

ಗದಗ
ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಟೆಂಡರ್ ಕರೆಯಲು ವಿಳಂಬವಾಗಿದೆ ಎಂದು ರೈತ ಸೇನಾ ಕರ್ನಾಟಕ ಅಧ್ಯಕ್ಷ ವಿರೇಶ ಸೊಬರದಮಠ ಹೇಳಿದರು.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಳಸಾ ಮತ್ತು ಹರತಾಳ ಅರಣ್ಯ ವಿಭಾಗದಲ್ಲಿ ಹುಲಿ ಸಂರಕ್ಷಿತ ಅರಣ್ಯ ಕುರಿತು(ಟೈಗರ್ ಕಾರಿಡಾರ್) ಅರಣ್ಯ ಇಲಾಖೆಯಿಂದ ಪರವಾಣಗಿ ಪಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ಆದಷ್ಟು ಬೇಗ ಪರವಾಣಿಗೆ ಪಡೆಯಬೇಕು. ಬೇಗನೆ ಟೆಂಡರ್ ಕರೆದು ಯೋಜನೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ಮಾರ್ಚ್ 27 ಕ್ಕೆ ಚುನಾವಣಾ ನೀತಿ ಸಂಹಿತೆ ಜಾರಿ ಆಗಲಿದೆ. ಟೆಂಡರ್ ಕರೆದು ಕನಿಷ್ಠ 45 ದಿನಗಳ ನಂತರ ಟೆಂಡರ್ ಒಪನ್ ಆಗಬೇಕು. ಈ ಹಿನ್ನೆಲೆ ಈಗಾಗಲೇ ಟೆಂಡರ್ ಕರೆಯಬೇಕಿತ್ತು. ಪ್ರಸ್ತುತ ಬೆಳವಣಿಗೆ ಗಮನಿಸಿದರೆ ಪಸಕ್ತ ಸಾಲಿನಲ್ಲಿ ಯೋಜನೆ ಆರಂಭಗೊಳ್ಳುವ ನಿರೀಕ್ಷೆ ಇಲ್ಲ ಎಂದು ಆರೋಪಿಸಿದರು.
ಕಳಸಾ - ಹರತಾಳ ಯೋಜನಾ ವೆಚ್ಚ 996 ಕೋಟಿ, ಬಂಡೂರಿ ಯೋಜನೆಯ ಯೋಜನೆ ವೆಚ್ಚ 745 ಕೋಟಿ ಸೇರಿ 1741 ಕೋಟಿ ರೂ. ಒಟ್ಟಾರೆ ಕಳಸಾ ಬಂಡೂರಿ ವಿಸ್ತೃತ ಯೋಜನಾ ವೆಚ್ಚವಾಗಿದೆ. ಈ ಮೊತ್ತದ ಯೋಜನೆ ಆರಂಭಗೊಳ್ಳಬೇಕಿದ್ದರೆ ಕಳಸಾ ಹರತಾಳ ಅರಣ್ಯದ ಟೈಗರ್ ಕಾರಿಡಾರ್ ಸ್ಥಳ ಬಗ್ಗೆ ಒಪ್ಪಿಗೆ ಪರವಾಣಿಗೆ ಪಡೆಯಬೇಕಾಗಿದೆ ಎಂದು ವಿರೇಶ ಸೊಬರದಮಠ ಹೇಳಿದರು.
ಶಾಶ್ವತ ಖರೀದಿ ಕೇಂದ್ರ:
ಶಾಶ್ವತ ಖರೀದಿ ಕೇಂದ್ರ ತೆರೆಯಬೇಕೆಂದು ಜಿಲ್ಲಾದ್ಯಂತ ಹೋರಾಟ ನಡೆಸಿದ್ದು, ಈ ಬಗ್ಗೆ ಕಾನೂನು ಹೋರಾಟ ನಡೆದಿರುತ್ತದೆ. ರಾಜ್ಯ ಸರ್ಕಾರ ವಿಳಂಬ ಮಾಡದೇ ಶಾಶ್ವತ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ತೆರೆಯಬೇಕು. ಕಡಲೆ ಮಾರಾಟಕ್ಕೆ ಮಿತಿ ಹೇರಬಾರದು. ಕಡಲೆ ಮಾರಾಟದ ನಂತರ ಹಣವನ್ನು ಬ್ಯಾಂಕಿನ ಸಾಲದ ಖಾತೆಗೆ ಜಮೆ ಮಾಡಬಾರದು. ಬೆಳೆ ಖರೀದಿಸಿದ ನಂತರ ಹಣವನ್ನು ಶೀಘ್ರವಾಗಿ ರೈತರ ಖಾತೆಗೆ ಪಾವತಿಸಬೇಕು ಎಂದು ಸೊಬರದಮಠ ಆಗ್ರಹಿಸಿದರು.
ವೀರಬಸಪ್ಪ ಹೂಗಾರ, ಅಂದಾನಗೌಡ ಪಾಟೀಲ, ಸಣ್ಣಫಕೀರಪ್ಪ ಜೋಗಣ್ಣವರ, ಮಂಜಯ್ಯ ಅರವಟಗಿಮಠ ಇತರರು ಇದ್ದರು.