ಗದಗ: ಸರಕಾರಿ ಯೋಜನೆಗಳನ್ನು ತಿಳಿಸುವ ಕೆಲಸವನ್ನು ಮಾಧ್ಯಮದವರು ಮಾಡುತ್ತಿದ್ದಾರೆ : ಡಿಎಚ್‌ಓ ಡಾ. ಜಗದೀಶ ನುಚ್ಚಿನ

07GDG10
Published on

ಗದಗ : ಉತ್ತಮ ಆಹಾರ, ಉತ್ತಮ ವ್ಯಾಯಾಮದಿಂದ ಕ್ಷಯರೋಗವನ್ನು ದೂರ ಮಾಡಬಹುದು ಎಂದು ಡಿಎಚ್‌ಒ ಡಾ. ಜಗದೀಶ್ ನುಚ್ಚಿನ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಆರೋಗ್ಯ ಇಲಾಖೆಯಿಂದ ಮಾಧ್ಯಮದವರಿಗಾಗಿ ಹಮ್ಮಿಕೊಂಡ ಕ್ಷಯರೋಗದ ಅರಿವು ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಕ್ಷಯರೋಗವು ಆವರಿಸಿಕೊಳ್ಳುತ್ತದೆ. ಈ ರೋಗವು ಕೆಮ್ಮಿದರೆ ಮಾತ್ರ ಹರಡುತ್ತದೆ ಸರಿಯಾಗಿ ಚಿಕಿತ್ಸೆ ಪಡೆದು ರೋಗವನ್ನು ದೂರ ಮಾಡಬಹುದು. ಈಗಾಗಲೇ ವಿಶ್ವದಿಂದ ಸಿಡುಬು ರೋಗ, ದೇಶದಿಂದ ಪೋಲಿಯೋ, ನಾರುಹುಣ್ಣು ರೋಗವನ್ನು ನಿರ್ನಾಮ ಮಾಡಲಾಗಿದ್ದು, ದಡಾರ್ ಮತ್ತು ಕುಷ್ಟರೋಗವನ್ನು ನಿರ್ಮೂಲನೆ ಮಾಡಲಾಗುತ್ತಿದೆ. ೨೦೨೫ ರೊಳಗಾಗಿ ಕ್ಷಯರೋಗವನ್ನು ನಿರ್ಮೂಲನೆ ಮಾಡಬೇಕಾಗಿದೆ. ಪ್ರಸ್ತುತ ವರ್ಷದಲ್ಲಿ ಒಂದು ಲಕ್ಷಕ್ಕೆ ಒಂದು ೧೩೦ ಕ್ಷಯರೋಗಿಗಳು ಇದ್ದಾರೆ. ಕೋವಿಡ್ ನಿಯಮವನ್ನು ಅಳವಡಿಸಿಕೊಂಡು ಈ ರೋಗವನ್ನು ಹರಡದಂತೆ ನೋಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಡಾ. ಅರುಂಧತಿ ಕುಲಕರ್ಣಿ ಅವರು ಮಾತನಾಡಿ, ೨೦೨೫ ಕ್ಷಯಮುಕ್ತ ಭಾರತ, ಕ್ಷಯಮುಕ್ತ ಕರ್ನಾಟಕ, ಕ್ಷಯಮುಕ್ತ ಗದಗ ಜಿಲ್ಲೆಯನ್ನಾಗಿ ಮಾಡಬೇಕಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಜಿಲ್ಲೆಯ ೩೯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ೪ ತಾಲೂಕ ಆಸ್ಪತ್ರೆ ೨, ಸಮುದಾಯ ಕೇಂದ್ರ, ಒಂದು ಜಿಲ್ಲಾಸ್ಪತ್ರೆ, ೩ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ, ಕಫದಲ್ಲಿ ರಕ್ತ, ರಾತ್ರಿ ಹೊತ್ತು ಬೆವರುವುದು ಕಂಡು ಬಂದರೆ ಇದು ಕ್ಷಯರೋಗದ ಲಕ್ಷಣಗಳಾಗಿವೆ. ೨೦೨೨ರ ಸಾಲಿನಲ್ಲಿ ೨೩,೩೯೪ ರೋಗಿಗಳನ್ನು ತಪಾಸಣೆ ಮಾಡಲಾಗಿದ್ದು, ಅದರಲ್ಲಿ ೧೫೧೬ ಖಚಿತ ರೋಗಿಗಳನ್ನು ಪತ್ತೆ ಮಾಡಲಾಗಿದೆ. ಇದರಲ್ಲಿ ೭೩ ಮಕ್ಕಳಲ್ಲಿ ಬಾಲ ಕ್ಷಯರೋಗಿಗಳು ಕಂಡು ಬಂದಿದ್ದಾರೆ. ಈ ಬಗ್ಗೆ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ, ತಪಾಸಣೆ, ಆಪ್ತಸಮಾಲೋಚನೆ ಮಾಡಲಾಗುತ್ತಿದ್ದು ರೋಗಿಗಳು ಆರು ತಿಂಗಳವರೆಗೆ ಸರಿಯಾಗಿ ಚಿಕಿತ್ಸೆ ಪಡೆಯಬೇಕು. ಒಬ್ಬ ಕ್ಷಯರೋಗಿ ಒಂದು ವರ್ಷದಲ್ಲಿ ೧೦ ರಿಂದ ೧೫ ಆರೋಗ್ಯವಂತರಿಗೆ ರೋಗವನ್ನು ಹರಡಬಹುದು. ಪ್ರತಿ ತಿಂಗಳ ಮೂರನೆ ಶನಿವಾರ ಕ್ಷಯರೋಗಿಗಳಿಗೆ ವಿಶೇಷ ತಪಾಸಣೆ ಮಾಡಲಾಗುವುದು. ನಿಕ್ಷಯ ಮಿತ್ರರಾಗಿ ಎಂಬ ಯೋಜನೆಯಲ್ಲಿ ರೋಗಿಗಳಿಗೆ ದಾನಿಗಳಿಂದ ಪೌಷ್ಟಿಕಾಂಷವುಳ್ಳು ಆಹಾರದ ಕಿಟ್‌ನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಅವರು ಮಾತನಾಡಿ, ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ವಿಶೇಷ ಲೇಖನ ಹಾಗೂ ಈ ಕುರಿತ ಕಾರ್ಯಕ್ರಮಗಳ ವರದಿಯನ್ನು ಹೆಚ್ಚು ಪ್ರಕಟಿಸುವ ಮೂಲಕ ಮಾಧ್ಯಮದವರು ಸಹಕಾರ ನೀಡುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ ಪೈ, ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ ಸೇರಿದಂತೆ ಮುಂತಾದವರು ಇದ್ದರು.


