ಗದಗ: ಕನ್ನಡ ಭಾಷೆಗೆ ಅಸ್ತಿತ್ವ ಇಲ್ಲದಂತಾಗುತ್ತದೆ: ಉಪನ್ಯಾಸಕ ಎಂ.ಎಸ್.ಯಾವಗಲ್

25 NRD-1A
Published on

ಗದಗ: ರಾಜಕೀಯವಾಗಿ ನಮ್ಮನ್ನು 200 ವರ್ಷಗಳ ಕಾಲ ಆಳಿರುವ ಬ್ರಿಟಿಷರ ಆಂಗ್ಲ ಭಾಷೆ ವ್ಯಾಮೋಹಕ್ಕೆ ಕನ್ನಡಿಗರೆಲ್ಲರೂ ಬಲಿಯಾಗುತ್ತಿರುವುದು ದುರ್ದೈವದ ಸಂಗತಿ. ಇದು ನಿರಂತರ ಮುಂದುವರೆದರೆ ಕರುನಾಡಿನಲ್ಲಿ ಕನ್ನಡಿಗರು, ಕನ್ನಡ ಭಾಷೆಗೆ ಅಸ್ತಿತ್ವ ಇಲ್ಲದಂತಾಗುತ್ತದೆ ಎಂದು ವಿಶ್ರಾಂತ ಉಪನ್ಯಾಸಕ ಪ್ರೋ. ಎಂ.ಎಸ್.ಯಾವಗಲ್ ವಿಷಾದ ವ್ಯಕ್ತಪಡಿಸಿದರು.

ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ಹಾಗೂ ಶ್ರೀದೊರೆಸ್ಚಾಮಿ ಜನಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾತೃ ಭಾಷಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಜನರ ಭಾಷೆಯಾದ ಕನ್ನಡವನ್ನು ದೇವ ಭಾಷೆಯನ್ನಾಗಿ ಮಾಡಿದ ಕೀರ್ತಿ 12ನೇ ಶತಮಾನದ ಬಸವಾದಿ ಶಿವಶರಣರಿಗೆ ಸಲ್ಲುತ್ತದೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮ ಪಾಲು ಎಂಬ ಮಹಾನ್ ಸಂದೇಶವನ್ನು ಜಗತ್ತಿಗೆ ಬಿತ್ತಿದ ವಿಶ್ವಗುರು ಬಸವಣ್ಣನವರಾಗಿದ್ದಾರೆ. ಜಗತ್ತಿನ ಶ್ರೇಷ್ಠ ಪ್ರತಿಭಾನ್ವಿತ ವ್ಯಕ್ತಿ ಹಾಗೂ ಇಡೀ ಭಾರತ ದೇಶವನ್ನಾಳಿ ಕನ್ನಡ ನಾಡಿನ ಸಂಸ್ಕøತಿಯನ್ನು ಭಾರತದಾಧ್ಯಂತ ಪಸರಿಸಿದ ಬದಾಮಿ ಚಾಲುಕ್ಯರ ದೊರೆ ಇಮ್ಮಡಿ ಪುಲಕೇಶಿ ಕನ್ನಡ ನಾಡಿನವರೆಂಬುದು ಹೆಮ್ಮೆಯ ಸಂಗತಿಯಾಗಿದೆ. ಪ್ರತಿಯೊಬ್ಬರೂ ಮಾತೃ ಭಾಷೆಯನ್ನು ಹೃದಯದಂತೆ ಪ್ರೀತಿಸಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಶಾಂತಲಿಂಗ ಶ್ರೀಗಳು ಮಾತನಾಡಿ, ಮಾನವನ ಬದುಕನ್ನು ಬದಲಿಸುವ ಶಕ್ತಿ ಮಾತೃ ಭಾಷೆಗಿದೆ. ಭಾಷೆಯ ಆಯ್ಕೆ ಭವಿಷ್ಯದ ಆಯ್ಕೆಯಾಗಿರಲಿ. ಭಾಷೆಯಿಂದ ಭವಿಷ್ಯವನ್ನು ಬೆಳಗಿಸಬಹುದು. ಕನ್ನಡ ಭಾಷೆ ಅಮೃತವಿದ್ದಂತೆ. ಮದ್ದು ಗುಂಡುಗಳಿಂತ ಬಲು ಶಕ್ತಿಶಾಲಿ ಎಂಬಂತೆ ಕನ್ನಡ ಭಾಷೆಗೆ ಅತ್ಯದ್ಬುತವಾದ ಶಕ್ತಿ ಇದೆ. ಇಂದಿನ ಯುವಪೀಳಿಗೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಂತಹ ಕಾರ್ಯ ಮಾಡಬೇಕಾಗಿದೆ. ಪ್ರತಿಯೊಬ್ಬ ಕನ್ನಡಿಗನಿಗೆ ಭಾಷೆಯ ಮೇಲೆ ಅಭಿಮಾನ ಬೆಳೆಯಬೇಕು. ಕನ್ನಡ ರಾಜ್ಯೋತ್ಸವದ ಆಚರಣೆ ಕೇವಲ ಆಚರಣೆಯಾಗಿರಬಾರದು. ಅದು ಒಂದು ನಾಡಹಬ್ಬದಂತೆ ಅತ್ಯಂತ ಅರ್ಥಪೂರ್ಣ ವಿಜೃಂಭನೆಯ ಆಚರಣೆಯಾಗಿರಬೇಕು ಎಂದು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಚೆನ್ನಬಸಪ್ಪ ಕಂಠಿ, ಪ್ರೋ ಆರ್.ಕೆ. ಐನಾಪೂರ, ಗಿರಿಯಪ್ಪಗೌಡ, ಖಾನಸಾಬ್ ಮಸೂತಿಮನಿ, ಮಹಾಂತೇಶ ಹಿರೇಮಠ, ಶೀತಲ್ ಪಟ್ಟಣಶೆಟ್ಟಿ, ಮಲ್ಲಯ್ಯ ಹೊಸಮಠ, ಶಶಿಧರ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net