಕ್ಷಕರು ಪೀಠೋಪಕರಣಗಳು, ದೇವಸ್ಥಾನ, ದರ್ಗಾಗಳಿಗೆ ಅನುದಾನ, ಶ್ರದ್ಧಾ ಕೇಂದ್ರ, ಸ್ವಚ್ಛತಾ ಕಾರ್ಯಕ್ರಮ, ಕೃಷಿ ತರಬೇತಿ, ಅಧ್ಯಯನ ಪ್ರವಾಸ ಸ್ವ ಉದ್ಯೋಗ, ರೈತ ಸದಸ್ಯರಿಗೆ ಅನುದಾನ ಹಾಗೆಯೇ ಪರಿಸರ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ,ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೂಲಕ ಹಲವಾರು ಜನಪರ ಕಾರ್ಯ ನಡೆಯುವುದರ ಜೊತೆಗೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಜೀವನ ಕಟ್ಟಿಕೊಳ್ಳಲು ಅನುಕೂಲವಾಗಿದೆ ಎಂದರು.
ಗದಗ ಜಿಲ್ಲಾ ನಿರ್ದೇಶಕ ಯೋಗೇಶ್, ವೈದ್ಯ ಡಾ. ಪ್ರಕಾಶ ಹೊಸಮನಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಕೆ.ಮುಲ್ಲಾನವರ ಮತ್ತಿತರರು ಮಾತನಾಡಿದರು. ಶಿಂಗಟಾಲೂರ ಗ್ರಾ.ಪಂ.ಅಧ್ಯಕ್ಷೆ ಅಕ್ಕಮಹಾದೇವಿ ಮಲ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ಸ್ವ-ಸಹಾಯ ಸಂಘದ 50-60 ಸದಸ್ಯರು ಲಕ್ಷ್ಮೀ ಪೂಜೆ ನೆರವೇರಿಸಿದರು.. ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಎಪಿಎಂಸಿ ಮಾಜಿ ಸದಸ್ಯ ಕೊಟ್ರೇಶ ಬಳ್ಳೊಳ್ಳಿ, ಪುರಸಭೆ ಸದಸ್ಯೆ ಜ್ಯೋತಿ ಹಾನಗಲ್ಲ, ಗ್ರಾ.ಪಂ.ಉಪಾಧ್ಯಕ್ಷ ಕಲವೀರಪ್ಪ ಭಜಂತ್ರಿ, ಕುಮಾರಸ್ವಾಮಿ ಹಿರೇಮಠ, ಪ್ರಭಯ್ಯ ಹಿರೇಮಠ ಹಾಗೂ ಸ್ವ-ಸಹಾಯ ಸಂಘಗಳ ಒಕ್ಕೂಟದ ಸದಸ್ಯರುಗಳು ಉಪಸ್ಥಿತರರು ಇದ್ದರು.
ತಾಲೂಕು ಯೋಜನಾಧಿಕಾರಿ ವಿಶಾಲಾ ಮಲ್ಲಾಪುರ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ನೇತ್ರಾ ನಿರೂಪಿಸಿದರು.