

ಗದಗ
ನಕಲಿ ಠರಾವು, ಯುಜಿಡಿ ನಿರ್ವಹಣೆ, ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಕುಖ್ಯಾತಿ ಪಡೆದ ಗದಗ&ಬೇಟಗೇರಿ ನಗರಸಭೆಯಲ್ಲಿ ಈ ಮತ್ತೊಂದು ಭ್ರಷ್ಟಾಚಾರದ ವಿಷಯ ಮುನ್ನೆಲೆಗೆ ಬಂದಿದೆ. ಬೀದಿ ದೀಪಗಳ ನಿರ್ವಹಣೆ ಕುರಿತು ನಗರಸಭೆ ಮತ್ತು ಗುತ್ತಿಗೆದಾರ ಧ್ವಂದ್ವ ಹೇಳಿಕೆಗಳು ಭ್ರಷ್ಟಾಚಾರಕ್ಕೆ ಪುಷ್ಠಿ ನೀಡುತ್ತಿದ್ದು, ಈ ಬಗ್ಗೆ ಲೋಕಾಯುಕ್ತ ತನಿಖೆ ಆಗಬೇಕು ಎಂದ ಆಗ್ರಹಗಳು ಕೇಳಿ ಬರುತ್ತಿವೆ.
ನಗರದ ಹಲವಡೆ ಬೀದಿ ದೀಪಗಳು ದುರಸ್ತಿ ಆಗದೇ ಇದ್ದರೂ ಪ್ರತಿ ತಿಂಗಳು 7.74 ಲಕ್ಷ ಬಿಲ್ ಪಾವತಿ ಆಗುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದಲ್ಲದೇ, ಬಿದಿ ದೀಪಗಳ ಕುರಿತು ನಗರಸಭೆ ಮತ್ತು ಗುತ್ತಿಗೆದಾರ ನೀಡಿರುವ ಹೇಳಿಕೆಗಳು ಗೊಂದಲ ಸೃಷ್ಟಿ ಮಾಡುತ್ತಿವೆ. ಗುತ್ತಿಗೆ ಪಡೆದಿದ್ದು ಕೇವಲ ನಿರ್ವಹಣೆಗೋ? ಹೊಸ ಬೀದಿ ದೀಪಗಳನ್ನೂ ಅಳವಡಿಸುವುದಕ್ಕೋ? ಎಂಬುದು ಸ್ಪಷ್ಟತೆ ಸಿಗುತ್ತಿಲ್ಲ. ಹೀಗಿದ್ದರೂ, ಪ್ರತಿ ತಿಂಗಳು ಗುತ್ತಿಗೆದಾರನಿಗೆ ಲಂಾಂತರ ರೂ. ಬಿಲ್ ಪಾವತಿ ಆಗುತ್ತಿರುವುದು ವಿಪರ್ಯಾಸ.
ಅಷ್ಟಕ್ಕೂ, ಬೀದಿ ದೀಪಗಳ ಕುರಿತು ದೂರು ಸ್ವೀಕರಿಸುವುದು ಹೇಗೆ ಎಂಬುದು ಕೂಡ ಅಸ್ಪಷ್ಟವಾಗಿದ್ದು, ದೀಪಗಳ ದುರಸ್ಥಿಗೆ ನಿಧಿರ್ಷ್ಠ ಪ್ರಕ್ರಿಯೆಯನ್ನೇ ಅಳವಡಿಸಿಕೊಳ್ಳದಿರುವುದೇ ವಿಪರ್ಯಾಸ. ಹೀಗಾಗಿ ಕತ್ತಲೆಯ ದಾರಿಯಲ್ಲೇ ಸಾರ್ವಜನಿಕರ ಕಾಲ್ನಡಿಗೆ ಶುರುವಾಗಿದೆ.
ಸಮಸ್ಯೆ ಏನು?
