

ಗದಗ: ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮೆರೆಯತೊಡಗಿದೆ. ಭಾನುವಾರ ಮುಂಡರಗಿ ತಾಲೂಕೊಂದರಲ್ಲೇ 29 ಸೇರಿ ಜಿಲ್ಲೆಯಲ್ಲಿ ಒಟ್ಟು 30 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಮುಂಡರಗಿ ಏತ ನೀರಾವರಿ ಇಲಾಖೆಯ ನೌಕರ ಸುಮಾರು 40 ಕ್ಕೂ ಹೆಚ್ಚು ಜನರಿಗೆ ಕರೊನಾ ವೈರಸ್ ಹಬ್ಬಿಸಿ ಸೂಪರ್ ಸ್ಪ್ರೆಡ್ಡರ್ ಆಗಿದ್ದಾರೆ.
ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೂ ತನ್ನ ಕಬಂಧಬಾಹು ಚಾಚಿರುವ ಮಹಾಮಾರಿ ಜನರನ್ನು ಬೆಚ್ಚಿಬೀಳಿಸಿದೆ. ಸದ್ಯ ಜಿಲ್ಲೆಯಲ್ಲಿ 170 ಜನರಿಗೆ ಸೋಂಕು ತಗುಲಿದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದಾರೆ. 51 ಜನರು ಗುಣವಾಗಿದ್ದಾರೆ. ಜಿಲ್ಲೆಯಲ್ಲಿ 116 ಕೋವಿಡ್-19 ಸೋಂಕಿನ ಸಕ್ರಿಯ ಪ್ರಕರಣಗಳಿವೆ.
ಕೆಮ್ಮು ಹಾಗೂ ಜ್ವರದ ಲಕ್ಷಣಗಳು ಕಂಡು ಬಂದ ಶಿರಹಟ್ಟಿ ತಾಲೂಕಿನ ವರವಿ ಗ್ರಾಮದ ನಿವಾಸಿ 31 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ರೋಣ ತಾಲೂಕಿನ ಇಟಗಿ ಗ್ರಾಮದ 38 ವರ್ಷದ ಪುರುಷನ (ಪಿ-9407) ಸಂಪರ್ಕದಿಂದಾಗಿ 5 ಜನರಿಗೆ ಸೋಂಕು ದೃಢಪಟ್ಟಿದೆ. ಮುಂಡರಗಿಯ ನೀರಾವರಿ ವಸತಿಗೃಹದ 30 ವರ್ಷದ ಮಹಿಳೆ, 5 ವರ್ಷದ ಬಾಲಕ, ಲೋಕೋಪಯೋಗಿ ಇಲಾಖೆ ವಸತಿಗೃಹದ 35 ವರ್ಷದ ಮಹಿಳೆ, 50 ವರ್ಷದ ಪುರುಷ ಹಾಗೂ ಮುಂಡರಗಿ ಹುಡ್ಕೋ ಕಾಲನಿಯ 37 ವರ್ಷದ ಪುರುಷನಿಗೆ ಸೋಂಕು ತಗುಲಿದೆ.
ಮುಂಡರಗಿಯ ಹುಡ್ಕೊ ಕಾಲನಿಯ 44 ವರ್ಷದ ಪುರುಷನ (ಪಿ-10151) ಸಂಪರ್ಕದಿಂದಾಗಿ 9 ಜನರಿಗೆ ಸೋಂಕು ದೃಢಪಟ್ಟಿದೆ. ಮುಂಡರಗಿಯ ನೀರಾವರಿ ವಸತಿಗೃಹದ 17 ವರ್ಷದ ಯುವಕ, 16 ವರ್ಷದ ಯುವಕ, 34 ವರ್ಷದ ಮಹಿಳೆ, 7 ವರ್ಷದ ಬಾಲಕಿ, ಮುಂಡರಗಿ ಹುಡ್ಕೊ ಕಾಲನಿಯ 45 ವರ್ಷದ ಮಹಿಳೆ, 26 ವರ್ಷದ ಮಹಿಳೆ, 60 ವರ್ಷದ ಪುರುಷ, 2 ವರ್ಷದ ಬಾಲಕ, 6 ವರ್ಷದ ಬಾಲಕಿಗೆ ಸೋಂಕು ತಗುಲಿದೆ.
ಹುಡ್ಕೊ ಕಾಲನಿಯ 44 ವರ್ಷದ ಪುರುಷನ (ಪಿ-10150) ಸಂಪರ್ಕದಿಂದ 4 ಜನರಿಗೆ ಸೋಂಕು ದೃಢಪಟ್ಟಿದೆ. ನೀರಾವರಿ ವಸತಿಗೃಹದ 26 ವರ್ಷದ ಮಹಿಳೆ, 48 ವರ್ಷದ ಪುರುಷ, 70 ವರ್ಷದ ಪುರುಷ, 60 ವರ್ಷದ ಮಹಿಳೆಗೆ ಸೋಂಕು ಬಂದಿದೆ.
