ಗದಗ ಜಿಲ್ಲೆಯಲ್ಲಿ ಕಿಲ್ಲರ್ ಕರೊನಾ ಸ್ಫೋಟ

carona logo
Published on

StartFragment

ಗದಗ: ಜಿಲ್ಲೆಯಲ್ಲಿ ಮಹಾಮಾರಿ ಕರೊನಾ ಹಾವಳಿ ಮುಂದುವರಿದಿದ್ದು, ಶುಕ್ರವಾರ ನೂರರ ಗಡಿ ದಾಟಿ ನಾಗರಿಕರಲ್ಲಿ ಇನ್ನಷ್ಟು ಭೀತಿ ಮೂಡಿಸಿದೆ. ಒಂದೇ ದಿನ 108 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 882 ಏರಿಕೆಯಾಗಿದೆ.

ಕಳೆದ ವಾರ 82 ಜನರಿಗೆ ಸೋಂಕು ತಗುಲಿದ್ದು ಅತಿಹೆಚ್ಚು ಎನಿಸಿತ್ತು. ಆದರೆ, ಶುಕ್ರವಾರ ಜಿಲ್ಲೆಯ ಮಟ್ಟಿಗೆ ಸೋಂಕಿತರ ಸಂಖ್ಯೆ ದಾಖಲೆ ಎನಿಸಿದೆ.

ಕಳೆದ 10 ದಿನಗಳಲ್ಲಿ 500ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ ಗದಗ ಬೆಟಗೇರಿ ನಗರದಲ್ಲಿ 250ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಅವಳಿ ನಗರದಲ್ಲಿ ಅಕ್ಷರಶಃ ಆತಂಕ ಸೃಷ್ಟಿಯಾಗಿದೆ.

ಕರೊನಾ ಸೋಂಕಿನಿಂದ ಸಾವಿನ ಕದ ತಟ್ಟುವವರ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಿದ್ದು, ಶುಕ್ರವಾರ ಮೂವರು ಮೃತಪಟ್ಟಿದ್ದಾರೆ. ಇದರಿಂದ ಸಾವಿನ ಸಂಖ್ಯೆ 20ಕ್ಕೇರಿದಂತಾಗಿದೆ.

ಸೋಂಕಿನಿಂದ 11 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈವರೆಗೆ 300 ಜನ ಚೇತರಿಕೆ ಕಂಡಿದ್ದು, 563 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೋವಿಡ್-19 ನಿಯಂತ್ರಣ ಹಿನ್ನೆಲೆಯಲ್ಲಿ ವಿವಿಧ ಟಾಸ್ಕ್​ಫೋರ್ಸ್ ಸಮಿತಿಗಳು ಜನಜಾಗೃತಿ ಮೂಡಿಸುವಲ್ಲಿ ನಿರತವಾಗಿವೆ. ಜತೆಗೆ ಕರೊನಾ ಸೇನಾನಿಗಳು ಅವಿರತವಾಗಿ ಶ್ರಮಿಸುತ್ತಿದ್ದರೂ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಕರೊನಾ ವೈರಸ್ ನಿಯಂತ್ರಿಸಲು ಜನ ಜಾಗೃತರಾಗಬೇಕಿದ್ದು, ಜಿಲ್ಲಾಡಳಿತ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.

ದೈಹಿಕ ಅಂತರ ಕಾಪಾಡುವುದು, ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬರುವುದನ್ನು ಜನ ರೂಢಿಸಿಕೊಳ್ಳದಿದ್ದರೆ ವೈರಸ್ ಮನೆಮನೆಗೂ ಹಬ್ಬಿದರೂ ಅಚ್ಚರಿಯಿಲ್ಲ. ಜನರು ಅತ್ಯಂತ ಜಾಗರೂಕರಾಗಿ ಇರಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಮೂವರು ಸೋಂಕಿತರ ಸಾವು

