

ಗದಗ ಕ್ಷೇತ್ರದ 15 ಸಾವಿರ ಬಡ ಕುಟುಂಬಗಳಿಗೆ ಕಿಟ್ ವಿತರಣೆ
ಗದಗ: ಬಡವರ ಹಸಿವು ನೀಗಿಸಲು ಆರಂಭಿಸಿದ್ದ ‘ಮನುಕುಲ ಕಲ್ಯಾಣಕ್ಕಾಗಿ ಭಿಕ್ಷಾ ಅಭಿಯಾನ’ಕ್ಕೆ ರೈತರು, ವ್ಯಾಪಾರಸ್ಥರು, ದಾನಿಗಳು ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಿದ ಅಂದಾಜು 2.5 ಕೋಟಿ ರೂ. ಮೌಲ್ಯದ 15 ಸಾವಿರ ಆಹಾರ ಸಾಮಗ್ರಿ, ದಿನಬಳಕೆ ವಸ್ತುಗಳ ಕಿಟ್ಗಳನ್ನು ಗದಗ ಕ್ಷೇತ್ರದ ಅರ್ಹ 15 ಸಾವಿರ ಬಡ ಕುಟುಂಬಗಳಿಗೆ ತಲುಪಿಸಲಾಗಿದೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ಡೌನ್ನಿಂದ ಕೆಲಸವಿಲ್ಲದೇ ಮನೆಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ಜನರು, ಬಡವರು, ನಿರ್ಗತಿಕರಿಗೆ ಆಹಾರ ನೀಡುವ ಸಂಕಲ್ಪದೊಂದಿಗೆ ಜೋಳಿಗೆ ಹಾಕಿಕೊಂಡು ಭಿಕ್ಷಾಟನೆ ಆರಂಭಿಸಲಾಯಿತು. ಗದಗ-ಬೆಟಗೇರಿ ಸೇರಿ ಹಳ್ಳಿಗಳಲ್ಲೂ ಜನರಿಂದ ವ್ಯಾಪಕ ಬೆಂಬಲ, ಸಹಕಾರ ಸಿಕ್ಕಿತು. ರೈತರು ಜೋಳ, ಕಡಲೆ, ಉಳ್ಳಾಗಡ್ಡಿ ಮತ್ತಿತರ ದವಸ-ಧಾನ್ಯಗಳನ್ನು ದಾನ ಮಾಡಿದರು. ಸೊರಟೂರಲ್ಲಿ ಮೊದಲ ದಿನವೇ ಹತ್ತಾರು ಚೀಲ ಜೋಳ ಸಂಗ್ರಹವಾಯಿತು. ದಿನಗಳೆದಂತೆ ನೂರಾರು ದಾನಿಗಳು, ರೈತರು, ವ್ಯಾಪಾರಸ್ಥರು, ಸಣ್ಣ ಸಣ್ಣ ವ್ಯಾಪಾರಸ್ಥರೂ ಕೈಜೋಡಿಸಿದ್ದರಿಂದ 15 ಸಾವಿರ ಕುಟುಂಬಗಳಿಗೆ ಆಹಾರ, ದಿನಬಳಕೆ ವಸ್ತುಗಳ ಕಿಟ್ಗಳನ್ನು ನೀಡಲು ಸಾಧ್ಯವಾಯಿತು. ಗದಗ ಬೆಟಗೇರಿಯ ಎಲ್ಲ 35 ವಾರ್ಡ್ಗಳ ಅರ್ಹ ಬಡವರಿಗೆ ಕಿಟ್ಗಳನ್ನು ವಿತರಿಸಲಾಗಿದೆ. ಅಲ್ಲಲ್ಲಿ ಉಳಿದಿರುವ ಕೆಲವರಿಗೆ ಸೋಮವಾರ ವಿತರಿಸಲಾಗುತ್ತದೆ. ಮಂಗಳವಾರ ಸಂಜೆ ಕಿಟ್ ವಿತರಿಸುವ ಕಾರ್ಯಕ್ಕೆ ವಿರಾಮ ನೀಡಲಾಗುವುದು. ಒಂದು ತಿಂಗಳಿಂದ ಮಾಡಿದ ಜನರ ಸೇವೆ ಸಂತೃಪ್ತಿ ತಂದಿದೆ. ಜಿಲ್ಲೆಯಲ್ಲಿ ಐದು ಕರೊನಾ ಪ್ರಕರಣಗಳ ಪೈಕಿ ಒಬ್ಬರು ಮೃತಪಟ್ಟಿದ್ದು, ಉಳಿದ ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಸಂತಸ ತಂದಿದೆ. ಕರೊನಾ ಮುಕ್ತ ಜಿಲ್ಲೆ ಮಾಡಲು ಶ್ರಮಿಸಿದ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯ ಶ್ಲಾಘನೀಯ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಮಾತನಾಡಿ, ಗದಗ- ಬೆಟಗೇರಿ ಜನತೆಗೆ ಬಿಜೆಪಿಯಿಂದ 15 ಸಾವಿರ ಆಹಾರ ಸಾಮಗ್ರಿ ಕಿಟ್ ವಿತರಿಸಲಾಗಿದೆ. ಜತೆಗೆ ಜೈನ್ ಸಮಾಜ ವ್ಯಾಪಾರಸ್ಥರ ನೇತೃತ್ವದಲ್ಲಿ ಅನೇಕ ಜನರಿಗೆ ಕಿಟ್ ವಿತರಿಸಲಾಗಿದೆ ಎಂದರು. ಬಿಜೆಪಿ ಮುಖಂಡರಾದ ರಾಜು ಕುರಡಗಿ, ಕಾಂತಿಲಾಲ ಬನ್ಸಾಲಿ, ಶಂಕರಪ್ಪ ಇಂಡಿ, ಸಂಗಮೇಶ ದುಂದೂರ, ಈಶಣ್ಣ ಮುನವಳ್ಳಿ, ಎಂ.ಎಂ. ಹಿರೇಮಠ, ಜಗನ್ನಾಥಸಾ ಭಾಂಡಗೆ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಪ್ರಶಾಂತ ನಾಯ್ಕರ, ಇತರರಿದ್ದರು.
ಪ್ರಶಂಸಾರ್ಹ ಕಾರ್ಯ: ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಲಾಕ್ಡೌನ್ ಸಮಯದಲ್ಲಿ ಅನಿಲ ಮೆಣಸಿನಕಾಯಿ ಜನರಿಂದ ದವಸ-ಧಾನ್ಯ ಪಡೆದು ಅರ್ಹರಿಗೆ ಹಂಚುವ ಕಾರ್ಯ ಪ್ರಶಂಸಾರ್ಹ. ಕರೊನಾ ಕುರಿತು ಗಾಬರಿಪಡುವ ಅವಶ್ಯಕತೆ ಇಲ್ಲ. ಸುರಕ್ಷಿತವಾಗಿ ಬದುಕುವುದನ್ನು ಕಲಿಯಬೇಕು. ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಲಾಕ್ಡೌನ್ ಮುಕ್ತಾಯದ ನಂತರ ಕರೊನಾ ವೈರಸ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸಿದ ಸೇನಾನಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಅವರೊಂದಿಗೆ ರ್ಚಚಿಸಲಾಗಿದೆ. ಮೇ 17ರ ನಂತರ ಮಾಡುವುದು ಸೂಕ್ತ ಎಂದು ತಿಳಿಸಿದ್ದಾರೆ.| ಅನಿಲ ಮೆಣಸಿನಕಾಯಿ ಬಿಜೆಪಿ ಮುಖಂಡ