ನಗರಸಭೆ ವ್ಯಾಪ್ತಿಯಲ್ಲಿ 20&40 ವ್ಯಾಟ್ ಟ್ಯುಬ್ಲೈಟ್, 70 ವ್ಯಾಟ್ ಸಾಮರ್ಥ್ಯ ಎಚ್ಪಿ ಎಸ್ವಿಎಲ್ ಲೈಟ್ಸ್ , ಹೈ ಮಾಸ್ಕ್, 250 ವ್ಯಾಟ್ ಸಾಮರ್ಥ್ಯದ ಲೈಟ್ಗಳು ಹಾಗೂ ಸೋಡಿಯಂ ವಿದ್ಯುತ್ ದೀಪಗಳು ಸೇರಿ 11954 ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದರೆ, ಶೇ. 50 ರಷ್ಟು ಬೀದಿ ದೀಪಗಳು ಉರಿಯುತ್ತಿಲ್ಲ ಎಂಬುದು ಸತ್ಯ. 2022&23 ವಾಷಿರ್ಕ ಅವಧಿಯಲ್ಲಿ ಗುತ್ತಿಗೆಯ ಮೂಲ ಬೆಲೆ 99.89 ಲಕ್ಷಕ್ಕೇ ನಗರದ ಸಂಗಮೇಶ್ವರ ಎಂಟರ್ಪೆಸಸ್ ಅವರಿಗೆ ಬೀದಿ ದೀಪಗಳ ಕಾರ್ಯ ನಿರ್ವಹಣೆಗೆ ಗುತ್ತಿಗೆ ನೀಡಲಾಗಿದೆ. ಪ್ರತಿ ತಿಂಗಳು 7.74 ಲಕ್ಷ ಬಿಲ್ ಪಾವತಿಯೂ ಆಗುತ್ತಿದೆ. ಆದರೆ, ನಗರದ ಹಲವು ಮುಖ್ಯ ರಸ್ತೆಗಳಲ್ಲೇ ಹಲವಡೆ ಬೀದಿ ದೀಪಗಳೇ ಇಲ್ಲ. ಕಳೆದ ಹಲವು ತಿಂಗಳಿಂದ ಗದಗ & ಬಾದಾಮಿ ರಸ್ತೆ, ಹೊಸ ಬಸ್ ನಿಲ್ದಾಣದ ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳೇ ದುರಸ್ತಿ ಹಂತಕ್ಕೆ ತಲುಪಿದ್ದವು. ಈ ಮೊದಲು ನಕಲಿ ಠರಾವು ಪ್ರಕರಣ ಬೆಳಕಿಗೆ ಬಂದು ಬಿದಿ ದೀಪಗಳಲ್ಲೂ ಭ್ರಷ್ಟಾಚಾರ ನಡೆದ ಬಗ್ಗೆ ಮಾಜಿ ನಗರಸಭೆ ಸದಸ್ಯರು ಆರೋಪಿಸುತ್ತಿದ್ದಂತೆ ಕೆಲವೇ ದಿನಗಳಲ್ಲಿ ಮುಖ್ಯ ರಸ್ತೆಯ ಬೀದಿ ದೀಪಗಳ ದುರಸ್ತಿ ಕಾರ್ಯವನ್ನು ನಗರಸಭೆ ಕೈಗೊಂಡಿದ್ದರಿಂದ ಈ ಬೆಳವಣಿಗೆ ಅನುಮಾನ ಮೂಡುವಂತೆ ಮಾಡಿತ್ತು. ಅದಲ್ಲದೇ ಎಪಿಎಂಸಿ ಭಾಗದಲ್ಲಿ, ಬೆಟಗೇರಿಯ ಮುಖ್ಯ ರಸ್ತೆಯಲ್ಲಿ ದೀಪಗಳು ಒಡೆದು ಹಾಳಾಗಿವೆ. ಗದಗ ಹೊರವಲಯದ ಬಡಾವಣೆಗಳಲ್ಲಿ ಬೀದಿಗೆ ಒಂದೇ ಬೀದಿ ಊರಿಯುತ್ತಿರುವ ದರಶ್ಯಗಳು ಪ್ರತಿನಿತ್ಯ ಕಾಣುತ್ತಿದ್ದು, ಗುತ್ತಿಗೆದಾರನ ನಿರ್ವಹಣೆಯ ಕಾರ್ಯವಾದರೂ ಏನು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡತೋಡಗಿದೆ. ಗದಗ ನಗರಸಭೆಯ ವ್ಯಾಪ್ತಿಗೆ ಬರುವ 35 ವಾರ್ಡ್ಗಳ 700 ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಇಂತಹ ದೀಪಗಳು ದುರಸ್ತಿ ಹಂತ ತಲುಪಿ ಉರಿಯದೇ ಇದ್ದರೂ ಪ್ರತಿ ತಿಂಗಳು 7.74 ಲಕ್ಷ ಬಿಲ್ ಮಾತ್ರ ಪಾವತಿ ಆಗುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಗುತ್ತಿಗೆದಾರ ಹೇಳುವುದೇನು?
