

ಗದಗ: ಕರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರದ ಲಾಕ್ಡೌನ್ ಆದೇಶಕ್ಕೆ ಮಂಗಳವಾರ ಜಿಲ್ಲೆಯ ಜನರು ಸ್ಪಂದಿಸಿದ್ದಾರೆ.
ಗದಗ ಬೆಟಗೇರಿ ಸೇರಿ ಮುಂಡರಗಿ, ನರಗುಂದ, ರೋಣ, ಶಿರಹಟ್ಟಿ, ಲಕ್ಷೆ್ಮೕಶ್ವರ, ಗಜೇಂದ್ರಗಡ ಪಟ್ಟಣದಲ್ಲಿ ಜನ ಮನೆಯಿಂದ ಹೊರಗೆ ಬರದೇ ಮನೆಯಲ್ಲೇ ಕಾಲ ಕಳೆದರು.
ದಿನಬಳಕೆ ವಸ್ತುಗಳ ಖರೀದಿ ಮತ್ತಿತರ ಅಗತ್ಯ ಕೆಲಸ ಕಾರ್ಯಗಳಿಗಾಗಿ ಮಾಸ್ಕ ಧರಿಸಿಯೇ ಮನೆಯಿಂದ ಹೊರ ಬರುತ್ತಿದ್ದಾರೆ. ಪ್ರಮುಖ ಸ್ಥಳದಲ್ಲಿ ಪೊಲೀಸರು ನೀಡುವ ಎಚ್ಚರಿಕೆ, ಮನವಿಗೆ ಅನೇಕರು ಸ್ಪಂದಿಸಿದರು.
ಹಾಲು, ಔಷಧ ಅಂಗಡಿ ಸೇರಿ ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿದ್ದವು. ಉಳಿದಂತೆ ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ. ಸಾರಿಗೆ ಸಂಚಾರ ಇಲ್ಲದೆ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣ ಬಿಕೋ ಎನ್ನುತ್ತಿದ್ದವು. ರಸ್ತೆಗಳು ಭಣಗುಡುತ್ತಿದ್ದವು.
ಇನ್ನು ಗದಗ ಬೆಟಗೇರಿ ಅವಳಿ ನಗರದಲ್ಲಿ ಬೆಳಗ್ಗೆ ಅಲ್ಲಲ್ಲ ಕೆಲ ಅಂಗಡಿಗಳು ತೆರೆದಿದ್ದವು. ಪೊಲೀಸರ ಸೂಚನೆ ನಂತರ ಎಲ್ಲವನ್ನೂ ಬಂದ್ ಮಾಡಲಾಯಿತು. ಯುಗಾದಿ ಅಮಾವಾಸ್ಯೆ ದಿನವಾದ ಮಂಗಳವಾರ ಕೆಲವರು ಪೂಜಾ ಸಾಮಗ್ರಿಗಳನ್ನು ಖರೀದಿಸಲು ಹೊರಗೆ ಬಂದಿದ್ದರು. ಆದರೆ, ವ್ಯಾಪಾರಿಗಳಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿ ವಾಪಸು ಕಳಿಸಿದರು. ಅವಳಿ ನಗರದ ಹಲವಡೆ ಪೊಲೀಸರು ಅಂಗಡಿಗಳನ್ನು ಮುಚ್ಚಿಸಿದ್ದು ಕಂಡುಬಂದಿತು.
ಜನನಿಬಿಡ ಪ್ರದೇಶಗಳಾದ ಮಹಾತ್ಮಗಾಂಧಿ ವೃತ್ತ, ಮುಳಗುಂದ ನಾಕಾ, ಹಳೇ ಡಿಸಿ ಕಚೇರಿ ವೃತ್ತ, ಹೊಸ ಬಸ್ ನಿಲ್ದಾಣ, ಹಾತಲಗೇರಿ ನಾಕಾ, ಕೆ.ಸಿ.ರಾಣಿ ರಸ್ತೆ, ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣರಾವ ವೃತ್ತ, ಬೆಟಗೇರಿ ಬಸ್ ನಿಲ್ದಾಣ ಮತ್ತು ಟೆಂಗಿನಕಾಯಿ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಸಕಾರಣ ಇಲ್ಲದೆ ಬೈಕ್ನಲ್ಲಿ ಸಂಚರಿಸುತ್ತಿದ್ದ ಯುವಕರಿಗೆ ಪೊಲೀಸರು ಎಚ್ಚರಿಕೆ ನೀಡಿ ಮನೆಗೆ ಕಳಿಸಿದ್ದು ಕಂಡುಬಂದಿತು.
ಬೆಟಗೇರಿಯ ಇಂದಿರಾ ಕ್ಯಾಂಟೀನ್ನಲ್ಲಿ ಬೆಳಗ್ಗೆ ಉಪಹಾರ ನೀಡಲಾಯಿತು. ನಂತರ ಪೊಲೀಸರು ಕ್ಯಾಂಟೀನ್ ಬಂದ್ ಮಾಡಿಸಿದರು. ಕೆಲವೆಡೆ ಬೇಗ ಬೇಗ ಅಗತ್ಯ ವಸ್ತುಗಳನ್ನು ಖರೀದಿಸಿ ಮನೆ ಸೇರಬೇಕು ಎಂದು ಪೊಲೀಸರು ಮನವಿ ಮಾಡಿದರು. ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಯಾವುದೇ ಕಾರಣಕ್ಕೂ ಜನರು ಮನೆಯಿಂದ ಹೊರಗೆ ಬರಬಾರದು ಎಂದು ಪೊಲೀಸರು ಮೈಕ್ ಮೂಲಕ ತಿಳಿಹೇಳಿದರು.