ಗದಗ: ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕಳೆದ ಒಂದು ವಾರದ ಅವಧಿಯಲ್ಲಿ ಎಂಟು ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇಲ್ಲಿವರೆಗೆ ಜಿಲ್ಲೆಯಲ್ಲಿ ಒಟ್ಟು 19 ಸೋಂಕಿತರು ಮೃತಪಟ್ಟಿದ್ದಾರೆ. ಸ್ಥಳೀಯ ರಾಧಾಕೃಷ್ಣನಗರದ ನಿವಾಸಿ 68 ವರ್ಷದ ಪುರುಷ ಕಿಡ್ನಿ ತೊಂದರೆ, ನ್ಯುಮೋನಿಯಾ, ಹೃದಯ ಸಂಬಂಧಿ ಕಾಯಿಲೆಯಿಂದ ಜುಲೈ 23ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಅಸೂಟಿ ಗ್ರಾಮದ 55 ವರ್ಷದ ಸೋಂಕಿತ ಪುರುಷ ಜುಲೈ 19 ಮೃತಪಟ್ಟಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 19 ರಂದು ಕಿಡ್ನಿ ತೊಂದರೆ, ಸಕ್ಕರೆ ಕಾಯಿಲೆ, ರಕ್ತದೊತ್ತಡದಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಅವರ ಗಂಟಲ ದ್ರವದ ಪರೀಕ್ಷಾ ವರದಿ ಪಾಸಿಟಿವ್ ಎಂದು ದೃಢಪಟ್ಟಿದೆ. ಗದಗ ನಗರದ ಪಂಚಾಕ್ಷರಿ ನಗರದ ನಿವಾಸಿ 64 ವರ್ಷದ ಮಹಿಳೆ ಬಹುಅಂಗಾಂಗ ವೈಫಲ್ಯದಿಂದ ಜುಲೈ 20 ರಂದು ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯಯನ್ನು ಕೋವಿಡ್-19 ರ ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.

ಕರೊನಾಕ್ಕೆ ಭಯಪಡುವ ಅಗತ್ಯವಿಲ್ಲ

ನರಗುಂದ: ಕೋವಿಡ್-19 ವೈರಸ್ ಇದೊಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಜನಸಾಮಾನ್ಯರು ಭಯಪಡುವ ಅಗತ್ಯವಿಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮೆಣಸಗಿ ಹೇಳಿದರು.

ಪುರಸಭೆಯಿಂದ ಪಟ್ಟಣದ ಅಲ್ಲಿಬಾಯಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕೋವಿಡ್-19 ವಾರ್ಡ್ ಮಟ್ಟದ ಟಾಸ್ಕ್​ಫೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಕರೊನಾ ಸೋಂಕಿತರನ್ನು ಯಾರೊಬ್ಬರೂ ಕೀಳಾಗಿ ಕಾಣಬಾರದು. ಈ ರೋಗವು ಕೆಲವೇ ದಿನಗಳಲ್ಲಿ ಇಡೀ ಜಗತ್ತಿನಿಂದ ದೂರವಾಗಲಿದೆ. ಸೋಂಕಿತರಿಗೆ ರಾಜ್ಯ ಸರ್ಕಾರ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ. ಇನ್ನೂ ಕೆಲ ದಿನಗಳ ಕಾಲ ಜನರು ಸಾಧ್ಯವಾದಷ್ಟು ಮಟ್ಟಿಗೆ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್​ಗಳನ್ನು ಧರಿಸಬೇಕು ಮತ್ತು ಸ್ಯಾನಿಟೈಸರ್ ಬಳಸಬೇಕು ಎಂದು ತಿಳಿಸಿದರು.

ಪುರಸಭೆ ಸದಸ್ಯ ಚಂದ್ರಗೌಡ ಪಾಟೀಲ, ವಿಠ್ಠಲ ಹಡಗಲಿ, ಎಸ್.ಎಸ್. ಅಂಗಡಿ, ಅಂಗನವಾಡಿ ಕಾರ್ಯಕರ್ತೆ ಸವಿತಾ ಮರಿಗೌಡ್ರ, ಟಿ.ಬಿ. ಹಿರೇಮನಿ, ಟಾಸ್ಕ್​ಫೋರ್ಸ್ ಸಮಿತಿ ಸದಸ್ಯರಾದ ಶಿವಾನಂದ ಜಾಲಿಹಾಳ, ಚನ್ನಪ್ಪ ಮೋಟೆ, ರಾಚನಗೌಡ ಪಾಟೀಲ, ಫಕೀರಪ್ಪ ಕೀಲಿಕೈ, ಹುಲ್ಲಪ್ಪ ಹುಲಜೋಗಿ, ರಾಜು ಬಂಡಿವಡ್ಡರ, ಇತರರಿದ್ದರು.