ನಗರಸಭೆ ವ್ಯಾಪ್ತಿಯ ಬೀದಿದೀಪಗಳ ಕಾರ್ಯ ನಿರ್ವಹಣೆಗೆ ಮಾತ್ರ ಗುತ್ತಿಗೆ ಪಡೆಯಲಾಗಿದೆ. ನಗರಸಭೆಯಿಂದ ದೂರು ಸ್ವೀಕರಿಸಿದ ನಂತರ ಕಾರ್ಯ ನಿರ್ವಹಣೆಗೆ ಮುಂದಾಗುತ್ತೇವೆ. 8 ಜನರು ನಿರ್ವಹಣಾ ಸಿಬ್ಬಂದಿ ಇದ್ದಾರೆ. ದೀಪಗಳು ದುರಸ್ತಿ ಹಂತ ತಲುಪಿದಾಗ ಹೊಸ ಸಾಮಗ್ರಿಗಳನ್ನು ನಗರಸಭೆ ಖರೀದಿಸಿ ಕೊಡಬೇಕು. ಇನ್ನೀತರೆ ನಿರ್ವಹಣೆ ಮಾತ್ರ ಗುತ್ತಿಗೆದಾರ ಸಂಬಂಧಿಸಿರುತ್ತಾನೆ.
ನಗರಸಭೆ ಹೇಳುವುದೇನು?
ನಿರ್ವಹಣೆ ಜತೆಗೆ ಬೀದಿ ದೀಪಕ್ಕೆ ಸಂಬಂಧಿಸಿದ ಹೊಸ ಸಾಮಗ್ರಿಗಳನ್ನೂ ಗುತ್ತಿದಾರ ಖರೀದಿಸಬೇಕು. ಚೌಕ್, ಟ್ಯೂಬ್, ಸೋಡಿಯಂ ಲೈಟ್ಗೆ ಸಂಬಂಧಿಸಿ ಕವಚ ಮತ್ತೀತರೆ ಸಾಮಗ್ರಿಗಳ ಹೊಣೆಗಾರಿಕೆ ಗುತ್ತಿಗೆದಾರ ಹೊಂದಿರುತ್ತಾನೆ.
ಯಾರದ್ದೋ ಹೆಸರಲ್ಲಿ ಇನ್ಯಾರೋ?
ಪ್ರತಿ ತಿಂಗಳು ಒಂದೇ ತೆರೆನಾದ ಬಿಲ್(774082 ರೂ.) ಪಾವತಿಯಾಗುತ್ತಿದೆ. ದಿನಾಂಕ ಮಾತ್ರ ಬದಲಾಯಿಸಲಾಗುತ್ತಿರುವುದು ಮೇಲ್ನೋಟಕ್ಕೆ ಅನುಮಾನ ಮೂಡುತ್ತಿದೆ. ಗುತ್ತಿಗೆದಾರರ ಹೆಸರಿನಲ್ಲಿ ನಗರಸಭೆಯ ಕೆಲ ಸದಸ್ಯರೇ ಬೀದಿ ದೀಪ ನಿರ್ವಹಣೆ ಕಾರ್ಯ ಮಾಡುತ್ತಿದ್ದಾರೆ ಎಂಬುದು ನಗರಸಭೆ ಅಂಗಳದಲ್ಲಿ ಬಲವಾಗಿ ಕೇಳಿ ಬರುತ್ತಿದೆ. ತೆರಿಗೆ ರೂಪದಲ್ಲಿ ಪಾವತಿಸಿದ ಸಾರ್ವಜನಿಕರ ದುಡ್ಡು ಹರಿಯುವ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತೆ ರ್ದುಬಳಕೆ ಆಗುತ್ತಿರುವುದು ಸತ್ಯ.