ನಿಯಂತ್ರಿತ ಪ್ರದೇಶಗಳೆಂದು ಘೊಷಣೆ
ಜಿಲ್ಲೆಯ ಗದಗ ತಾಲೂಕಿನ ಅಡವಿಸೋಮಾಪೂರ, ಪಾಪನಾಶಿ ತಾಂಡಾಗಳು ಹಾಗೂ ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ, ಡೋಣಿ ತಾಂಡಾಗಳ ಸುತ್ತಲಿನ 500 ಮೀಟರ್ ಪ್ರದೇಶವನ್ನು ನಿಯಂತ್ರಿತ ಪ್ರದೇಶವೆಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಘೊಷಿಸಿ ದೇಶ ಹೊರಡಿಸಿದ್ದಾರೆ.
ತಾಂಡಾಗಳಿಗೆ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಜನರ ಪ್ರವೇಶವನ್ನು ನಿರ್ಬಂಧಿಸಿದೆ. ನಿಯಂತ್ರಿತ ವ್ಯಾಪ್ತಿ ಪ್ರದೇಶಗಳಲ್ಲಿ ಉರುಸು, ಜಾತ್ರೆ, ಮೆರವಣಿಗೆ, ಜನ ಗುಂಪು ಸೇರುವಿಕೆ, ಸಭೆ ಅಥವಾ ಮದುವೆ ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅಗತ್ಯ ವಸ್ತುಗಳ ಪೂರೈಕೆಯನ್ನು ಸಂಬಂಧಿತ ಇಲಾಖೆಗಳ ಮೂಲಕವೇ ಪಡೆಯಬೇಕು. ಖಾಸಗಿ ಮೂಲಗಳಿಗೆ ಅವಕಾಶವಿಲ್ಲ. ಈ ಪ್ರದೇಶಗಳ ಜನ ಮನೆ ಬಿಟ್ಟು ಹೊರಗೆ ತಿರುಗುವುದನ್ನು ನಿಷೇಧಿಸಲಾಗಿದೆ. ತಾಂಡಾಗಳ ಜನರು ಗೃಹಸಂಪರ್ಕ ತಡೆಯೊಳಗೆ ಇರುವುದು ಕಡ್ಡಾಯವಾಗಿದೆ. ಈ ಪ್ರದೇಶಗಳ ಎಲ್ಲ ಶಾಲಾ, ಕಾಲೇಜು, ಕಚೇರಿಗಳನ್ನು ಮುಚ್ಚಲಾಗಿದೆ. ವಾಹನ ಸಂಚಾರವನ್ನು(ಕರ್ತವ್ಯ ನಿರತ ವಾಹನ ಹೊರತುಪಡಿಸಿ) ನಿರ್ಬಂಧಿಸಿದೆ.
ಈ ಪ್ರದೇಶಗಳಲ್ಲಿ ಕರೊನಾ ಸೋಂಕು ಪತ್ತೆ ಹಚ್ಚಲು, ಇತರ ರೋಗಗಳು ಸೇರಿ ವೈದ್ಯಕೀಯ ಚಿಕಿತ್ಸೆ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ರಮವಹಿಸಬೇಕು. ಕರೊನಾ ಸೋಂಕು ಪ್ರಕರಣಗಳು ಕಂಡುಬಂದಲ್ಲಿ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ನಿರ್ದೇಶಿಸಿದ್ದಾರೆ.
ಕರೊನಾ ತಡೆಗೆ ಔಷಧ ಸಿಂಪಡಣೆ
ಗದಗ: ಕರೊನಾ ಸಾಂಕ್ರಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಗದಗ-ಬೆಟಗೇರಿ ನಗರಸಭೆ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸಾಂಕ್ರಾಮಿಕ ರೋಗ ನಿಯಂತ್ರಕ ಔಷಧ ಸಿಂಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಗದಗ-ಬೆಟಗೇರಿ ಅವಳಿ ನಗರದ ಎಲ್ಲ ಪ್ರದೇಶಗಳಲ್ಲಿ ಔಷಧ ಸಿಂಪಡಿಸಬೇಕು ಹಾಗೂ ಸ್ವಚ್ಛತೆ ಕಾಪಾಡಬೇಕು ಎಂದು ಸೂಚನೆ ನೀಡಿದರು.
ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಅವರು ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಮುಂಜಾಗ್ರತೆ ಕ್ರಮವಾಗಿ ನಗರಸಭೆ ವತಿಯಿಂದ ನಗರದಲ್ಲಿ ಔಷಧ ಸಿಂಪಡಿಸಲು ಕ್ರಮ ಜರುಗಿಸಲಾಗುತ್ತಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಕೈತೊಳೆಯಲು ಅನುಕೂಲವಾಗುವಂತೆ ಟ್ರ್ಯಾಕ್ಟರ್ನಲ್ಲಿ ನೀರಿನ ಟ್ಯಾಂಕ್ ಹಾಗೂ ಸಾಬೂನು ಇರಿಸಲಾಗಿದೆ ಎಂದರು.
ನಗರಸಭೆ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಕೈ ತೊಳೆಯಲು ನೀರಿನ ಟ್ಯಾಂಕ್ ಇಡಲಾಗಿದ್ದು, ಒಟ್ಟಾರೆ, ಕರೊನಾ ತಡೆಗೆ ನಗರಸಭೆ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
EndFragment