

ಗದಗ: 7ನೇ ವೇತನ ಆಯೋಗ ವರದಿ ಪಡೆಯಲು ಬಜೆಟ್ ನಲ್ಲಿ ಘೋಷಣೆ ನಿರೀಕ್ಷಿಸಲಾಗಿತ್ತು. ಆದರೆ, ಈ ಬಗ್ಗೆ ಬಜೆಟ್ ನಲ್ಲಿ ಘೋಷಣೆಯೇ ಮಾಡಿಲ್ಲ. ಈ ಹಿನ್ನೆಲೆ ವೇತನ, ಪರಿಷ್ಕರಣೆ ಮತ್ತು ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ 7 ದಿನದ ಗಡವು ನೀಡಿದ್ದೇವೆ. ಗಡುವು ಮೀರಿದರೆ ಮಾರ್ಚ 1 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಜಿಲ್ಲಾ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜಿಕರ್ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಇಂದಿನ ಸರ್ಕಾರ ನೌಕರರಿಗೆ ಅನೇಕ ಸೌಲಭ್ಯ ನೀಡಿದೆ. ಆದರೆ, 7ನೇ ವೇತನ ಆಯೋಗ ವಿಷಯದಲ್ಲಿ ನಿಷ್ಕಾಳಜಿ ವಹಿಸಿದೆ. ಅದಕ್ಕಾಗಿ ಎಲ್ಲಿಯೂ ಬಹಿರಂಗ ಪ್ರತಿಭಟನೆ ನಡೆಸದೆ ಮಾರ್ಚ 1 ರಂದು ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ನಮ್ಮ ಅಸಹಕಾರ ಹೊರಹಾಕುತ್ತಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ತುರ್ತು ನಿಗಾ ಘಟಕದ ಸಿಬ್ಬಂದಿ ಮಾತ್ರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಿದ್ದು, ಇನ್ನೂಳಿದ ರಾಜ್ಯದ ಯಾವುದೇ ಇಲಾಖೆಯಲ್ಲಿ ಸರ್ಕಾರಿ ನೌಕರರು ಅಂದು ಗೈರು ಹಾಜರಾಗಲಿದ್ದೇವೆ ಎಂದು ಹೇಳಿದರು.
ಕೋವಿಡ್, ಅತೀವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಸರ್ಕಾರಿ ನೌಕರರು ತಮ್ಮ ವೇತನ ನೀಡಿದ್ದಾರೆ. ಪುಣ್ಯಕೋಟಿ ಯೋಜನೆಗೆ ರಾಜ್ಯಾದ್ಯಂತ 40 ಕೋಟಿ, ಗದಗ ಜಿಲ್ಲೆಯಲ್ಲಿ 50 ಲಕ್ಷ ಸಂಗ್ರಹಿಸಿ ಸರ್ಕಾರಕ್ಕೆ ನೀಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ ನಾಲ್ಕು ತುಟ್ಟಿ ಭತ್ಯ ತ್ಯಾಗ ಮಾಡಿದ್ದೇವೆ. ಪ್ರಾಣ ಪಣಕ್ಕಿಟ್ಟು ಸರ್ಕಾರಿ ನೌಕರರು ಕಾರ್ಯ ನಿರ್ವಹಿಸಿದ್ದಾರೆ. ಅದಾಗ್ಯೂ ಸರ್ಕಾರ ನಮ್ಮನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ಸರ್ಕಾರಿ ನೌಕರ ಸಮಿತಿಯಿಂದ ದೇಶದ 8 ರಾಜ್ಯಗಳ ವೇತನ, ಪಿಂಚಣಿ ಹಾಗೂ ಇತರೆ ಭತ್ಯೆಗಳ ಕುರಿತು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. 5 ರಾಜ್ಯದಲ್ಲಿ ಎನ್ ಪಿ ಎಸ್ ತೆಗೆದು ಒಪಿಎಸ್ ಜಾರಿ ಮಾಡಿದ್ದಾರೆ. ಈ ವರದಿಯನ್ನು ಸರ್ಕಾರ ಪರಿಶೀಲಿಸಬೇಕು. ಚುನಾವಣೆ ನೀತಿ ಸಂಹಿತೆ ಒಳಗಾಗಿ 7 ನೇ ವೇತನ ಆಯೋಗ, ಹಾಗೂ ಓಪಿಎಸ್ ಜಾರಿ ಮಾಡಬೇಕು ಎಂದು ರವಿ ಗುಂಜಿಕರ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಷ್ಕರದ ಬಿತ್ತಿಪತ್ರ ಬಿಡುಗಡೆ ಗೊಳಿಸಲಾಯಿತು.
ಆಗ್ರಹಗಳೇನು
ರಾಜ್ಯದ ಎನ್ ಪಿ ಎಸ್ ನೌಕರ ಜೀವನ ನಿರ್ವಹಣೆ ಹಾಗೂ ಸಂಧ್ಯಾಕಾಲದ ಬದುಕು ಅತ್ಯಂತ ಕಷ್ಟವಾಗಿದೆ. ಎನ್ ಪಿ ಎಸ್ ನೌಕರರನ್ನು ಓ ಪಿ ಎಸ್ ವ್ಯಾಪ್ತಿಗೆ ಒಳಪಡಿಸಬೇಕು. ಪಂಜಾಬ್, ರಾಜಸ್ಥಾನ, ಚತ್ತಿಸಘಡ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಓ ಪಿ ಎಸ್ ಜಾರಿಗೆ ತರಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಜಾರಿ ಆಗಬೇಕು ಎಂದು ನೌಕರ ಸಂಘದ ಆಗ್ರಹ.
ಬಸವರಾಜ ಬಳ್ಳಾರಿ, ಎಸ್.ಎಸ್. ಸೋಮಣ್ಣನವರ, ವಿ.ಎಂ. ಹಿರೇಮಠ, ರಾಮು ವಾಸಂಗಿ, ಹರಪನಹಳ್ಳಿ, ಸತೀಶ ಕಟ್ಟಮನಿ ಇತರರು ಇದ್ದರು.