

ಗದಗ: ಜಿಲ್ಲೆಯಲ್ಲಿ ಮಂಗಳವಾರ 14 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 627ಕ್ಕೇರಿದಂತಾಗಿದೆ. ಕಳೆದ ಎರಡು ದಿನಗಳಿಂದ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿರುವುದು ಕೊಂಚ ಸಮಾಧಾನ ತಂದಿದೆ.
ಗದಗ ಹುಡ್ಕೋ ಕಾಲನಿ ಜಾಗೃತ ಹನುಮಾನ ದೇವಸ್ಥಾನದ ಹತ್ತಿರದ ನಿವಾಸಿ 57 ವರ್ಷದ ಮಹಿಳೆ, ಲಕ್ಷ್ಮೇಶ್ವರದ ಸೋಮೆಶ್ವರ ನಗರದ 34 ವರ್ಷದ ಪುರುಷನಿಗೆ, ಗದಗ ಮಂಜುನಾಥ ನಗರದ 2 ಮತ್ತು 3 ವರ್ಷದ ಬಾಲಕಿಯರು, ಹಾಗೂ ಮುಂಡರಗಿ ತಾಲೂಕಿನ ಕದಾಂಪುರ ನಿವಾಸಿ 20 ವರ್ಷದ ಪುರುಷ, ಗದಗ ಅಮರೇಶ್ವರ ನಗರದ 32 ವರ್ಷದ ಪುರುಷನಿಗೆ ಸೋಂಕು ತಗುಲಿದೆ.
ಲಕ್ಷ್ಮೇಶ್ವರ ಸೋಮೆಶ್ವರ ದೇವಸ್ಥಾನದ ಹತ್ತಿರ ನಿವಾಸಿ 50 ವರ್ಷದ ಮಹಿಳೆ, ಗದಗ ಮಂಜುನಾಥ ನಗರದ 32 ವರ್ಷದ ಪುರುಷ, ಟ್ಯಾಗೋರ್ ರಸ್ತೆ ನಿವಾಸಿ 55 ವರ್ಷದ ಪುರುಷ, ರಾಜೀವಗಾಂಧಿ ನಗರದ 62 ವರ್ಷದ ಮಹಿಳೆ, ಹುನುಮಾನ ನಗರದ 58 ವರ್ಷದ ಪುರುಷ, ಹುಲಕೋಟಿ ನಿವಾಸಿ 33 ವರ್ಷದ ಪುರುಷ, ಮುಂಡರಗಿ ಬಿಎಸ್ಸೆನ್ನೆಲ್ ಹತ್ತಿರದ 26 ವರ್ಷದ ಪುರುಷ, ಲಕ್ಷ್ಮೇಶ್ವರ ಗಡ್ಡದದೇವರ ಮಠ ನಿವಾಸಿ 28 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ತಿಳಿಸಿದ್ದಾರೆ.
ವೃದ್ಧ ಸಾವು: ಜಿಲ್ಲೆಯಲ್ಲಿ ಕರೊನಾ ಸೋಂಕು ಸೇರಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ 61 ವರ್ಷದ ವೃದ್ಧ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ 61 ವರ್ಷದ ವೃದ್ಧ ಸಕ್ಕರೆ ಕಾಯಿಲೆ ಹಾಗೂ ಉಸಿರಾಟ ತೊಂದರೆಯಿಂದಾಗಿ ಸೋಮವಾರ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೋವಿಡ್-19 ದೃಢಪಟ್ಟಿದೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್-19ರ ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಮ್್ಸ ನಿರ್ದೇಶಕರಿಗೆ ವೈರಸ್
ಕರೊನಾ ನಿಯಂತ್ರಣಕ್ಕಾಗಿ ಮುಂಚೂಣಿಯಲ್ಲಿ ಹೋರಾಟ ನಡೆಸಿರುವ ಜಿಮ್ಸ್ (ಗದಗ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ) ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ಅವರಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ.
ಕಳೆದ ಐದಾರು ದಿನಗಳಿಂದ ಜಿಮ್ಸ್ ವಸತಿ ಗೃಹದಲ್ಲಿ ಇರುವವರಿಗೆ ಸೋಂಕು ದೃಢಪಟ್ಟಿತ್ತು. ಇದೇ ಕಾರಣದಿಂದ ಕಳೆದ ನಾಲ್ಕು ದಿನಗಳಿಂದ ನಿರ್ದೇಶಕ ಡಾ. ಭೂಸರಡ್ಡಿ ಅವರು ಹೋಂ ಕ್ವಾರಂಟೈನ್ ಆಗಿದ್ದರು.