  • ಕೇಂದ್ರ ಸರಕಾರದ ಆಯುಷ್ಮಾನ ಭಾರತ ಡಿಜಿಟಲ್ ಮಿಶನ್ ಅಡಿಯಲ್ಲಿ ದೇಶದ ೧೪೦ ಕೋಟಿ ಜನರಲ್ಲಿ ೫೦ ಕೋಟಿ ಜನರಿಗೆ ಆರೋಗ್ಯ ವಿಮೆ ಕಾರ್ಡ ರೂಪದಲ್ಲಿ ಕೋ ಬ್ರಾಂಡ್ ಕಾರ್ಡನ್ನು ವಿತರಿಸಲಾಗುತ್ತಿದೆ. ಈ ಒಂದು ಕಾರ್ಡನಿಂದ ಬಿಪಿಎಲ್ ಕಾರ್ಡ ಹೊಂದಿದವರು ೫ ಲಕ್ಷ ಹಾಗೂ ಎಪಿಎಲ್ ಕಾರ್ಡ ಹೊಂದಿದವರು ೧.೫೦ ಲಕ್ಷ ರೂಗಳ ವರೆಗೆ ಚಿಕಿತ್ಸೆ ವೆಚ್ಚವನ್ನು ಸರಕಾರ ಭರಿಸಲಿದೆ. ಅಲ್ಲದೆ, ಈ ಕಾರ್ಡಿನಲ್ಲಿ ಓಟಿಪಿ ಮೂಲಕ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿ ಸಂಗ್ರಹಿಸಿದ ವರದಿಗಳನ್ನು ನೋಡಬಹುದು. ಈ ಕಾರ್ಡನನ್ನು ಆದಾರಕಾರ್ಡನೊಂದಿಗೆ ಎಲ್ಲ ಗ್ರಾಮ್‌ವನ್ ಸೆಂಟರನಲ್ಲಿ ಮಾಡಿಸಿಕೊಳ್ಳಬಹುದಾಗಿದೆ.
  • ಡಾ. ಜಗದೀಶ ನುಚ್ಚಿನ ಡಿಎಚ್‌ಓ ಗದಗ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net