

ಗದಗ: ಅತಿವೃಷ್ಟಿ ಹಾಗೂ ನೆರೆ ಪರಿಹಾರ ಯೋಜನೆಗೆ ಗದಗ ತಾಲೂಕನ್ನೂ ಪರಿಗಣಿಸುವಂತೆ ಆಗ್ರಹಿಸಿ ವಿವಿಧ ರೈತ ಸಂಘಗಳ ಸಹಯೋಗದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಕಿತ್ತೂರು ಚನ್ಮಮ್ಮ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದ ಪ್ರತಿಭಟನಾಕಾರರು, ಅತಿವೃಷ್ಟಿ ಪರಿಹಾರ ಹಾಗೂ ನೆರೆ ಹಾವಳಿ ಪರಿಹಾರ ನೀಡುವ ವಿಷಯದಲ್ಲಿ ಗದಗ ತಾಲೂಕನ್ನು ಕೈಬಿಟ್ಟಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಚನ್ನಮ್ಮ ವೃತ್ತದಿಂದ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಸುಂದರೇಶಬಾಬು ಅವರಿಗೆ ಮನವಿ ಸಲ್ಲಿಸಿದರು.
ಪ್ರಸಕ್ತ ವರ್ಷ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿ ಮುಂಗಾರು ಬೆಳೆ ಸಾಕಷ್ಟು ಹಾನಿಯಾಗಿದೆ. ಮುಂಗಾರು ಬೆಳೆಗಳಾದ ಹೆಸರು, ಗೆಜ್ಜೆಶೇಂಗಾ, ಗೋವಿನ ಜೋಳ, ಬಿ.ಟಿ. ಹತ್ತಿ, ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆಗಳು ಮಳೆಯಿಂದ ಹಾಳಾಗಿವೆ. ಹೀಗಾಗಿ, ನೆರೆ ಪರಿಹಾರ ಘೊಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬೆಟಗೇರಿ ರೈತ ಸಂಘದ ಅಧ್ಯಕ್ಷ ಅಜ್ಜನಗೌಡ ಹಿರೇಮನಿ ಪಾಟೀಲ, ಗದಗ ರೈತ ಸಂಘದ ಅಧ್ಯಕ್ಷ ಬಸವರಾಜ ಕವಳಿಕಾಯಿ, ರೈತ ಹಿತಾಭಿವೃದ್ಧಿ ಸಂಘದ ಕಾರ್ಯದರ್ಶಿ ಪರಮೇಶ್ವರಪ್ಪ ಕಂಪ್ಲಿ, ಬಸವರಾಜ ಬೆಳದಡಿ, ಮೋಹನ ಇಮರಾಪೂರ, ಸಿದ್ದಲಿಂಗಪ್ಪ ಅರಳಿ, ಮುತ್ತು ಜಡಿ, ಹನುಮಂತಪ್ಪ ಕೋಟೆಣ್ಣವರ, ಶಿವಪ್ಪ ಬಡಗೂಳಿಯವರ, ಎಚ್.ವಿ. ಬೆಟಗೇರಿ, ಜಾಕೀರಹುಸೇನ್, ಶಿವಪ್ಪ ದೊಡ್ಡಮನಿ, ಟಿ.ಬಿ. ಲಕ್ಕುಂಡಿ, ಬಸಪ್ಪ ಶಿರೂರ, ಕರಬಸಯ್ಯ ನಲವತ್ವಾಡಮಠ, ಕಳಕಪ್ಪ ರೇವಡಿ, ನಿಂಗಪ್ಪ ಗಳಗಂಟಿ, ಬಿ.ಜೆ. ಹುಬ್ಬಳ್ಳಿ, ಸತ್ಯಪ್ಪ ಗಿಡ್ಡಹನುಮಣ್ಣವರ, ಬಸವರಾಜ ಬಟ್ಟೂರ, ಶಿವಪ್ಪ ಕೊರ್ಲಹಳ್ಳಿ, ಮಂಜು ಕೋಳಿವಾಡ, ಎನ್.ಬಿ. ತುಕ್ಕಪ್ಪನವರ, ಈಶ್ವರಪ್ಪ, ಆರ್.ಕೆ. ತಳವಗೇರಿ ಇದ್ದರು.