ಖಾಸಗಿ ಆಸ್ಪತ್ರೆಗಳಿಗೆ ಸೂಚನೆ

ಗದಗ: ಜಿಲ್ಲೆಯಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದು, ಕೆಲ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.

ರೋಗಿಗಳಿಗೆ ತಗುಲುವ ಚಿಕಿತ್ಸಾ ವೆಚ್ಚಗಳ ದರಪಟ್ಟಿ ವಿವರಗಳ ಫಲಕವನ್ನು ಕಡ್ಡಾಯವಾಗಿ ಸಾರ್ವಜನಿಕರಿಗೆ ಕಾಣುವಂತೆ ಹಾಕಬೇಕು. ಕೋವಿಡ್ ರೋಗಿಗಳು ಆಸ್ಪತ್ರೆ ಪ್ರವೇಶಿಸುವಾಗ ಮತ್ತು ಹೊರ ಹೋಗುವಾಗ ಪ್ರತ್ಯೇಕ ಮಾರ್ಗ ಇರಬೇಕು. ನೋಂದಣಿ ಪುಸ್ತಕದಲ್ಲಿ ದಾಖಲೆ ಮಾಡಬೇಕು. ರಾಜ್ಯ ಸರ್ಕಾರ ನಿಗದಿಪಡಿಸಿದ ದರದಂತೆ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಪ್ರತಿದಿನ ಜೈವಿಕ ತ್ಯಾಜ್ಯ ವಿಲೇವಾರಿ ಹಾಗೂ ಕೋವಿಡ್ ವಾರ್ಡ್​ನಿಂದ ಜೀವತ್ಯಾಜ್ಯವನ್ನು ನೇರವಾಗಿ ವಿಲೇವಾರಿ ಮಾಡಬೇಕು. ನೆರೆಹೊರೆಯವರಿಂದ ಯಾವುದೇ ದೂರು ಬಾರದಂತೆ ನೋಡಿಕೊಳ್ಳಬೇಕು. ರೋಗಿಗಳಿಗೆ ಚಿಕಿತ್ಸೆ ನೀಡುವ ಸಿಬ್ಬಂದಿ ಕಡ್ಡಾಯವಾಗಿ ಪಿಪಿಇ ಧರಿಸಬೇಕು. ರೋಗಿಗಳ ಚಿಕಿತ್ಸಾ ವಿಭಾಗದಲ್ಲಿ ತ್ಯಾಜ್ಯ ನಿರ್ವಹಣೆ ಮಾರ್ಗಸೂಚಿಯಂತೆ ವಿವಿಧ ಕಲರ್ ಕೋಡೆಡ್​ಗಳಲ್ಲಿ ತ್ಯಾಜ್ಯ ಹಾಕುವಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದೆ.

ಈ ಎಲ್ಲ ಅಂಶಗಳನ್ನು ಪಾಲಿಸಲು ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಿಡದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರ ಸಹಕಾರ ಅಗತ್ಯ

ಲಕ್ಷ್ಮೇಶ್ವರ: ಕರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡಿರುವ ಮಾರ್ಗಸೂಚಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಜನ ಸಹಕಾರ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಹೇಳಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಶುಕ್ರವಾರ ಕರೊನಾ ನಿಯಂತ್ರಣ ಕುರಿತು ವಾರ್ಡ್ ಮಟ್ಟದ ಕಾರ್ಯಪಡೆ ಮತ್ತು ಬೂತ್ ಮಟ್ಟದ ಸಮಿತಿ ಸದಸ್ಯರ ತರಬೇತಿ ಮತ್ತು ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು. ವಾರ್ಡ್​ನಲ್ಲಿನ ಹಿರಿಯರ, ಅನಾರೋಗ್ಯಪಿಡಿತರ, ಗರ್ಭಿಣಿಯರ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಮತ್ತು ಸೋಂಕಿತರ ಮಾಹಿತಿ ಪತ್ತೆಯಾದ ಕೂಡಲೆ, ಆರೋಗ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿ ಸಹಕಾರ ನೀಡಬೇಕು. ವಾರ್ಡ್​ನಲ್ಲಿ ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಬಗ್ಗೆ ಗಮನ ಹರಿಸಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಮಾತನಾಡಿ, ಗ್ರಾಮದಲ್ಲಿ ಸಭೆ, ಸಮಾರಂಭ, ಮದುವೆ, ಜಾತ್ರೆ, ಸಂತೆ ನಡೆಯದಂತೆ ಮತ್ತು ಕಡ್ಡಾಯವಾಗಿ ಅನುಮತಿ ಪಡೆಯುವಂತೆ ಸೂಚಿಸಬೇಕು. ಬೇರೆ ರಾಜ್ಯ, ಜಿಲ್ಲೆಯಿಂದ ಗ್ರಾಮಕ್ಕೆ ಬಂದವರ ಆರೋಗ್ಯ ಪರೀಕ್ಷೆ ಮಾಡಿಸಿ ಅವರಿಗೆ ತಿಳಿವಳಿಕೆ ನೀಡಬೇಕು. ಸೋಂಕಿತರು ಮತ್ತು ಕುಟುಂಬಸ್ಥರಿಗೆ ಧೈರ್ಯ, ತಿಳಿವಳಿಕೆ ನೀಡಬೇಕು. ಕರ್ತವ್ಯಲೋಪದಿಂದ ತೊಂದರೆಯಾದಲ್ಲಿ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದರು.