ನಿರ್ದೇಶಕರಿಗೆ ಸೋಂಕು ತಗುಲಿದ್ದರಿಂದ ಜಿಮ್ಸ್ ವೈದ್ಯರು ಸೇರಿ ಇತರ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ಕರೊನಾ ನಿಯಂತ್ರಣಕ್ಕಾಗಿ ನಿರ್ದೇಶಕರ ನೇತೃತ್ವದಲ್ಲಿ ವೈದ್ಯರು ಸಭೆ ಸೇರಿದ್ದರು. ಅಲ್ಲದೆ, ಜಿಮ್ಸ್ ಕಚೇರಿ ಸಿಬ್ಬಂದಿ ಕೆಲಸ ಕಾರ್ಯ ಗಳ ನಿಮಿತ್ತ ನೇರವಾಗಿ ನಿರ್ದೇಶಕರೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ಇದೀಗ ಅವರೆಲ್ಲರಿಗೂ ಢವ ಢವ ಶುರುವಾಗಿದೆ.
ಕಳೆದ ನಾಲ್ಕು ತಿಂಗಳಿಂದ ನಿರ್ದೇಶಕ ಡಾ. ಭೂಸರಡ್ಡಿ ಮತ್ತವರ ತಂಡದವರು ಕರೊನಾ ವಿರುದ್ಧ ಹೋರಾಟ ನಡೆಸಿದ್ದಾರೆ.ಅಲ್ಲದೆ, ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಾಳೆಯ ಪ್ರಕಾರ ವೈದ್ಯರಿಗೆ ಜವಾಬ್ದಾರಿ ನೀಡಿ ಕೆಲಸ ಮಾಡಿಸುತ್ತಿದ್ದಾರೆ. ಇಂಥ ಕ್ಲಿಷ್ಟಕರ ಸಮಯದಲ್ಲಿ ವೈದ್ಯರಿಗೆ ಸೋಂಕು ತಗುಲುತ್ತಿರುವುದು ಜಿಲ್ಲೆಯ ಜನರ ನಿದ್ದೆಗೆಡಿಸಿದೆ.
ಕರೊನಾ ಸೋಂಕು ತಗುಲಿರುವುದು ನಿಜ. ಹೋಂ ಕ್ವಾರಂಟೈನ್ ಆಗುವ ಮೂಲಕ ಕರೊನಾ ಕೆಲಸ ಮಾಡಲಾಗುವುದು. ಜನರು ಭಯಪಡಬಾರದು. ಆತ್ಮವಿಶ್ವಾಸದ ಮೂಲಕ ಕರೊನಾ ಗೆಲ್ಲಬಹುದು.
| ಡಾ. ಪಿ.ಎಸ್. ಭೂಸರಡ್ಡಿ, ಜಿಮ್ಸ್ ನಿರ್ದೇಶಕ
ಕೋವಿಡ್ ನಿಯಂತ್ರಣಕ್ಕೆ ಸಮಿತಿ ರಚನೆ
ಗದಗ: ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ 9 ಸ್ಥಳೀಯ ಸಂಸ್ಥೆಗಳ ವಾರ್ಡ್ ಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಮತ್ತು ಬೂತ್ ಮಟ್ಟದ ಸಮಿತಿಗಳನ್ನು ರಚಿಸಿ ಜಿಲ್ಲಾಡಳಿತ ನೀಡುವ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಜಾಗೃತಿ ಹಾಗೂ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರ ಸಹಕಾರದೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಬೂತ್ ಹಾಗೂ ವಾರ್ಡ್ ಮಟ್ಟದ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಪೂರ್ಣವಾಗಿ ನಿಯಂತ್ರಣಕ್ಕೆ ತರಬೇಕು. ಇದಕ್ಕೆ ಪೂರಕವಾಗಿ ಕೋವಿಡ್-19 ಸೋಂಕಿನ ಲಕ್ಷಣವಾದ ಉಸಿರಾಟದ ತೊಂದರೆ ಇದ್ದವರನ್ನು ಸ್ಥಳದಲ್ಲೇ ತಕ್ಷಣವೇ ಪರೀಕ್ಷಿಸಲು ಪಲ್ಸ್ ಅಕ್ಸಿಯೋಮೀಟರ್ ಉಪಕರಣವನ್ನು ನೀಡಲಾಗುತ್ತಿದೆ. ಇದನ್ನು ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಸಂಬಂಧಿತ ವಾರ್ಡ್ ಮತ್ತು ಬೂತ್ ಮಟ್ಟದ ಸಿಬ್ಬಂದಿಗೆ ವಿತರಿಸಬೇಕು. ಈ ಕುರಿತು ಸಿಬ್ಬಂದಿಗೆ ತರಬೇತಿ ನೀಡಿ ವಿತರಿಸಿ ತಕ್ಷಣದಿಂದ ಸಮಸ್ಯೆ ಇರುವ ಸಾರ್ವಜನಿಕರ ಆರೋಗ್ಯ ತಪಾಸಣೆ ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಅವರಿಗೆ ಜಿಲ್ಲಾಧಿಕಾರಿ ಸುಂದರೇಶಬಾಬು ಅವರು ಸಾಂಕೇತಿಕವಾಗಿ ಪಲ್ಸ್ ಅಕ್ಸಿಯೋಮೀಟರ್ ಉಪಕರಣ ಹಸ್ತಾಂತರಿಸಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್.ಎನ್. ಹಾಗೂ ಬಸವರಾಜ ಇದ್ದರು.
