ಗದಗ ಜಿಲ್ಲಾದ್ಯಂತ ನಿಷೇಧಾಜ್ಞೆ ಇಂದಿನಿಂದ

GADAG DC SUNDARESH BAABU
Published on

ಗದಗ: ಜಿಲ್ಲಾದ್ಯಂತ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜು. 17ರ ರಾತ್ರಿ 8 ಗಂಟೆಯಿಂದ ಜು. 27ರ ಬೆಳಗ್ಗೆ 5 ಗಂಟೆವರೆಗೆ ಕೆಲವೊಂದು ವಿನಾಯಿತಿ ನೀಡಿ ಜಿಲ್ಲಾಧಿಕಾರಿ ಸುಂದರೇಶ ಬಾಬು ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ.

ಜಿಲ್ಲಾದ್ಯಂತ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳು ಮತ್ತು ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, 10 ವರ್ಷದೊಳಗಿನ ಮಕ್ಕಳು, ಯಾವುದೇ ರೋಗವನ್ನು ಹೊಂದಿರುವ ವ್ಯಕ್ತಿಗಳು ಹಾಗೂ ಗರ್ಭಿಣಿಯರನ್ನು ಆರೋಗ್ಯ, ಅವಶ್ಯಕ ಪೂರೈಕೆಗಳಂತಹ ಅನಿವಾರ್ಯ ಕಾರಣಗಳಲ್ಲದ ಹೊರತು ಕಡ್ಡಾಯವಾಗಿ ಅವರು ಮನೆಯಲ್ಲಿಯೇ ಇರುವಂತೆ ಸೂಚಿಸಿದೆ.

ಯಾವುದೇ ಬೃಹತ್ ಸಾರ್ವಜನಿಕ ಸಭೆ, ಸಮಾರಂಭಗಳು, ಸಂತೆ, ಜಾತ್ರೆ, ಧಾರ್ವಿುಕ, ಸಾಮಾಜಿಕ ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ.

ಈ ಆದೇಶದ ದಿನಾಂಕದ ಮೊದಲು ನಿಶ್ಚಯಿಸಿದ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆದ ವಿವಾಹ ಕಾರ್ಯಕ್ರಮಗಳಿಗೆ ಈ ಮೊದಲು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಅನುಮತಿ ನೀಡಲಾಗಿದೆ.

ಶವ ಸಂಸ್ಕಾರ ಕಾರ್ಯಕ್ಕೆ ಈ ಮೊದಲು ನಿಗದಿಪಡಿಸಿದಂತೆ ಅನುಮತಿಸಲಾಗಿದೆ. ಎಲ್ಲ ಸಾರ್ವಜನಿಕ ಸ್ಥಳ, ಅಂಗಡಿಗಳಲ್ಲಿ ಒಂದು ಮೀಟರ್ ಪರಸ್ಪರ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಮತ್ತು ಮಾಸ್ಕ್ ಕಡ್ಡಾಯವಾಗಿ ಉಪಯೋಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರಿ, ಖಾಸಗಿ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು. ಸಾರ್ವಜನಿಕ ತುರ್ತು ಸೇವೆ ಹೊರತುಪಡಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ಕೋವಿಡ್-19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳನ್ನು ಜಿಲ್ಲಾದ್ಯಂತ ಅನುಸರಿಸಬೇಕು. ಕಂಟೇನ್ಮೆಂಟ್ ವಲಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಟ್ಟುನಿಟ್ಟಿನ ನಿರ್ಬಂಧನೆ ಇರುವುದರಿಂದ ಈ ಆದೇಶ ಅನ್ವಯಿಸುವುದಿಲ್ಲ. ಸರ್ಕಾರದ ಆದೇಶದನ್ವಯ ಜು. 19 ಮತ್ತು ಜು. 26 ಭಾನುವಾರಗಳಂದು ಸಂಪೂರ್ಣ ಲಾಕ್​ಡೌನ್ ಎಂದು ಈಗಾಗಲೇ ಹೊರಡಿಸಿದ ಆದೇಶವು ಯಥಾ ಪ್ರಕಾರ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಯಾವುದಕ್ಕೆಲ್ಲ ವಿನಾಯಿತಿಗಳು: ಕೃಷಿ ಸಂಬಂಧಿತ ಚಟುವಟಿಕೆ, ಉದ್ಯೋಗ ಖಾತ್ರಿ ಕೆಲಸಕ್ಕೆ ನಿರ್ಬಂಧವಿಲ್ಲ. ಬ್ಯಾಂಕ್​ಗಳು, ಅಂಚೆ-ದೂರವಾಣಿ, ಸರ್ಕಾರಿ ಕಚೇರಿಗಳು ಮತ್ತು ಇತರ ಅಗತ್ಯ ಸೇವೆ.

ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧ ಅಂಗಡಿಗಳು. ಎಲ್ಲ ತರಹದ ಆಹಾರ ಧಾನ್ಯಗಳ ಸಂಸ್ಕರಣೆ ಘಟಕಗಳು ಮತ್ತು ಕಾರ್ಖಾನೆಗಳು.

ನೀರು, ನೈರ್ಮಲ್ಯ, ವಿದ್ಯುತ್ ಕಾರ್ಯಗಳು, ಹಾಲು ಪೂರೈಕೆ ಮತ್ತು ಪೆಟ್ರೋಲ್ ಬಂಕ್​ಗಳು.

ವ್ಯಕ್ತಿಗಳು ಮತ್ತು ಸರಕುಗಳ ಅಂತಾರಾಜ್ಯ, ಅಂತರ-ಜಿಲ್ಲೆ ಚಲನೆಗೆ ನಿರ್ಬಂಧವಿಲ್ಲ. ಅಂತಹ ಚಲನೆಗೆ ಪ್ರತ್ಯೇಕ ಅನುಮತಿ, ಅನುಮೋದನೆ, ಇ-ಪರ್ವಿುಟ್ ಅಗತ್ಯವಿಲ್ಲ. ಆದರೂ, ಇತರ ರಾಜ್ಯಗಳಿಂದ ರಾಜ್ಯಕ್ಕೆ ಬರುವ ಜನರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಕಂದಾಯ ಇಲಾಖೆ (ಡಿಎಂ) ಹೊರಡಿಸಿರುವ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳು, ಎಸ್​ಒಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಸಾರ್ವಜನಿಕ ತುರ್ತು ಸೇವೆ ಹೊರತುಪಡಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಆಗಮಿಸುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನಿನನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

| ಎಂ. ಸುಂದರೇಶ ಬಾಬು ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net