ಮುಂಡರಗಿಯ ವಿದ್ಯಾನಗರದ 58 ವರ್ಷದ ಪುರುಷನ (ಪಿ- 10147) ಸಂಪರ್ಕದಿಂದ 7 ಜನರಿಗೆ ಸೋಂಕು ದೃಢಪಟ್ಟಿದೆ. ಮುಂಡರಗಿಯ ವಿದ್ಯಾನಗರದ ನಿವಾಸಿಗಳಾದ 53 ವರ್ಷದ ಮಹಿಳೆ, 28 ವರ್ಷದ ಮಹಿಳೆ, 3 ವರ್ಷದ ಬಾಲಕಿ, 8 ವರ್ಷದ ಬಾಲಕಿ, 25 ವರ್ಷದ ಮಹಿಳೆ, 18 ವರ್ಷದ ಮಹಿಳೆ, 18 ವರ್ಷದ ಮಹಿಳೆ ಕರೊನಾ ವಕ್ಕರಿಸಿದೆ.
ಮುಂಡರಗಿ ತಾಲೂಕಿನ ಡಂಬಳ ಗ್ರಾಮದ 40 ವರ್ಷದ ಪುರುಷನ (ಪಿ-9729) ಸಂಪರ್ಕದಿಂದ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಡಂಬಳ ಗ್ರಾಮದ 28 ವರ್ಷದ ಮಹಿಳೆ, 32 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ.
ಮುಂಡರಗಿಯಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ 28 ವರ್ಷದ ಮಹಿಳೆ, ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ನಿವಾಸಿ ಹಾಗೂ ಮುಂಡರಗಿಯಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ 22 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು ಇವರ ಪ್ರಾಥಮಿಕ ಸಂರ್ಪತರನ್ನು ಪತ್ತೆ ಹಚ್ಚಲಾಗುತ್ತಿದೆ. ಸದ್ಯ ಇವರೆಲ್ಲರಿಗೂ ನಿಗದಿತ ಕೋವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಒಬ್ಬನಿಂದ 27 ಜನರಿಗೆ ಹರಡಿದ ಸೋಂಕು!: ಮುಂಡರಗಿ ತಾಲೂಕಿನಲ್ಲಿ ಕರೊನಾ ಸೋಂಕಿನ ಆರ್ಭಟ ಮುಂದುವರೆದಿದೆ. ಭಾನುವಾರ 29 ಹೊಸ ಕೇಸ್ಗಳು ಪತ್ತೆಯಾಗಿವೆ. ಪಟ್ಟಣದ ನೀರಾವರಿ ಇಲಾಖೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೋಣ ತಾಲೂಕಿನ ಇಟಗಿ ಗ್ರಾಮದ ಸೋಂಕಿತ ಸಿಬ್ಬಂದಿ ಇಡೀ ಇಲಾಖೆಗೆ ಮಾರಕವಾಗಿ ಪರಿಣಮಿಸಿದ್ದಾನೆ. ಈತನ ಸಂಪರ್ಕದಿಂದ ಒಂದೇ ದಿನಕ್ಕೆ ಐವರು ಮಕ್ಕಳು ಸೇರಿ 27 ಜನರಿಗೆ ಕರೊನಾ ದೃಢಪಟ್ಟಿದೆ.
ಡಂಬಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸೋಂಕಿತ ಸಿಬ್ಬಂದಿಯ ಸಂಪರ್ಕದಲ್ಲಿದ್ದ ಡಂಬಳ ಗ್ರಾಮದ ಇಬ್ಬರಿಗೆ ಕರೊನಾ ಸೋಂಕು ದೃಢವಾಗಿದೆ. ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಸಾರ್ವಜನಿಕರಲ್ಲಿ ಭಯ ಮನೆ ಮಾಡಿದೆ. ಈಗಾಗಲೇ ಕರೊನಾ ಸೋಂಕಿತರು ವಾಸವಿದ್ದ ಭಾಗಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಪಟ್ಟಣದ ನೀರಾವರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೋಣ ತಾಲೂಕಿನ ಇಟಗಿ ಗ್ರಾಮದ ಸೋಂಕಿತ ಸಿಬ್ಬಂದಿ ವಾಸವಿದ್ದ ಪ್ರದೇಶಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಹಿರೇವಡ್ಡಟ್ಟಿ ಬಳಿಯ ಮುರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್-19 ಚಿಕಿತ್ಸೆ ಘಟಕವನ್ನು ತೆರೆಯಲಾಗಿದೆ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಬಸವರಾಜ ತಿಳಿಸಿದರು. ತಾಲೂಕಿನಲ್ಲಿ ಕಳೆದ ಐದು ದಿನಗಳಿಂದ ಕರೊನಾ ಸೋಂಕು ಪತ್ತೆಯಾಗುತ್ತಿದ್ದು, ಬುಧವಾರ 2, ಗುರುವಾರ 6, ಶುಕ್ರವಾರ 4 ಮತ್ತು ಶನಿವಾರ 1 ಮತ್ತು ಭಾನುವಾರ 29 ಪ್ರಕರಣ ಸೇರಿ ಒಟ್ಟು 42 ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ತಪ್ಪಿದ ಹೆಚ್ಚಿನ ಅನಾಹುತ: ಮುಂಡರಗಿ ಪಟ್ಟಣದ ವಿದ್ಯಾರ್ಥಿಯೊಬ್ಬನಿಗೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡದ ಕಾರಣ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಮುಂಡರಗಿ ಪಟ್ಟಣದ ನೀರಾವರಿ ಇಲಾಖೆಯ ಸಿಬ್ಬಂದಿಯಿಂದ ಈ ವಿದ್ಯಾರ್ಥಿಯ ತಂದೆಗೆ ಸೋಂಕು ತಗುಲಿತ್ತು. ಹೀಗಾಗಿ ಈತನನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಇದೀಗ ಈ ವಿದ್ಯಾರ್ಥಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದ ಬಿಇಒ ಗಂಗಾಧರ ಅಣ್ಣಿಗೇರಿ ಅವರ ನಿರ್ಧಾರ ಶ್ಲಾಘನೀಯವಾಗಿದೆ.
‘ಸೋಂಕಿತರ ಸಂಪರ್ಕವಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದೂರವಾಣಿ ಮೂಲಕ ವಿದ್ಯಾರ್ಥಿಯನ್ನು ಸಂರ್ಪಸಿ, ಈಗ ಪರೀಕ್ಷೆ ಬರೆಯಲು ಅವಕಾಶ ನೀಡುವುದಕ್ಕೆ ಆಗುವುದಿಲ್ಲ. ಪೂರಕ ಪರೀಕ್ಷೆಯಲ್ಲಿ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು. ವಿದ್ಯಾರ್ಥಿಯು ಪ್ರಾರಂಭದಿಂದಲೂ ಪರೀಕ್ಷೆಗೆ ಹಾಜರಾಗಿರಲಿಲ್ಲ’ ಎಂದು ಬಿಇಒ ಗಂಗಾಧರ ಅಣ್ಣಿಗೇರಿ ತಿಳಿಸಿದ್ದಾರೆ.
ವೈರಸ್ ತಡೆಗೆ ಮುಂಡರಗಿಯಲ್ಲಿ ಬಿಗಿ ಕ್ರಮ: ಮುಂಡರಗಿ ಪಟ್ಟಣದಲ್ಲಿ ತೀವ್ರವಾಗಿ ಹರಡುತ್ತಿರುವ ಕರೊನಾ ಸೋಂಕು ತಡೆಗೆ ತಾಲೂಕು ಆಡಳಿತ ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಪ್ರಭಾರಿ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಹೇಳಿದರು.
ಕರೊನಾ ನಿಯಂತ್ರಣ ಕುರಿತು ಪಟ್ಟಣದ ಪುರಸಭೆ ಗಾಂಧಿಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಕೋವಿಡ್-19 ನಿಯಂತ್ರಣಕ್ಕಾಗಿ ಜೂನ್ 29ರಿಂದ ಬೆಳಗ್ಗೆ 7 ಗಂಟೆಯಿಂದ 11ಗಂಟೆಯವರೆಗೆ ಮಾತ್ರ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳು ಕಾರ್ಯ ನಿರ್ವಹಿಸಲಿವೆ. ಆದರೆ, ಔಷಧ ಹಾಗೂ ಹಾಲಿನ ಅಂಗಡಿಗಳು ಹಾಗೂ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಹೋಟೆಲ್ಗಳಲ್ಲಿ ಪಾರ್ಸಲ್ ನೀಡಲು ಮಾತ್ರ ಅವಕಾಶ ನೀಡಲಾಗಿದೆ. ಬಸ್ಗಳು ಎಂದಿನಂತೆ ಸಂಚರಿಸುತ್ತವೆ’ ಎಂದು ತಿಳಿಸಿದರು.