ಡಾ. ಗಿರೀಶ ಮರಡ್ಡಿ, ಡಾ. ಮಂಜುನಾಥಗೌಡ ಮರಿಗೌಡರ, ಪಿಎಸ್​ಐ ಶಿವಯೋಗಿ ಲೋಹಾರ, ಕಂದಾಯ ನಿರೀಕ್ಷಕ ಬಿ.ಎಂ. ಕಾತರಾಳ, ಪುರಸಭೆ ಸದಸ್ಯ ಮಹದೇವಪ್ಪ ಅಣ್ಣಿಗೇರಿ, ಆನಂದ ಬದಿ, ಮಂಜುನಾಥ ಮುದಗಲ್, ಆರೋಗ್ಯ ಇಲಾಖೆಯ ಬಿ.ಎಸ್. ಹಿರೇಮಠ, ಅಂಗನವಾಡಿ- ಆಶಾ ಕಾರ್ಯಕರ್ತರು, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.

ಪ್ರತಿ ಸಲೂನ್​ನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ

ಗದಗ: ಪ್ರತಿ ಸಲೂನ್​ನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗ್ರಾಹಕರಿಂದ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುಷ್ ಇಲಾಖೆ ನೀಡಿರುವ ಔಷಧಿಗಳನ್ನು ಉಪಯೋಗಿಸಬೇಕು ಎಂದು ಸಮಾಜ ಬಾಂಧವರಿಗೆ ಸವಿತಾ ಸಮಾಜ ಯುವಕ ಸಂಘದ ಜಿಲ್ಲಾಧ್ಯಕ್ಷ ರವೀಂದ್ರಕುಮಾರ ಹಡಪದ ಹೇಳಿದರು.

ಕರೊನಾ ರೋಗ ಹಿನ್ನೆಲೆಯಲ್ಲಿ ನಗರದಲ್ಲಿ ಜಿಲ್ಲಾ ಸವಿತಾ ಸಮಾಜದಿಂದ ಶುಕ್ರವಾರ ಆಯೋಜಿಸಿದ್ದ ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ದಿನೇಶ ಕ್ಷೀರಸಾಗರ, ಅಣ್ಣಪ್ಪ ರಾಂಪೂರ, ಜಗದೀಶ ರಾಂಪೂರ ಮಾತನಾಡಿದರು.

ಜಿಲ್ಲಾ ಸಂಘದ ಅಧ್ಯಕ್ಷ ರಾಜು ಗೌಡರ, ವೆಂಕಟೇಶ ರಾಂಪೂರ, ಜ್ಯೋತಿಕುಮಾರ ರಾಯಚೂರ, ಪಂಪಣ್ಣ ರಾಯಚೂರ, ರಾಘವೇಂದ್ರ ರಾಂಪೂರ, ಆನಂದ ಕಡಬೂರ, ಸಂದೀಪ ಬಾಯಲಗುಡ್ಡ, ಶ್ರೀನಿವಾಸ ಲಂಕಾಲ, ಪರಶುರಾಮ ಆದೋನಿ, ಸುರೇಶ ಬೂದೂರ, ಕಾಶೀರಾಮ ವಾಗಮಾರೆ, ಪ್ರಕಾಶ ಮಾನೆ ಮತ್ತಿತರರು ಇದ್ದರು. ಮಂಜುನಾಥ ಗೌಡರ ವಂದಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net