ಗದಗ ವ್ಯಕ್ತಿ ಸೇರಿ 9 ದರೋಡೆಕೋರರ ಬಂಧನ

Vadiraj
Published on

ಗದಗ: ನಗರದ ಖ್ಯಾತ ಶಿಕ್ಷಣ ಸಂಸ್ಥೆಯೊಂದರ ಮುಖ್ಯಸ್ಥರ ಪುತ್ರ ಸೇರಿದಂತೆ ದರೋಡೆಗೆ ಹೊಂಚು ಹಾಕುತ್ತಿದ್ದ 9 ಜನರನ್ನು ಬಂಧಿಸುವಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರು ನಿವಾಸಿ, ಗದಗ ಮೂಲದ ವಾದಿರಾಜ ಧೀರಣ್ಣ ಹುಯಿಲಗೋಳ, ವಿ. ನಾರಾಯಣಸ್ವಾಮಿ, ಜಾನ್ ಪೌಲ್, ಜ್ಞಾನೇಂದ್ರ ಪ್ರಸಾದ, ಅಭಿನವ್, ಸತೀಶ, ಸುರೇಶ ಮತ್ತು ವೈಷ್ಣವ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿ ದಡೋಡೆ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ, ಕಳೆದ ಶನಿವಾರ ನಸುಕಿನ ಜಾವ ಕಾರ್ಯಾಚರಣೆಗಿಳಿದ ಕೊಡಗು ಜಿಲ್ಲೆ ವಿರಾಜಪೇಟೆಯ ಪೊಲೀಸರು, ಕೇರಳ ರಸ್ತೆಯ ಲಕ್ಷ್ಮಿ ಹೋಟೆಲ್​ನತ್ತ ದೌಡಾಯಿಸಿದ್ದಾರೆ. ಅಲ್ಲಿ ರಸ್ತೆ ದರೋಡೆಗೆ ಹೊಂಚು ಹಾಕುತ್ತಿದ್ದ ತಂಡ ಪೊಲೀಸರನ್ನು ಕಂಡು ಕಾಲ್ಕಿತ್ತಿದೆ. ಆಗ ಅವರ ಕಾರುಗಳನ್ನು ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಬ್ಬಿಣದ ರಾಡು, ಚಾಕು, ಲಾಂಗ್, ಮಚ್ಚು, ತಲ್ವಾರ್, ಖಾರದ ಪುಡಿ, ಅಂದಾಜು ಎರಡು ಕೆಜಿ ಪಾದರಸ ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳ ಪೈಕಿ ಓರ್ವನಿಗೆ ಕರೊನಾ ದೃಢಪಟ್ಟಿದ್ದರಿಂದ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net