ಗದಗ: ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು -ಬನ್ನಿಕೊಪ್ಪ ಡಾ.ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ

26MDG1 DHARMASABHE
Published on

ನಾವೆಲ್ಲ ಸಂಸ್ಕರಿಸಿದ ಆಹಾರ ಸೇವನೆಯಿಂದ ದೂರವಿದ್ದು ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಅದೇ ರೀತಿ ಮಠ ಮಾನ್ಯಗಳಲ್ಲಿ ಹಮ್ಮಿಕೊಳ್ಳುವಂತ ಶಿವಾನುಭವ, ಧರ್ಮಸಭೆ, ಪುರಾಣ, ಪುಣ್ಯ ಕಥೆಗಳನ್ನು ಕೇಳುವ ಮೂಲಕ ನಮ್ಮ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮೈಸೂರು-ಬನ್ನಿಕೊಪ್ಪ ಡಾ.ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮುಂಡರಗಿ ತಾಲೂಕಿನ ಕಲಕೇರಿ-ವಿರುಪಾಪೂರ ಗ್ರಾಮದಶ್ರೀಗುರು ಮುದುಕೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಧರ್ಮಸಭೆ ಹಾಗೂ ಶ್ರೀಗಳ ತುಲಾಭಾರ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶ್ರೀಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯ ಕೆಟ್ಟ ಗುಣಗಳನ್ನು ಬಿಟ್ಟು ಸದಾಚಾರಿಯಾಗಿ ಬಾಳಬೇಕು. ನಾವು ಮಾಡುವ ಕೆಲಸ ಕಾರ್ಯಗಳು ನಮ್ಮ ಬದುಕಿನ ಮೇಲೆ ನೇರ ಪ್ರಭಾವ ಬೀರುತ್ತವೆ. ನಾವು ಮಾಡುವ ಕರ್ಮಗಳಿಂದ ನಾವು ಇಲ್ಲೆಯೆ ಸ್ವರ್ಗ ಮತ್ತು ನರಕಗಳನ್ನು ಅನುಭವಿಸಬೇಕು. ಬದುಕಿರುವವರೆಗೂ ಪರೋಪಕಾರಿಗಳಾಗಿ ಬಾಳಬೇಕು ಎಂದು ಸಲಹೆ ನೀಡಿದರು.
ಸ್ಥಳೀಯ ಸರ್ಕಾರಿ ಪಿಯು ಕಾಲೇಜ್ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜುನಾಥ ಇಟಗಿ ಮಾತನಾಡಿ, ನಾವು ಹಾಗೂ ನಮ್ಮ ಮಕ್ಕಳು ಇತ್ತೀಚೆಗೆ ಮೊಬೈಲ್ ದಾಸರಾಗಿದ್ದೇವೆ. ಇದರಿಂದಾಗಿ ನಮ್ಮ ಕುಟುಂಬಗಳ ಸಾಮರಸ್ಯ ಹಾಳಾಗುತ್ತಲಿದೆ. ಆದ್ದರಿಂದ ನಾವೆಲ್ಲ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ಬಸಾಪುರ ಗ್ರಾಮದ ಪುಷ್ಪಮ್ಮ ಹಿರೇಮಠ, ಪರಮೇಶ್ವರಯ್ಯ ವಿರುಪಾಪೂರಮಠ, ವಿರುಪಾಪೂರದ ಈರಪ್ಪ ಮರೇಗೌಡ್ರ ಹಾಗೂ ಕಾರ್ಯಪ್ಪ ಉಪ್ಪಾರ ಅವರು ಮುದುಕೇಶ್ವರ ಶ್ರೀಗಳ ತುಲಾಭಾರ ನೆರವೇರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ವೈದ್ಯ ಡಾ.ಪ್ರಕಾಶ ಹೊಸಮನಿ ಮಾತನಾಡಿದರು. ಶಿವಕುಮಾರ ದೇವರು, ಮಾಜಿ ಸಚಿವ ಎಸ್.ಎಸ್.ಪಾಟೀಲ, ನಿವೃತ್ತ ತಹಸೀಲ್ದಾರ್ ಕೆ.ಎ.ದೇಸಾಯಿ, ಅಂದಪ್ಪ ಮೇಟಿ, ಬಸವರಾಜ ದೇಸಾಯಿ, ಯಂಕಪ್ಪ ಯಕ್ಲಾಸಪೂರ ಉಪಸ್ಥಿತರರು ಇದ್ದರು.
ಆನಂದಗೌಡ ಪಾಟೀಲ ದಾಸೋಹ ಸೇವೆ ಕೈಗೊಂಡಿದ್ದರು. ಈಶ್ವರ ಭಜನಾ ಸಂಘದವರಿಂದ ಪ್ರಾರ್ಥನೆ ನಡೆಯಿತು. ವೆಂಕಟೇಶ ತಿಮ್ಮಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಣ್ಣ ದ್ರಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
26ಎಂಡಿಜಿ1 ಧರ್ಮಸಭೆ ಫೋಟೋ ಶೀರ್ಷಿಕೆ: ಮುಂಡರಗಿ ತಾಲೂಕಿನ ಕಲಕೇರಿ-ವಿರುಪಾಪೂರ ಗ್ರಾಮದ ಶ್ರೀಗುರು ಮುದುಕೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಧರ್ಮಸಭೆ ಕಾರ್ಯಕ್ರಮದಲ್ಲಿ ಶ್ರೀ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ತುಲಾಭಾರ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net