

ಗದಗ: ತಾಲೂಕಿನ ಕಳಸಾಪೂರದ ಹೊರವಲಯದ ತೋಟವೊಂದರಲ್ಲಿ ಜಿರತೆ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕಳಸಾಪೂರದಿಂದ ನಾಗಾವಿ ಗ್ರಾಮಕ್ಕೆ ತೆರಳುವ ರಸ್ತೆಯ ಹಳ್ಳದ ಪಕ್ಕದಲ್ಲಿ ರಾಮನಗೌಡ ಎಂಬವರು ತೋಟದಲ್ಲಿ ಚಿರತೆ ಕಾಣಿಸಿಕೊಂಡಿದ್ದನ್ನು ಸಾರ್ವಜನಿಕರು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಗುರುವಾರ ಇಡೀ ದಿನ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು ಜನರು ಭಯದಲ್ಲಿ ಬದುಕುವಂತಾಗಿದೆ. ಕಳಸಾಪೂರದ ನಂತರ ಚಿರತೆಯು ಕಬಲಾಯತಕಟ್ಟಿ ಗ್ರಾಮದ ಮೂಲಕ ಕಪ್ಪಗುಡ್ಡ ಸೇರಿಕೊಂಡಿರಬಹುದು ಎಂದು ಜನರು ಮಾತನಾಡುತ್ತಿದ್ದಾರೆ.
ಚಿರತೆ ಕಂಡು ಬಂದಿದ್ದರಿಂದ ಕಳಸಾಪೂರ ಗ್ರಾಪಂ ವತಿಯಿಂದ ಡಂಗುರ ಸಾರಿ ರಾತ್ರಿ ಸಮಯದಲ್ಲಿ ಸಂಚರಿಸದಂತೆ ಮನವಿ ಮಾಡಿಕೊಳ್ಳಲಾಗಿದೆ.ಘಟನೆ ತಿಳಿದ ಮೇಲೆ ಗದಗ ಆರ್‍ಎಫ್‍ಒ ಮಂಜುನಾಥ ಮೇಗಲಮನಿ ಅವರು ಸಿಬ್ಬಂದಿಯೊಂದಿಗೆ ರಾಮನಗೌಡರ ತೋಟ ಹಾಗೂ ಇತರೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋಟ್
ಕಳಸಾಪೂರದ ರಾಮನಗೌಡ ಎಂಬುವರ ತೋಟದಲ್ಲಿ ಚಿರತೆ ಕಾಣಿಸಿಕೊಂಡಿದ ಎಂಬ ಮಾಹಿತಿ ಲಭ್ಯವಾದ ಮೇಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಆದರೆ, ಸೆ. 15ರಂದು ಚಿರತೆ ತೋಟಕ್ಕೆ ಬಂದು ಹೋಗಿರಬಹುದು, ಏಕೆಂದರೆ ಚಿರತೆ ಪಾದ ಪದ್ಮರೇಖೆಯ ಹೆಜ್ಜೆ ಗುರುತು ಹಳೆಯದಾಗಿದೆ. ಕಳಸಾಪೂರದಿಂದ ಕಪ್ಪತಗುಡ್ಡ ಕಡೆಗೆ ಚಿರತೆ ಹೋಗಿರುವ ಶಂಕೆ ಮೂಡಿದೆ.
ಮಂಜುನಾಥ ಮೇಗನಮನಿ, ಆರ್‍ಎಫ್‍ಒ, ಗದಗ