ಗದಗ: ಮಠ ಮಾನ್ಯಗಳು ಸಮಾಜದ ಒಳಿತಿಗಾಗಿ ಸದಾ ಶ್ರಮಿಸುತ್ತಿವೆ -ಮುದುಕೇಶ್ವರ ಶಿವಾಚಾರ್ಯ ಮಹಾ ಸ್ವಾಮೀಜಿ

21MDG1 SHIVANUBHAVA
Published on

ನಮ್ಮ ನಾಡಿನಲ್ಲಿರುವ ಮಠ ಮಾನ್ಯಗಳು ಸಮಾಜದ ಒಳಿತಿಗಾಗಿ ಸದಾ ಶ್ರಮಿಸುತ್ತಿವೆ. ಸ್ವಾಮೀಜಿಗಳು ಹಗಲಿರುಳು ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಸದಾ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಮಠ, ಮಾನ್ಯಗಳಿಗೆ ಭಕ್ತರು ಉದಾರವಾಗಿ ನೆರವು ನೀಡಬೇಕು ಎಂದು ಕಲಕೇರಿ-ವಿರುಪಾಪೂರದ ಶ್ರೀಗುರು ಮುದುಕೇಶ್ವರ ಶಿವಾಚಾರ್ಯ ಮಹಾ ಸ್ವಾಮೀಜಿ ಹೇಳಿದರು.
ಮುಂಡರಗಿ ತಾಲೂಕಿನ ಕಲಕೇರಿ-ವಿರುಪಾಪೂರದ ಶ್ರೀಗುರು ಮುದುಕೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಶಿವಾನುಭವ ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಅವರು ಮಾತನಾಡಿದರು.
ಶ್ರೀಮಠದ ಕೆಲಸ ಕಾರ್ಯಗಳಿಗೆ ಹಾಗೂ ಶ್ರೀಮಠದ ಅಭಿವೃದ್ಧಿಗಾಗಿ ಭಕ್ತರು ಸಾಕಷ್ಟು ನೆರವು ನೀಡುತ್ತಾರೆ. ಭಕ್ತರು ನೀಡುವ ದಾನವನ್ನು ಮಠ, ಮಾನ್ಯಗಳು ಸದ್ಬಳಕೆ ಮಾಡಿಕೊಳ್ಳಬೇಕು. ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಜಾತ್ರೆಗಳಿ ಸಹಕಾರಿಯಾಗಿವೆ. ಜಾತ್ರೆಯ ನೆಪದಲ್ಲಿ ನಾವೆಲ್ಲ ಒಂದುಗೂಡಿ ಸಮಾಜದೊಳಿತಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಮೈಸೂರು ಹಾಗೂ ಬನ್ನಿಕೊಪ್ಪದ ಡಾ.ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾವೆಲ್ಲ ಪ್ರತಿ ವರ್ಷ ಹಲವಾರು ಜಾತ್ರೆಗಳನ್ನು ಮಾಡುತ್ತೇವೆ. ಜಾತ್ರೆಗಳಲ್ಲಿ ಬೆಂಡು, ಬತ್ತಾಸುಗಳನ್ನು ಖರೀಧಿಸಿದರೆ ಮಾತ್ರ ಜಾತ್ರೆಯಾಗುವುದಿಲ್ಲ. ಜಾತ್ರೆಯ ಜೊತೆಗೆ ಶ್ರೀಮಠಗಳಲ್ಲಿ ಹಮ್ಮಿಕೊಳ್ಳುವ ಧರ್ಮಸಭೆ, ಶಿವಾನುಭವ, ಧರ್ಮ ಚಿಂತನಗೋಷ್ಠಿ ಮೊದಲಾದವುಗಳಲ್ಲಿ ಭಾಗವಹಸಿ ನೆತ್ತಿಯ ಹಸಿವನ್ನು ನೀಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಂಥವನ್ನು ಬಿಡುಗಡೆಗೊಳಿಸಿದ ಶಿರಕೋಳದ ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾವೆಲ್ಲ ಜೀವನದಲ್ಲಿ ಪಾಪ, ಪುಣ್ಯಗಳ ಅರಿವನ್ನು ಇಟ್ಟುಕೊಂಡು ಬದುಕುವುದನ್ನು ಕಲಿಯಬೇಕು. ಬದುಕಿರುವಾಗಲೆ ತಂದೆ, ತಾಯಿ, ಗುರು ಹಾಗೂ ಸಮಾಜದ ಋಣವನ್ನು ತೀರಿಸಬೇಕು ಎಂದರು.
ಗದುಗಿನ ಮಾವಜ್ರೇಶ್ವರಿ ಪೌಂಡೇಶನ್ ಸಂಸ್ಥಾಪಕಿ ಡಾ.ಸುವರ್ಣಾ ನಿಡಗುಂದಿ, ಬೆಳ್ಳಟ್ಟಿ ರಾಮಲಿಂಗೇಶ್ವರ ಮಠದ ಬಸವರಾಜ ಸ್ವಾಮೀಜಿ, ಉಪನ್ಯಾಸಕ ಡಾ.ಮಿಟ್ಯಾ ನಾಯಕ ಮಾತನಾಡಿದರು. ಶಿವಾನುಭವದಲ್ಲಿ ಭಾಗ್ಯಲಕ್ಷ್ಮೀ ಬಿಳಿಮಗ್ಗದ ಅವರು ರಚಿಸಿದ 'ಕಲಕೇರಿ-ವಿರುಪಾಪೂರದ ಶ್ರೀಗುರು ಮುದುಕೇಶ್ವರ ಚರಿತೆ' ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು. ಗ್ರಂಥ ಮುದ್ರಣ ದಾನಿಗಳಾದ ಮಾವಜ್ರೇಶ್ವರ ಪೌಂಡೇಶನ್ ಸಂಸ್ಥಾಪಕಿ ಡಾ.ಸುವರ್ಣಾ ನಿಡಗುಂದಿ, ಪ್ರಸಾದ ಸೇವೆ ವಹಿಸಿಕೊಂಡಿದ್ದ ಸಿದ್ದನಗೌಡ ಪಾಟೀಲ, ಆರ್.ಬಿ.ಪಾಟೀಲ, ಹನುಮಂತಗೌಡ ತಲೆಗೌಡರ, ಈಶ್ವರಪ್ಪ ಪಾಟೀಲ, ಕುಮಾರಸ್ವಾಮಿ ಹಿರೇಮಠ, ಶಿವಪುತ್ರಪ್ಪ ಲಿಂಗಶಟ್ಟರ ಅವರನ್ನು ಸನ್ಮಾನಿಸಲಾಯಿತು.

ಮಂಜಯ್ಯ ಬಾಗೇವಾಡಿ ವೇದ ಘೋಷ ಪಠಿಸಿದರು. ಪತ್ರಕರ್ತ ನೂರಅಹ್ಮದ ಮಕಾಂದಾರ ಗ್ರಂಥ ಪರಿಚಯ ಮಾಡಿದರು. ಡಾ.ಗುರುರಾಜ ಸೇಡಗಟಗಿ, ಕೊಟ್ರಪ್ಪ ದೇಸಾಯಿ, ಎಂ.ಯು.ಮಕಾಂದಾರ ಉಪಸ್ಥಿತರರು ಇದ್ದರು. ರಾತ್ರಿ ರಸಮಂಜರಿ ಕಾರ್ಯಕ್ರಮ ಜರುಗಿತು. ಯಂಕಪ್ಪ ಯಕ್ಲಾಸಪುರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net