ಆರು ಪ್ರದೇಶಗಳಲ್ಲಿ ನಿರ್ಬಂಧ ತೆರವು
ಗದಗ: ಜಿಲ್ಲೆಯಲ್ಲಿ ಕರೊನಾ ಸೋಂಕಿನ ಸಕಾರಾತ್ಮಕ ಪ್ರಕರಣಗಳು ವರದಿಯಾಗಿದ್ದ 6 ಪ್ರದೇಶಗಳ ಮೇಲೆ ಹೇರಲಾಗಿದ್ದ ನಿರ್ಬಂಧ (ಕಂಟೇನ್ಮೆಂಟ್) ತೆರವುಗೊಳಿಸಿ ಸಾಮಾನ್ಯ ವಲಯ ಎಂದು ಘೊಷಿಸಿ ಜಿಲ್ಲಾಧಿಕಾರಿ ಸುಂದರೇಶಬಾಬು ಆದೇಶ ಹೊರಡಿಸಿದ್ದಾರೆ.
ಮುಂಡರಗಿಯ ಎ.ಬಿ. ನಗರ, ಮುಂಡರಗಿ ತಾಲೂಕು ಮೇವುಂಡಿಯ ಜನತಾ ಪ್ಲಾಟ್, ನರಗುಂದ ಪಟ್ಟಣದ ಗಾಡಿ ಓಣಿ, ನರಗುಂದ ಪಟ್ಟಣದ ಹೊರಕೇರಿ ಓಣಿ, ಗದಗ ತಾಲೂಕು ಹೊಂಬಳದ ದೊಡ್ಡ ಓಣಿ, ರೋಣ ಪಟ್ಟಣದ ಡಿ ಪಾಲ್ ಸ್ಕೂಲ್ ಪ್ರದೇಶಗಳನ್ನು ಸಾಮಾನ್ಯ ವಲಯ ಎಂದು ಘೊಷಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಳವತ್ತಿ ಗ್ರಾಮಸ್ಥರಲ್ಲಿ ಢವಢವ
ಲಕ್ಷ್ಮೇಶ್ವರ: ಅನಾರೋಗ್ಯದ ಹಿನ್ನೆಲೆಯಲ್ಲಿ ಜಿಮ್ಸ್ನಲ್ಲಿ ಮೃತಪಟ್ಟ ಯಳವತ್ತಿ ಗ್ರಾಮದ ವೃದ್ಧೆಗೆ ಕರೊನಾ ಪಾಸಿಟಿವ್ ಇರುವ ಬಗ್ಗೆ 5 ದಿನಗಳ ನಂತರ ವರದಿಯಾಗಿರುವುದು ಕುಟುಂಬಸ್ಥರು ಮತ್ತು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಗ್ರಾಮದ 64 ವರ್ಷದ ವೃದ್ಧೆ ಅನಾರೋಗ್ಯದಿಂದ ಜು. 16ರಂದು ಗದಗ ಜಿಮ್ಸ್ಗೆ ದಾಖಲಾಗಿದ್ದರು. ಜು.17 ರಂದು ಮೃತಪಟ್ಟಿದ್ದಾಳೆ. ವೈದ್ಯರ ಅನುಮತಿ ಮೇರೆಗೆ ಮೃತದೇಹವನ್ನು ಗ್ರಾಮಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಮೃತ ವೃದ್ಧೆಗೆ ಕರೊನಾ ಸೋಂಕಿರುವ ಬಗ್ಗೆ ಮಂಗಳವಾರ ಖಚಿತವಾಗುತ್ತಿದ್ದಂತೆ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡವರು ಹಾಗೂ ಗ್ರಾಮಸ್ಥರಲ್ಲಿ ಢವಢವ ಶುರುವಾಗಿದೆ. ಮೃತ ವೃದ್ಧೆಯ ಮಗ ಪ್ರತಿಕ್ರಿಯಿಸಿ, ವೈದ್ಯರು ತಾಯಿಯ ಆರೋಗ್ಯ ಪರೀಕ್ಷಿಸಿ ಅವರ ಗಂಟಲ ದ್ರವ ಪಡೆದಿದ್ದರು. ಮರುದಿನ ತಾಯಿ ಮೃತಪಟ್ಟರು. ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಿ 2 ಗಂಟೆಯ ನಂತರ ಕರೊನಾ ವರದಿ ಬರಬಹುದು ಎಂದು ತಿಳಿಸಿದ್ದರು. ಯಾವುದೇ ಭಯವಿಲ್ಲದೆ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದೇವೆ. ಈಗ ಕರೊನಾ ಪಾಸಿಟಿವ್ ಬಂದಿರುವುದು ನಮ್ಮನ್ನು ಚಿಂತೆಗೀಡು ಮಾಡಿದೆ. ಮೊದಲೇ ಹೇಳಿದ್ದರೆ ಜಾಗರೂಕತೆಯಿಂದ ಜನರನ್ನು ಸೇರಿಸದೇ ಅಂತ್ಯ ಸಂಸ್ಕಾರ ಮಾಡುತ್ತಿದ್ದೆವು. ಇದೀಗ ಗ್ರಾಮಸ್ಥರೂ ಭಯಭೀತರಾಗಿದ್ದಾರೆ ಎಂದರು. ಗ್ರಾಮದಲ್ಲಿ ಮುಂಜಾಗ್ರತೆ ಕ್ರಮವಾಗಿ ಸೋಂಕಿತೆ ವಾಸವಿದ್ದ ಪ್ರದೇಶವನ್ನು ಸೀಲ್ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ ಎಂದು ಪಿಡಿಒ ಪಿ.ಎಚ್. ಗೋಣೇಮ್ಮನವರ ಹೇಳಿದರು.
ವೃದ್ಧೆಯ ಕುಟುಂಬದ 5 ಸದಸ್ಯರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಜತೆಗೆ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಅಂದಾಜು 25 ಜನರ ವರದಿ ಸಂಗ್ರಹಸಿ ಹೋಂ ಕ್ವಾರಂಟೈನ್ಗೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ತಿಳಿಸಿದ್ದಾರೆ.
ಮುಳಗುಂದಕ್ಕೆ ಎಸ್ಪಿ ಭೇಟಿ
ಮುಳಗುಂದ: ಗದಗ ಎಸ್ಪಿ ಎನ್. ಯತೀಶ ಅವರು ಮಂಗಳವಾರ ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ, ಕಡತಗಳನ್ನು ಪರಿಶೀಲಿಸಿ ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು.
ನಂತರ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದಲ್ಲಿ ಎಲ್ಲ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು. ಅಕ್ರಮ ಚಟುವಟಿಕೆ ಕಂಡು ಬಂದಲ್ಲಿ ಕರೆ ಮಾಡಿ ತಿಳಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕೆಲವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಮಾಸ್ಕ್ ಧರಿಸದಿರುವವರಿಗೆ ದಂಡ ವಿಧಿಸಲು ಸಿಬ್ಬಂದಿಗೆ ತಿಳಿಸಲಾಗಿದೆ ಎಂದರು. ಗದಗ ವಿಭಾಗದ ಡಿವೈಎಸ್ಪಿ ಎಸ್.ಕೆ. ಪ್ರಲ್ಹಾದ, ಗದಗ ಗ್ರಾಮೀಣ ಸಿಪಿಐ ರವಿ ಕಪ್ಪತ್ತನವರ, ಪಿಎಸ್ಐ ವಾಸುದೇವ ಹುಲ್ಲೂರ ಹಾಗೂ ಸಿಬ್ಬಂದಿ ಇದ್ದರು.