ಪಟ್ಟಣದಲ್ಲಿ ಮಾಸ್ಕ್ ಧರಿಸದೆ ತಿರುಗಾಡುವವರಿಗೆ 100 ರೂ. ದಂಡ ವಿಧಿಸಲಾಗುತ್ತದೆ. ಕಂಟೇನ್ಮೆಂಟ್ ಮತ್ತು ನಿಷೇಧಿತ ಪ್ರದೇಶಗಳೆಂದು ಗುರುತಿಸಲ್ಪಟ್ಟ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಅಂಗಡಿಗಳಲ್ಲಿ ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ತಿಳಿಸಿದರು. ಸಿಪಿಐ ಸುಧೀರಕುಮಾರ ಬೆಂಕಿ ಮಾತನಾಡಿ, ಹೋಂ ಕ್ವಾರಂಟೈನ್ ಉಲ್ಲಂಘಿಸಿದವರ ವಿರುದ್ಧ ಕಾನೂನು ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್. ನಾಯ್ಕರ, ತಾಲೂಕು ಪಂಚಾಯಿತಿ ಯೋಜನಾ ನಿರ್ದೇಶಕ ಎಂ.ಎಸ್. ಕೊರ್ಲಹಳ್ಳಿ, ಡಾ.ಸಂತೋಷ ಪಾಟೀಲ, ಪಿಎಸ್ಐ ಚಂದ್ರಪ್ಪ ಈಟಿ, ಸರ್ವ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರಕಾಶ ಕಾಲವಾಡ, ಕರಬಸಪ್ಪ ಹಂಚಿನಾಳ, ರವೀಂದ್ರ ಉಪ್ಪಿನಬೆಟಗೇರಿ, ರಜನಿಕಾಂತ ದೇಸಾಯಿ, ಎಸ್.ವಿ. ಪಾಟೀಲ, ರಾಮಚಂದ್ರ ಕಲಾಲ, ಲಿಂಗರಾಜಗೌಡ ಪಾಟೀಲ, ವಿಠ್ಠಲ ಗಣಾಚಾರಿ, ಅಶೋಕ ಸಿದ್ಲಿಂಗ, ರಾಜಾಬಕ್ಷೀ ಬೆಟಗೇರಿ, ನಾಗರಾಜ ಹೊಂಬಳಗಟ್ಟಿ, ಪ್ರಹ್ಲಾದ ಹೊಸಮನಿ, ರಫೀಕ್ ಮುಲ್ಲಾ, ಎಸ್.ಎಸ್. ಬಿಚ್ಚಾಲಿ ಉಪಸ್ಥಿತರಿದ್ದರು.
ಟಂಟಂಗಳಲ್ಲಿ ಜನವೋ ಜನ!: ಗಜೇಂದ್ರಗಡ: ಎಲ್ಲೆಡೆ ಕರೊನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆದರೆ, ಪಟ್ಟಣ ಸೇರಿ ತಾಲೂಕಿನ ಜನ ಅದನ್ನ ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಸರ್ಕಾರದ ಯಾವುದೇ ನಿಯಮಗಳನ್ನು ಪಾಲಿಸದೆ ಸಂಚಾರ ಮಾಡುತ್ತಿದ್ದಾರೆ. ಪಟ್ಟಣದ ಮಾರುಕಟ್ಟೆಯಲ್ಲಿ ಜನರು ಮುಗಿಬಿದ್ದು ಖರೀದಿಯಲ್ಲಿ ತೊಡಗಿದ್ದಾರೆ. ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದರೆ ಅದೆಲ್ಲವೂ ಇಲ್ಲಿ ಮಾಯವಾಗಿದೆ. ಬಹುತೇಕರು ಮಾಸ್ಕ್ ಧರಿಸದೆ ವ್ಯವಹರಿಸುತ್ತಿದ್ದಾರೆ. ಇನ್ನು ಟಂಟಂ ಮತ್ತು ಸರಕು ಸಾಗಣೆ ವಾಹನಗಳಲ್ಲಿ ಜನರನ್ನು ಕುರಿಗಳಂತೆ ತುಂಬಿ ಸಂಚರಿಸಲಾಗುತ್ತಿದೆ. ರೋಣ ತಾಲೂಕಿನಲ್ಲಿ 5 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಆದರೂ, ಸೋಂಕು ತಡೆಗೆ ಜನರು ಸಹಕರಿಸುತ್ತಿಲ್ಲ. ಗುಂಪುಗುಂಪಾಗಿ ಸೇರುವುದು ಬಿಡುತ್ತಿಲ್ಲ.