ಆಸ್ಪತ್ರೆಗೆ ಬೀಗ ಜಡಿದು ರಾಜೂರ ಗ್ರಾಮಸ್ಥರ ಪ್ರತಿಭಟನೆ
ಗಜೇಂದ್ರಗಡ: ಗ್ರಾಮದಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಯೊಬ್ಬನಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಗ್ರಾಮದ 10ಕ್ಕೂ ಹೆಚ್ಚು ಜನರು ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಹೋಂ ಕ್ವಾರಂಟೈನಲ್ಲಿದ್ದ ವ್ಯಕ್ತಿಯ ಮೇಲೆ ನಿಗಾ ವಹಿಸುವಲ್ಲಿ ಸ್ಥಳೀಯ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಸಮೀಪದ ರಾಜೂರ ಗ್ರಾಮಸ್ಥರು ಸೋಮವಾರ ಸರ್ಕಾರಿ ಆಯುರ್ವೆದಿಕ್ ಆಸ್ಪತ್ರೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಜು.14 ರಂದು ಬೆಂಗಳೂರಿನಿಂದ ಗ್ರಾಮಕ್ಕೆ ಬಂದಿದ್ದ ವ್ಯಕ್ತಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆದರೆ, ಆತ ಕ್ವಾರಂಟೈನ್ ಇರದೇ ಹಲವು ಜನರೊಂದಿಗೆ ಸಂಪರ್ಕ ಹೊಂದಿದ್ದಾನೆ. ಸ್ಥಳೀಯ ವೈದ್ಯರು ನಿಯಮಿತವಾಗಿ ಆತನ ಮೇಲೆ ನಿಗಾ ಇಡದಿರುವುದೇ ಇಷ್ಟೊಂದು ಜನರು ಪ್ರಾಥಮಿಕ ಸಂಪರ್ಕಕ್ಕೆ ಬರಲು ಕಾರಣವಾಗಿದೆ. ಅಲ್ಲದೆ, ಈ ಹಿಂದೆ ಬೇರೆ ಊರುಗಳಿಂದ ಬಂದಿದ್ದ ಜನರನ್ನು ಕ್ವಾರಂಟೈನ್ ಮಾಡಿ ಅವರ ಮನೆಗೆ ದಿನಕ್ಕೆರಡು ಬಾರಿ ಭೇಟಿ ನೀಡಿ ಮನೆಯಲ್ಲಿರುವಂತೆ ಸೂಚಿಸುತ್ತಿದ್ದರು. ಆದರೆ, ಈ ಪ್ರಕರಣದಲ್ಲಿ ತಾರತಮ್ಯ ಮಾಡಿದ್ದಾರೆ. ಹೀಗಾಗಿ ಸರ್ಕಾರಿ ಆಯುರ್ವೆದಿಕ್ ಆಸ್ಪತ್ರೆಯ ವೈದ್ಯರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಸ್ಥಳೀಯ ವೈದ್ಯ ಡಾ.ಮಹಾಂತೇಶ ಹಾದಿಮನಿ ಮಾತನಾಡಿ, ‘ನಾನು ಸರ್ಕಾರದ ನಿಯಮಗಳ ಪ್ರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇನೆ. ಈ ಹಿಂದೆ ಬೇರೆ ಊರುಗಳಿಂದ ಬಂದವರನ್ನು 21 ದಿನ, ನಂತರದ ದಿನಗಳಲ್ಲಿ 14 ದಿನಗಳ ಕ್ವಾರಂಟೈನ್ ಮಾಡಲಾಗುತ್ತಿತ್ತು. ಆದರೆ, ಈಗ 7 ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡಬೇಕೆಂಬ ಆದೇಶವಿದೆ. ಅದರಂತೆ ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಯಾವುದೇ ತಾರತಮ್ಯ ಮಾಡಿಲ್ಲ’ ಎಂದರು.
ನಂತರ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಅಶೋಕ ಕಲಘಟಗಿ ಹಾಗೂ ಪಿಎಸ್ಐ ಗುರುಶಾಂತ ದಾಶ್ಯಾಳ ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಮುದಿಯಪ್ಪ ಇಟಗಿ, ಬನ್ನೆಪ್ಪ ಗೂಳಿ, ಹುಚ್ಚಪ್ಪ ಗುಳಗುಳಿ, ಮಂಜು ಹಾದಿಮನಿ, ಈರಣ್ಣ ಕಳ್ಳಿಗುಡ್ಡ, ಕಳಕಪ್ಪ ಕಾತ್ರಾಳ, ಕುಮಾರ ಹೂಗಾರ, ಶರಣಪ್ಪ ಚವ್ಹಾಣ, ಯಮನೂರಸಾಬ್ ಮುಜಾವರ ಇದ್ದರು.